ದೇವರುಳಿಯದ ಅಣ್ಣತಂಗಿಗೆ ಸಹಾಯವೆಂಬ ದೇವರೊಲಿವನೇ ?

Advertisement

ಸುಬ್ರಹ್ಮಣ್ಯ: ಬಾಲ್ಯದಲ್ಲಿ ಹೆತ್ತವರನ್ನು ಕಳೆದುಕೊಂಡು ಈ ಎರಡು ಜೀವಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಅಪ್ಪ ಅಮ್ಮನನ್ನು ಕಳಕೊಂಡ ಅಣ್ಣ-ತಂಗಿಯರು ಕಳೆದ ಹತ್ತು ವರ್ಷಗಳಿಂದ ಸಂಕಷ್ಟದಲ್ಲಿದ್ದಾರೆ. ಹರಿಹರ ಪಳ್ಳತ್ತಡ್ಕ ಗ್ರಾಮದ ದೇವರುಳಿಯ ಎಂಬಲ್ಲಿಯ ಈ ಅಣ್ಣ ತಂಗಿಯ ಸಂಕಷ್ಟಕ್ಕೆ ಸಹಾಯ ಎಂಬ ದೇವರು ಒಲಿವನೇ ?

Advertisement

ಹರಿಹರ ಪಳ್ಳತ್ತಡ್ಕ ಗ್ರಾಮದ ದೇವರುಳಿಯ ಎಂಬಲ್ಲಿ ವಾಸವಿದ್ದ ಲಿಂಗಪ್ಪ-ಸುಂದರಿ ದಂಪತಿಗಳಿಗೆ ಇಬ್ಬರು ಮಕ್ಕಳು. ದಂಪತಿಗಳಿಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಬಂದ ಆದಾಯದಿಂದ ಸಂಸಾರ ನಡೆಸುತ್ತಿದ್ದರು. 2010 ರಲ್ಲಿ ಲಿಂಗಪ್ಪ ಅವರು ಅನಾರೋಗ್ಯದ ಮೂಲಕ ಸಾವನ್ನಪ್ಪಿದ್ದರು. ಪತಿ ಅಗಲಿಕೆ ನೋವಿಂದ ಹೊರಬರಲಾಗದಿದ್ದರೂ ಪತ್ನಿ ಸುಂದರಿ ಮಕ್ಕಳಿಬ್ಬರ ಮೊಗದಲ್ಲಿನ ನಗು ಕಂಡು ಸಂಸಾರದ ನೊಗ ಹೊರಲು ಸಿದ್ಧಳಾಗಿ ಕೂಲಿ ಮಾಡಿ ಸಾಕುವ ಜವಾಬ್ದಾರಿ ವಹಿಸಿಕೊಂಡರು. ಆದರೆ ವಿಧಿ ಅವರ ಮೇಲೂ ಕಣ್ಣಿಟ್ಟಿತು. ಕಾಯಿಲೆಗೆ ಬಲಿಯಾದ ಅವರು 2011 ರಲ್ಲಿ ಇಹಲೋಕ ತ್ಯಜಿಸಿದರು. ಬಳಿಕ ಮಕ್ಕಳಿಬ್ಬರು ತಬ್ಬಲಿಗಳಾದರು.
ಅಂದಿನಿಂದ ಇರಲು ಸರಿಯಾದ ಸೂರು ಇಲ್ಲದೆ ಅವರಿಬ್ಬರು ಮುರುಕಲು ಮನೆಯಲ್ಲಿ ವಾಸ ಮಾಡಲಾರಂಭಿಸಿದರು. ಪ್ಲಾಸ್ಟಿಕ್ ಹೊದಿಕೆಯ ಛಾವಣಿ, ಮುರುಕುಲು ಮನೆ, ಅದರ ಒಳಗೆ ವಯಸ್ಸಿಗೆ ಬಂದ ಹೆಣ್ಣು ಮಗಳು ಮತ್ತು ಯುವಕ ವಾಸವಿದ್ದಾರೆ.
ಈ ಬಡ ಕುಟುಂಬಕ್ಕೆ ಆಸ್ತಿ ಇಲ್ಲ. 94 ಸಿ ಯೋಜನೆಯಲ್ಲಿ ಹಕ್ಕು ಪತ್ರ ಸಿಕ್ಕಿದೆ. ಆದರೆ ಮೂಲಸೌಕರ್ಯ ದೊರಕಿಲ್ಲ. ವಿವಿಧ ಯೋಜನೆಯಲ್ಲಿ ಸೂರು ನಿರ್ಮಾಣಕ್ಕೆ ಅವಕಾಶಗಳಿವೆ. ಇವರಿಗೆ ಸೂಕ್ತ ಮಾರ್ಗದರ್ಶನ ನೀಡುವವರು ಯಾರೂ ಇಲ್ಲ. ಹೀಗಾಗಿ ಸರಕಾರದ ನಿವೇಶನ ಸಹಿತ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮನೆ ಶಿಥಿಲಗೊಂಡಿದೆ, ಮಳೆಗಾಳಿಗೆ ಭೀತಿಯಿಂದ ಅದರೊಳಗೆ ಕಳೆಯಬೇಕಿದೆ. ಹೊಸ ಮನೆ ನಿರ್ಮಿಸಬೇಕು. ಯಾವುದೇ ಯೋಜನೆಯಲ್ಲಿ ಫಲಾನುಭವಿಯಾಗಿ ಇವರನ್ನು ಆಯ್ಕೆ ಮಾಡಿಕೊಂಡರು ಕಾಮಗಾರಿ ಆರಂಭಿಸದೆ ಹಣ ಬಿಡುಗಡೆಗೊಳ್ಳದೆ ಇರುವ ನಿಯಮಗಳಿಂದ ಇವರಿಗೆ ಹಣ ಹೊಂದಿಸಲು ತೊಂದರೆ ಆಗಿದೆ.
ಕೇಶವ ಅವರು ಸುಬ್ರಹ್ಮಣ್ಯದಲ್ಲಿ ಖಾಸಗಿ ವಸತಿಗೃಹದಲ್ಲಿ ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಿದ್ದಾರೆ, ಪದ್ಮಾವತಿ ಸುಳ್ಯದಲ್ಲಿ ಖಾಸಗಿ ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನಿತ್ಯವೂ ನಲವತ್ತು ಕಿಮೀ ಕ್ರಮಿಸಿ ದುಡಿಯುತ್ತಿದ್ದಾರೆ. ಅದರಿಂದ ಬರುವ ಆದಾಯವು ಅಲ್ಪ.
ಕಳೆದ ಅನೇಕ ವರ್ಷಗಳಿಂದ ಈ ಸಂಕಷ್ಟ ಅನಭವಿಸುತ್ತಿದ್ದೇವೆ. ಮನೆ ಬೇಕೆಂದು ಸ್ಥಳೀಯ ಪಂಚಾಯತ್‍ಗೆ ಮನವಿ ಮಾಡಿದ್ದೇವೆ ಎಂದು ಕೇಶವ ದೇವರುಳಿಯ “ಸುಳ್ಯಸುದ್ದಿ.ಕಾಂ” ಗೆ ಹೇಳುತ್ತಾರೆ.
ಕುಟುಂಬಕ್ಕೆ ನಿವೇಶನ ಒದಗಿಸಲು ಸಿದ್ದವಿದ್ದೇವೆ. ಮುಂದಿನ ಕ್ರೀಯಾಯೋಜನೆ ಪಟ್ಟಿಯಲ್ಲಿ ಈ ಕುಟುಂಬವನ್ನು ಫಲಾನುಭವಿಯಾಗಿ ಆಯ್ಕೆ ಮಾಡಿಕೊಂಡು ಸೂರು ಒದಗಿಸುತ್ತೇವೆ ಎಂದು ಹರಿಹರ ಗ್ರಾ.ಪಂ. ಪಿಡಿಒ ಪದ್ಮನಾಭ ಪಳ್ಳಿಗದ್ದೆ “ಸುಳ್ಯಸುದ್ದಿ.ಕಾಂ” ಗೆ ತಿಳಿಸಿದ್ದಾರೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ದೇವರುಳಿಯದ ಅಣ್ಣತಂಗಿಗೆ ಸಹಾಯವೆಂಬ ದೇವರೊಲಿವನೇ ?"

Leave a comment

Your email address will not be published.


*