ಸುಳ್ಯ: ಸಮಗ್ರ ಶಿಕ್ಷಣ ಕರ್ನಾಟಕ, ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ದೇವಚಳ್ಳ ಇದರ ಆಶ್ರಯದಲ್ಲಿ ಸ.ಹಿ.ಪ್ರಾ ಶಾಲೆ ಅಮರಪಡ್ನೂರು ಇಲ್ಲಿ ಉದ್ಘಾಟನೆಗೊಂಡ ಮಕ್ಕಳ ವಿಜ್ಞಾನ ಹಬ್ಬ 2019 ವಿಜ್ಞಾನದ ಬಗೆಗಿನ ಹಲವು ಕುತೂಹಲಗಳಿಗೆ ನೂರಾರು ಮಕ್ಕಳು ಸಾಕ್ಷಿಯಾದರು.
2 ದಿನಗಳು ನಡೆಯುವ ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ ನೀಡಿದ ತಾಲೂಕು ಪಂಚಾಯಿತ್ ಸದಸ್ಯ ರಾಧಾಕೃಷ್ಣ ಬೊಳ್ಳೂರು ಮಾತನಾಡಿ, ವಿಜ್ಞಾನ ಎನ್ನುವುದು ಜಗತ್ತಿನಲ್ಲಿ ವೇಗವಾಗಿ ಬೆಳೆಯುವ ಕ್ಷೇತ್ರ. ಈ ಕ್ಷೇತ್ರದ ಮೇಲೆ ಮಕ್ಕಳಿಗೆ ಅರಿವು ಮೂಡಿಸುವ ಸರಕಾರದ ಯೋಜನೆಗಳು ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ. ವಿಜ್ಞಾನ ಕ್ಷೇತ್ರ ಹೊಸತನವನ್ನು ಕಂಡುಕೊಳ್ಳುವ ಕ್ಷೇತ್ರ. ಮಕ್ಕಳಿಗೆ ತಿಳುವಳಿಗೆ ನೀಡುವ ಕೆಲಸ ಮಕ್ಕಳ ವಿಜ್ಞಾನ ಹಬ್ಬ ಮಾಡಿದೆ. ಸರಕಾರ ಹಲವು ರೀತಿಯಲ್ಲಿ ಸವಲತ್ತುಗಳನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಾ. ಸುಂದರ್ ಕೇನಾಜೆ ಮಾತನಾಡಿ, ಪ್ರಾಥಮಿಕ ಶಾಲಾ ಮಕ್ಕಳಿಗೆ ವಿಜ್ಞಾನದ ತಿಳುವಳಿಗೆ ಸಿಗಬೇಕು ಎನ್ನುವ ದೃಷ್ಟಿಯಿಂದ ಮಕ್ಕಳ ವಿಜ್ಞಾನ ಹಬ್ಬ ಆಯೋಜನೆ ಮಾಡಲಾಗಿದೆ. ವಿಜ್ಞಾನದ ಕುತೂಹಲಗಳ ಬಗ್ಗೆ ಮಕ್ಕಳು ಹೆಚ್ಚು ಹೆಚ್ಚು ಪ್ರಶ್ನೆ ಮಾಡುವ ಗುಣ ಇದ್ದರೆ ಅವರು ವೈಜ್ಞಾನಿಕವಾಗಿ ಬೆಳವಣಿಗೆ ಆಗುತ್ತಾರೆ, ಮಕ್ಕಳು ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಮರಮೂಡ್ನೂರು ಗ್ರಾ.ಪಂ ಅಧ್ಯಕ್ಷ ಸೀತಾ ಎಚ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಲಕ್ಷ್ಮೀಶ ಚೊಕ್ಕಾಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವೀಣಾ.ಎಂ.ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚಂದ್ರಮತಿ, ಗ್ರಾ.ಪಂ ಸದಸ್ಯರಾದ ಪುಪ್ಪಾವತಿ, ಶಿವಪ್ಪ ನಾಯ್ಕ, ಶಾಲಾ ಎಸ್.ಡಿಎಂ.ಸಿ ಅಧ್ಯಕ್ಷ ಈಶ್ವರ.ಕೆ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಗಣಪತಿ ಭಟ್, ಪ್ರಭಾರ ಮುಖ್ಯ ಶಿಕ್ಷಕ ಶಿವಕುಮಾರ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂತೋಷ್ ಉಪಸ್ಥಿತರಿದ್ದರು. 2 ದಿನಗಳು ನಡೆಯುವ ಮಕ್ಕಳ ವಿಜ್ಞಾನ ಹಬ್ಬಕ್ಕೆ ದೇವಚಳ್ಳ ಕ್ಲಸ್ಟರ್ ನ ಹಿರಿಯ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.