ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಂಡಿದೆ. ಬಿಡುಗಡೆಯಾದ 14 ಮಂದಿಯೂ ಹೊಸ ಮುಖಗಳಾಗಿದ್ದು ಹೊಸ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ಆರು ವಾರ್ಡ್ ಗಳ ಅಭ್ಯರ್ಥಿ ಆಯ್ಕೆ ಬಾಕಿ ಉಳಿದಿದೆ.
ಈ ವಾರ್ಡ್ ಗಳಲ್ಲಿ ಅಭ್ಯರ್ಥಿ ಆಕಾಂಕ್ಷಿಗಳು ಹೆಚ್ಚು ಇರುವ ಕಾರಣ ಘೋಷಣೆಗೆ ಬಾಕಿ ಉಳಿದಿದೆ ಎನ್ನನಲಾಗುತ್ತಿದೆ. ನಗರ ಪಂಚಾಯತ್ ನಲ್ಲಿ ಸದಸ್ಯರಾಗಿದ್ದ ಇಬ್ಬರು ಹಿರಿಯರು ಮತ್ತೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇದು ಕೂಡ ಕೆಲವು ವಾರ್ಡ್ ಗಳಲ್ಲಿ ಅಭ್ಯರ್ಥಿ ಆಯ್ಕೆಗೆ ತೊಡಕಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಎಲ್ಲಾ ವಾರ್ಡ್ ಗಳಲ್ಲಿಯೂ ಹೊಸಬರನ್ನು ಕಣಕ್ಕಿಳಿಸುವುದು ಬಿಜೆಪಿಯ ಚುನಾವಣಾ ತಂತ್ರ. ಆದುದರಿಂದ ಸ್ಪರ್ಧಿಸಲು ಉತ್ಸುಕರಾಗಿರುವ ಮಾಜಿ ಸದಸ್ಯರುಗಳನ್ನು , ಮಾಜಿ ಅಧ್ಯಕ್ಷರನ್ನು ಓಲೈಕೆ ಮಾಡಿ ಸ್ಪರ್ಧಾ ಕಣದಿಂದ ಹಿಂದೆ ಸರಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಈಗ ಬಿಜೆಪಿ ಯು ಒತ್ತಡಕ್ಕೆ ಮಣಿಯುತ್ತಾ , ಇಲ್ಲವೋ ಎನ್ನುವುದು ಕುತೂಹಲ ಮೂಡಿಸಿದೆ.
ಎಂಟು ಮಂದಿ ಆಕಾಂಕ್ಷಿಗಳಿರುವ ಸಾಮಾನ್ಯ ಮಹಿಳಾ ವಾರ್ಡ್ ನಲ್ಲಿಯೂ ಅಭ್ಯರ್ಥಿ ಘೋಷಣೆ ಆಗಿಲ್ಲ. ಒಂದೆರಡು ಸುತ್ತಿನ ಮಾತುಕತೆ ನಡೆಸಿ ಮಂಗಳವಾರ ಸಂಜೆಯ ವೇಳೆಗೆ ಉಳಿದ ಅಭ್ಯರ್ಥಿಗಳ ಆಯ್ಕೆಯನ್ನೂ ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.
ವಾರ್ಡ್ ಸಂಖ್ಯೆ 2(ಕೊಯಿಕುಳಿ), 3(ಜಯನಗರ), 8(ಕುರುಂಜಿಭಾಗ), 9(ಭಸ್ಮಡ್ಕ), 10(ಕೇರ್ಪಳ),20(ಕಾನತ್ತಿಲ-ಜಟ್ಟಿಪಳ್ಳ) ವಾರ್ಡ್ ಗಳಲ್ಲಿ ಅಭ್ಯರ್ಥಿ ಘೋಷಣೆಗೆ ಬಾಕಿ ಉಳಿದಿದೆ.