ಸುಳ್ಯ: ತ್ಯಾಜ್ಯ ಹಾಕಲು ಸ್ಥಳವಿಲ್ಲ ಎಂದು ನಗರ ಪಂಚಾಯಿತಿ ಆವರಣದಲ್ಲಿಯೇ ತುಂಬಿಡಲಾಗಿದ್ದ ತ್ಯಾಜ್ಯವನ್ನು ತೆರವು ಮಾಡುವ ಕಾರ್ಯಾಚರಣೆ ಸ್ಥಗಿತಗೊಂಡಿದೆ. ನಗರ ಪಂಚಾಯತ್ ಮುಂಭಾಗದ ಕಟ್ಟದಿಂದ ಕೆಲವು ಲೋಡ್ ಕಸವನ್ನು ಲಾರಿಯಲ್ಲಿ ಸಾಗಾಟ ಮಾಡಲಾಗಿದ್ದರೂ ಎರಡು ದಿನಗಳ ಬಳಿಕ ಅದು ಸ್ಥಗಿತಗೊಂಡಿದೆ. ಈ ಮಧ್ಯೆ ಕೆಲವು ಲೋಡ್ ಕಸವನ್ನು ಜಯನಗರದ ಸ್ಮಶಾನದ ಆವರಣದ ಒಳಗಡೆ ರಾಶಿ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.
ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ನೇತೃತ್ವದಲ್ಲಿ ಸ್ಥಳೀಯರು ಜಮಾಯಿಸಿ ಕಸ ಹಾಕಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಮಶಾನದ ಸ್ಥಳದಲ್ಲಿ ಕಸ ಹಾಕಿ ಮಲಿನಗೊಳಿಸುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಸ್ಮಶಾನದ ಆವರಣದಿಂದ ಕಸವನ್ನು ಕೂಡಲೇ ತೆರವು ಮಾಡಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬಾಲಕೃಷ್ಣ ಭಟ್ ಹೇಳಿದರು. ಜಯನಗರದ ಸ್ಥಳೀಯರು ಕೆಲವರು ಶುಕ್ರವಾರ ಬೆಳಿಗ್ಗೆ ನಗರ ಪಂಚಾಯತ್ ಕಚೇರಿಗೆ ಆಗಮಿಸಿ ಸ್ಮಶಾನದ ಆವರಣದಲ್ಲಿ ಕಸ ಹಾಕಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕಸ ಹಾಕಿರುವುದು ವಿವಾದ ಆಗಿರುವ ಹಿನ್ನಲೆಯಲ್ಲಿ ನಗರ ಪಂಚಾಯತ್ ಸದಸ್ಯರು ಮತ್ತಿತರ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನಗರದ ಕಸವನ್ನು ನಗರ ಪಂಚಾಯಿತಿ ಮುಂಭಾಗದ ಕಟ್ಟಡದಲ್ಲಿ ತುಂಬಿಟ್ಟ ಕಾರಣ ನಗರ ಪಂಚಾಯಿತಿ ಪರಿಸರ ಅಕ್ಷರಷಃ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿತ್ತು. ನಗರ ಪಂಚಾಯಿತಿ ಆವರಣದಲ್ಲಿ ಕಸ ತುಂಬಿಡುವುದು ಭಾರೀ ವಿವಾದ ಸೃಷ್ಟಿಸಿದ ಹಿನ್ನಲೆಯಲ್ಲಿ ನಗರ ಪಂಚಾಯಿತಿ ಕಸ ವಿಲೇವಾರಿಗೆ ಮುಂದಾಗಿದೆ. ಲಾರಿಗಳಲ್ಲಿ ತುಂಬಿ ಕಸವನ್ನು ಬೇರೆಡೆಗೆ ಸಾಗಿಸಿ ವಿಲೇವಾರಿ ಮಾಡಲು ಆರಂಭಿಸಿತ್ತು. ಆದರೆ ಎರಡು ದಿನ ಸಾಗಾಟದ ಬಳಿಕ ಸ್ಥಗಿತಗೊಂಡಿದೆ.