ದೈವಸ್ಥಾನದಲ್ಲಿ ಪ್ರಮಾಣ ಮಾಡಿದರೂ ಪರಿಹಾರ ಸಿಗದ “ಅಡ್ಡ ಮತದಾನ” ಪ್ರಕರಣ..!

May 2, 2019
11:01 PM

ಸುಳ್ಯ: ಸುಳ್ಯದ ಮಾತ್ರವಲ್ಲ ರಾಜ್ಯದ  ರಾಜಕೀಯ ವಲಯದಲ್ಲಿ ಇದು ಅತ್ಯಂತ ಮಹತ್ವ ಪಡೆದ ಸಂಗತಿ. ಅಡ್ಡ ಮತದಾನದ ಬಗ್ಗೆ ದೈವಸ್ಥಾನದ ಮುಂದೆ ಪ್ರಮಾಣ ಮಾಡಿದರೂ “ಅಡ್ಡ ಮತದಾನ” ಮಾಡಿದ್ದು ಯಾರು ಎಂದು ತಿಳಿಯಲಿಲ್ಲ.

Advertisement

ಇಂತಹದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾಯಿತು ಸುಳ್ಯದ ರಾಜಕೀಯ.

ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್‍ನ ಚುನಾವಣೆಯಲ್ಲಿ ಸುಳ್ಯ ತಾಲೂಕಿನ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಪ್ರತಿನಿಧಿಗಳಾಗಿ ಮತದಾನ ಮಾಡಿದ್ದ 17 ಜನರ ಪೈಕಿ 15 ಮಂದಿ ಕಾನತ್ತೂರು ನಾಲ್ವರ್ ದೈವಸ್ಥಾನದ ಸನ್ನಿಧಿಯಲ್ಲಿ `ತಾವು ಅಡ್ಡ ಮತದಾನ ಮಾಡಿಲ್ಲ‘ ಎಂದು ಪ್ರಮಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದೈವಸ್ಥಾನದಲ್ಲಿ ಪ್ರಮಾಣ ನಡೆದಿರುವುದನ್ನು ಬಿಜೆಪಿ ಮೂಲಗಳು ಖಚಿತ ಪಡಿಸಿವೆ.

ಸುಳ್ಯ ತಾಲೂಕಿನಿಂದ ಸ್ಪರ್ಧಿಸಿದ್ದ ಸಹಕಾರ ಭಾರತಿ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದ್ದ ಅಡ್ಡ ಮತದಾನ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಎಸ್‍ಸಿಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಅಭ್ಯರ್ಥಿಯಾಗಿ ವೆಂಕಟ್ ದಂಬೆಕೋಡಿ ಮತ್ತು ಎಂ.ಎನ್.ರಾಜೇಂದ್ರಕುಮಾರ್ ನೇತೃತ್ವದ ಸಹಕಾರ ಬಳಗದ ಅಭ್ಯರ್ಥಿಯಾಗಿ ಕೆ.ಎಸ್.ದೇವರಾಜ್ ಸ್ಪರ್ಧಿಸಿದ್ದರು. ಸುಳ್ಯ ತಾಲೂಕಿನ 23 ಸಹಕಾರ ಸಂಘಗಳ ಪ್ರತಿನಿಧಿಗಳು ಮತದಾರರಾಗಿದ್ದರು. ಇದರಲ್ಲಿ 17 ಸಂಘಗಳು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕೈಯಲ್ಲಿ ಮತ್ತು ಆರು ಸಂಘಗಳು ಕಾಂಗ್ರೆಸ್ ಕೈಯಲ್ಲಿತ್ತು. ಆದುದರಿಂದ ಚುನಾವಣೆಯಲ್ಲಿ ವೆಂಕಟ್ ದಂಬೆಕೋಡಿ ಗೆಲುವು ನಿಶ್ಚಿತ ಎಂದು ಹೇಳಲಾಗಿತ್ತು. ಆದರೆ ಚುನಾವಣಾ ಫಲಿತಾಂಶ ಬಂದಾಗ 13 ಮತ ಪಡೆದ ಕೆ.ಎಸ್.ದೇವರಾಜ್ ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾದರು. ಏಳು ಮಂದಿ ಬಿಜೆಪಿ ಬೆಂಬಲಿತರು ಅಡ್ಡಮತದಾನ ಮಾಡಿದ ಕಾರಣ ಕೇವಲ 10 ಮತ ಪಡೆದ ಸಹಕಾರ ಭಾರತಿ ಅಭ್ಯರ್ಥಿಗೆ ಸೋಲಾಯಿತು.

ಇದು ಸುಳ್ಯದ ಬಿಜೆಪಿ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಡ್ಡಮತದಾನ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಲೋಕಸಭಾ ಚುನಾವಣೆ ಮುಗಿದ ಮರುದಿನ ಅಡ್ಡಮತದಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ನಾಯಕರು ಹೇಳಿದ್ದರು. ಚುನಾವಣೆ ಮುಗಿದ ಬಳಿಕ ಬಿಜೆಪಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದರೂ ಪರಿಹಾರ ಸಿಗಲಿಲ್ಲ. ಕೊನೆಗೆ  ಬಳಿಕ ಎಲ್ಲರೂ ದೈವಸ್ಥಾನದಲ್ಲಿ ಪ್ರಮಾಣ ಮಾಡುವಂತೆ ಸೂಚಿಸಿದ್ದರು. 17 ಮಂದಿಯ ಪೈಕಿ 15 ಮಂದಿ ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಡ್ಡಮತದಾನ ಮಾಡಿದವರೂ ಪ್ರಮಾಣ ಮಾಡಿದರೆ.?

15 ಮಂದಿ ಪ್ರಮಾಣ ಮಾಡುವ ಮೂಲಕ ಪ್ರಕರಣದ ಜಿಜ್ಞಾಸೆ ಇನ್ನಷ್ಟು ಹೆಚ್ಚಿಸಿದೆ. ಏಳು ಅಡ್ಡ ಮತ ಬಿದ್ದಿರುವ ಕಾರಣ ಸಹಕಾರ ಭಾರತಿ ಅಭ್ಯರ್ಥಿಗೆ ಸೋಲಾಗಿರುವುದು ಖಚಿತವಾಗಿದ್ದರೂ, 15 ಮಂದಿ ಪ್ರಮಾಣಕ್ಕೆ ಬಂದಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ ಅಡ್ಡ ಮತದಾನ ಮಾಡಿದವರು ಯಾರು ಮತ್ತು ಅಡ್ಡ ಮತದಾನ ಮಾಡಿದವರೂ ಕೂಡ ಪ್ರಮಾಣ ಮಾಡಿದರೆ ಎಂಬ ಪ್ರಶ್ನೆ ಮತ್ತಷ್ಟು ಗಟ್ಟಿಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟು ಪಕ್ಷವು ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ, ತನಿಖೆ ಮುಂದುವರಿಸಿ ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಜರುಗಲಿಸಲಿದೆಯೇ ಅಥವಾ ಶಿಸ್ತು ಕ್ರಮ ಇಷ್ಟಕ್ಕೆ ಸೀಮಿತವೇ ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ಮುಂದಿಡುತ್ತಿದ್ದಾರೆ.

ಹೆಚ್ಚಿದ ಒತ್ತಡ : ಕ್ರಮ ಕೈಗೊಳ್ಳುವವರು ಯಾರು ? :

ಸಂಘಪರಿವಾರದ ಭದ್ರಕೋಟೆ, ಬಿಜೆಪಿಯ ಗೆಲುವಿನ ಹೆಬ್ಬಾಗಿಲಿನಲ್ಲಿ  ಇಂತಹದ್ದೊಂದು ಪ್ರಕರಣ ನಡೆದಿರುವುದು  ಈಗ ರಾಜ್ಯಮಟ್ಟದಲ್ಲೂ ಚರ್ಚೆಯಾಗುತ್ತಿದೆ.ಆದರೆ ಈಗ ಯಾರ ನಿಯಂತ್ರಣದಲ್ಲೂ ಈ ಪ್ರಕರಣ ಇಲ್ಲದೇ ಇರುವುದೂ ಸ್ಪಷ್ಟವಾಗಿದೆ. ಚುನಾವಣೆ ಕಳೆದ ದಿನಗಳು ಕಳೆದರೂ ಯಾವುದೇ ಪರಿಹಾರ, ಕ್ರಮವೂ ಆಗಿಲ್ಲ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಗುತ್ತಿಗಾರು ಭಾಗದ ವಾರ್ಡ್ ಒಂದರಲ್ಲಿ ಸಭೆ ನಡೆಸಿದ ಕಾರ್ಯಕರ್ತರು ಬಳಿಕ ಬಿಜೆಪಿ ಮಂಡಲ ಅಧ್ಯಕ್ಷರಿಗೆ ಪತ್ರ ಬರೆದು ತಕ್ಷಣವೇ ಕ್ರಮ ಕೈಗೊಳ್ಳದೇ ಇದ್ದರೆ ಸಾಮೂಹಿಕವಾಗಿ ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ. ಮೇ.10 ರವರೆಗೆ ಈ ಬಗ್ಗೆ ಗಡುವು ನೀಡಿದ್ದಾರೆ. ಈ ನಡುವೆ ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಸಭೆ ನಡೆಸಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದಾರೆ.  ಆದರೆ  ಈಗ ಕ್ರಮ ಕೈಗೊಳ್ಳುವವರು ಯಾರು ಎಂಬುದೇ ಪ್ರಶ್ನೆಯಾಗಿದೆ. ಸಹಕಾರ ಭಾರತಿಯೋ ? ಬಿಜೆಪಿಯೋ ಎಂಬುದು ಈಗ ಪ್ರಶ್ನೆಯಾಗಿದೆ. ಸಂಘಪರಿವಾರದ ಅಂಗಸಂಸ್ಥೆಯಾಗಿರುವ ಬಿಜೆಪಿ ಹಾಗೂ ಸಹಕಾರ ಭಾರತಿ ಪ್ರತ್ಯೇಕ ವಿಭಾಗಗಳು. ಬಿಜೆಪಿ ರಾಜಕೀಯವಾಗಿ ಬೆಳದರೆ ಸಹಕಾರ ಭಾರತಿ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ಈಗ ಯಾರು ಕ್ರಮ ಕೈಗೊಳ್ಳುತ್ತಾರೆ ? ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಪ್ರಶ್ನೆಯಾಗಿದೆ.

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ತಂತ್ರಜ್ಞಾನಗಳು ಪ್ರಯೋಗಾಲಯಗಳಿಂದ ಶೀಘ್ರವಾಗಿ ಕೃಷಿ ಭೂಮಿಗೆ ವರ್ಗಾವಣೆಯಾಗಬೇಕು
March 24, 2025
8:52 PM
by: ದ ರೂರಲ್ ಮಿರರ್.ಕಾಂ
ಮಲೆನಾಡು-ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಸಮಸ್ಯೆ ಎಲ್ಲಾಗುತ್ತಿದೆ…? | ಇಳುವರಿ ಕೊರೆತೆಯಾಗುತ್ತಿರುವುದು ಏಕೆ..? | ಏನು ಮಾಡಬಹುದು ಮುಂದೆ..?
March 19, 2025
11:23 AM
by: ಮಹೇಶ್ ಪುಚ್ಚಪ್ಪಾಡಿ
ಸೂಚನೆಯೇ ಇಲ್ಲದೆ ನಿನ್ನೆಯ ಮಳೆ ಸುರಿದದ್ದು ಹೇಗೆ..? | ಕರಾವಳಿ ಜಿಲ್ಲೆಯಲ್ಲಿ ಸುರಿದ ಬೇಸಿಗೆ ಮಳೆ ಎಷ್ಟು…? | ಮೊದಲ ಮಳೆ 100 ಮಿಮೀ ದಾಟಿತ್ತು…! |
March 13, 2025
11:58 AM
by: ದ ರೂರಲ್ ಮಿರರ್.ಕಾಂ
ಕೃಷಿ ಪಂಪ್‌ಸೆಟ್‌ಗೆ 7 ತಾಸು ವಿದ್ಯುತ್ ಪೂರೈಕೆಗೆ ರಾಜ್ಯ ಸರ್ಕಾರ ಬದ್ಧ | ಇಂಧನ ಸಚಿವ ಕೆ.ಜೆ. ಜಾರ್ಜ್
February 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror