ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ತೃತೀಯ ಬಿಎಸ್‍ಸಿ ವಿದ್ಯಾರ್ಥಿನಿ ಜೂನಿಯರ್ ಅಂಡರ್ ಆಫೀಸರ್ ಪ್ರಿಯಾ ಡಿ. ಅವರು ಜ.26ರಂದು ದೆಹಲಿಯ ರಾಜಪಥ್‍ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ಕಾಲೇಜಿನ ದ್ವಿತೀಯ ಬಿಎಸ್‍ಸಿ ವಿದ್ಯಾರ್ಥಿನಿ ಸಾರ್ಜಂಟ್ ಅಂಕಿತ ವಿ.ಕೆ. ಅವರು ಜ.27ರಂದು ದೆಹಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇಬ್ಬರು ಎನ್‍ಸಿಸಿ ಕೆಡೆಟ್‍ಗಳು ಅಕ್ಟೋಬರ್‍ನಿಂದ ಜನವರಿಯವರೆಗೆ ದೇಶದ ವಿವಿಧೆಡೆ ನಡೆದ ಎಂಟು ಪೂರ್ವ ಸಿದ್ಧತಾ ಸುತ್ತನ್ನು ಯಶಸ್ವಿಯಾಗಿ ಪೂರೈಸಿ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್‍ನ ಮಡಿಕೇರಿ ಬೆಟಾಲಿಯನ್‍ನ ಪ್ರತಿನಿಧಿಗಳಾಗಿ ಪ್ರಧಾನಿಯವರು ಭಾಗವಹಿಸುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಪ್ರಿಯಾ ಡಿ. ಅವರು ಕನ್ಯಾನ ನಿವಾಸಿ ನಿವೃತ್ತ ಸೇನಾನಿ ರಾಮ ಡಿ. ಮತ್ತು ಹೇಮಾ ಡಿ. ದಂಪತಿ ಪುತ್ರಿಯಾಗಿದ್ದಾರೆ. ಅಂಕಿತ ವಿ.ಕೆ. ಅವರು ಬಲ್ನಾಡು ನಿವಾಸಿ ಪೊಲೀಸ್ ಉದ್ಯೋಗಿ ಕೃಷ್ಣಪ್ಪ ಗೌಡ ಬಿ. ಮತ್ತು ಶಿಕ್ಷಕಿ ಹರಿಣಾಕ್ಷಿ ಎ. ದಂಪತಿ ಪುತ್ರಿಯಾಗಿದ್ದಾರೆ.
ಕಾಲೇಜಿನ ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ಅತುಲ್ ಶೆಣೈ ಅವರು ಈ ಕೆಡೆಟ್‍ಗಳಿಗೆ ವಿವಿಧ ಹಂತದಲ್ಲಿ ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.