ನವದೆಹಲಿ: ದೇಶದಾದ್ಯಂತ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿತವಾಗುತ್ತಿದೆ, 2030ರ ವೇಳೆಗೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 21 ನಗರಗಳಲ್ಲಿ ಕುಡಿಯಲು ನೀರೇ ಸಿಗುವುದಿಲ್ಲ ಎಂದು ನೀತಿ ಆಯೋಗ ಇತ್ತೀಚಿಗೆ ವರದಿ ನೀಡಿದೆ. ಇದೀಗ ಲೋಕಸಭೆಗೆ ಜಲ ಶಕ್ತಿ ಸಚಿವ ರತ್ತನ್ ಲಾಲ್ ಕಟಾರಿಯಾ ಅವರು ನೀಡಿರುವ ಹೇಳಿಕೆ ಹೆಚ್ಚು ಕಳವಳಕಾರಿಯಾಗಿದೆ. ದೇಶದ ಶೇ. 52 ರಷ್ಟು ಬಾವಿಗಳಲ್ಲಿ ಅಂತರ್ಜಲ ಕುಸಿತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಒಟ್ಟು 353 ತಾಲೂಕುಗಳು ಅಥವಾ ಬ್ಲಾಕ್‌ಗಳಲ್ಲಿ ಒಂಬತ್ತನ್ನು ಅತಿಯಾದ ಅಂತರ್ಜಲ ಕುಸಿತ ಪ್ರದೇಶ ಎಂದು ವರ್ಗೀಕರಿಸಲಾಗಿದೆ. ಆದರೆ ಅತಿಯಾದ ಅಂತರ್ಜಲ ಕುಸಿತ ವಿಭಾಗದಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ತಾಲೂಕುಗಳಿದ್ದು, ಇಲ್ಲಿನ 358 ತಾಲೂಕುಗಳು ಅತಿ ಹಚ್ಚು ಅಂತರ್ಜಲ ಕುಸಿತ ಪ್ರದೇಶಗಳಾಗಿವೆ. ನಂತರದ ಸ್ಥಾನದಲ್ಲಿ ರಾಜಸ್ಥಾನ (164), ಉತ್ತರ ಪ್ರದೇಶ (113) ಮತ್ತು ಪಂಜಾಬ್ (105) ಇವೆ.
ಅಂತರ್ಜಲ ಹೊರತೆಗೆಯುವಿಕೆಯಿಂದಾಗಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂತರ್ಜಲ ಬಳಕೆಗೆ ಒಳಗಾದ ತಾಲೂಕುಗಳಿವೆ ಎಂದು ಲೋಕಸಭೆಯಲ್ಲಿ ಜಲಶಕ್ತಿ ರಾಜ್ಯ ಸಚಿವ ರತ್ತನ್ ಲಾಲ್ ಕಟಾರಿಯಾ ಗುರುವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಮೇಲ್ವಿಚಾರಣೆ ಮಾಡಲಾದ ಸುಮಾರು 52 ಶೇ ಬಾವಿಗಳ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಮೌಲ್ಯಮಾಪನ ಮಾಡಲಾದ 6,584 ತಾಲೂಕುಗಳಲ್ಲಿ 1,034 ಅತಿ ಹೆಚ್ಚು ಅಂತರ್ಜಲ ಕುಸಿತ ತಾಲೂಕುಗಳಾಗಿವೆ. ಇದರಲ್ಲಿ 53 ತಾಲೂಕು ಚಿಂತಾಜನಕ ಪರಿಸ್ಥಿತಿಯಲ್ಲಿವೆ, ಅರೆ-ಚಿಂತಾಜನಕ ಸ್ಥಿತಿಯಲ್ಲಿ 681 ತಾಲೂಕುಗಳಿವೆ, ಲವಣಯುಕ್ತ ವಿಭಾಗದಲ್ಲಿ 96, ಮತ್ತು ಸುರಕ್ಷಿತ ವಿಭಾಗದಲ್ಲಿ 4,520 ತಾಲೂಕುಗಳು ಇವೆ ಎಂದು ಸಚಿವರು ತಿಳಿಸಿದ್ದಾರೆ.
ಬೆಂಗಳೂರು, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ 2020ರ ವೇಳೆಗೆ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿಯಲಿದೆ. 2030ರ ವೇಳೆಗೆ ಇಲ್ಲಿ ಕುಡಿಯಲು ಅಥವಾ ಇನ್ನಿತರ ಕಾರ್ಯಕ್ಕೆ ನೀರೇ ಸಿಗುವುದಿಲ್ಲ ಎಂಬ ಆತಂಕಕಾರಿ ವರದಿಯನ್ನು ಇತ್ತೀಚಿಗೆ ನೀತಿ ಆಯೋಗ ನೀಡಿತ್ತು.
ಮಾಹಿತಿ ಸಹಕಾರ : www.news13.in