ಸುಳ್ಯ: ವಿದೇಶಿ ಸಂಸ್ಕೃತಿಯ ಕೆಟ್ಟ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸುವುದು ಬೇಡ. ಆದರೆ ವಿದೇಶಿಯರ ಅಭಿವೃದ್ಧಿ ಚಿಂತನೆಯನ್ನು ಸ್ವೀಕರಿಸಬೇಕು. ನದಿಗಳ ಮತ್ತು ಜಲ ಮೂಲಗಳ ರಕ್ಷಣೆಗೆ ಯುರೂಪ್ ರಾಷ್ಟ್ರಗಳು ದೊಡ್ಡ ಮಾದರಿಯನ್ನು ಒದಗಿಸುತ್ತದೆ ಎಂದು ಸಾಹಿತಿ ಹಾಗು ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟಿದ್ದಾರೆ.
ಪಯಸ್ವಿನಿ ನದಿಯ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವ ದೃಷ್ಠಿಯಿಂದ ಪಯಸ್ವಿನಿ ಉತ್ಸವ ಸಮಿತಿಯ ನೇತೃತ್ವದಲ್ಲಿ ಪಯಸ್ವಿನಿ ತಟದ ರಾಘವೇಂದ್ರ ಮಠದಲ್ಲಿ ಹಮ್ಮಿಕೊಂಡ ಪಯಸ್ವಿನಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದೇಶದಲ್ಲಿ ನದಿಗಳು ಪರಿಶುದ್ಧವಾಗಿರುತ್ತದೆ. ನದಿಗಳನ್ನು ಹೇಗೆ ಬಳಸಬೇಕೋ ಆ ರೀತಿಯಲ್ಲಿ ಅವರು ಬಳಸುತ್ತಾರೆ. ಆದರೆ ನಮ್ಮ ದೇಶದಲ್ಲಿ ನದಿಗಳು ಡಂಪಿಂಗ್ ಯಾರ್ಡ್ ಆಗಿರುವುದು ದುರಂತ. ನದಿಗಳನ್ನು ಪೂಜಿಸುತ್ತೇವೆ ಆದರೆ ನದಿಗಳನ್ನು ಗೌರವಿಸಲು, ಪ್ರೀತಿಸಲು ಮರೆತಿದ್ದೇವೆ. ನದಿಗಳನ್ನು ಆರ್ಥಿಕ ಮೂಲದ ಸರಕಾಗಿ ನೋಡದೆ ನಮ್ಮ ಜೀವನದ ಭಾಗವಾಗಿ ಕಾಣಬೇಕು ನದಿಗಳಿಂದ ಸಂತೋಷವನ್ನು ಪಡೆಯುವಂತಾಗಬೇಕು ಎಂದರು. ನಾಗರಿಕತೆಯನ್ನು ಬೆಳೆಸಿದ್ದು ನದಿಗಳು. ನದಿಗಳು ನಾಶವಾದರೆ ಸಂಸ್ಕೃತಿ, ನಾಗರಿಕತೆ ನಾಶವಾದಂತೆ ಎಂದ ಅವರು ಜಿಡಿಪಿ ದೇಶದ ಅಭಿವೃದ್ಧಿಯ ಸಂಕೇತವಲ್ಲ, ನಾಡಿನ ನೆಲ, ಜಲಗಳ ರಕ್ಷಣೆಯಾದರೆ, ಶಾಲೆ, ರಸ್ತೆ ಅಭಿವೃದ್ಧಿಯಾದರೆ ಅದುವೇ ದೇಶದ ಅಭಿವೃದ್ಧಿಗೆ ಸಾಕ್ಷಿ ಎಂದರು. ಕೊಡಿಗಿನಲ್ಲಿ ಹುಟ್ಟಿ 87 ಕಿ.ಮಿ.ಹರಿದು ಎರಡು ರಾಜ್ಯಗಳ ಹತ್ತಾರು ಗ್ರಾಮಗಳ ಜೀವದಾಯಿನಿಯಾಗಿರುವ ಪಯಸ್ವಿನಿ ನದಿ ಇಂದು ಮಲಿನವಾಗಿ ನಾಶವಾಗುತಿದೆ. ಇದನ್ನು ರಕ್ಷಿಸಲು ತುರ್ತು ಕ್ರಮ ಅತ್ಯ ಎಂದರು.
ಪಯಸ್ವಿನಿಯ ರಕ್ಷಣೆಗೆ ಸಂಗಮ ಕ್ಷೇತ್ರದ ಸೃಷ್ಠಿ:
ಪಯಸ್ವಿನಿ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಯಲು ಬೃಹತ್ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಯಾಗಬೇಕು. ಮಲಿನ ನೀರು ಶುದ್ದೀಕರಣಕ್ಕೆ ಅಲ್ಲಲ್ಲಿ ಶುದ್ದೀಕರಣ ಘಟಕ ಸ್ಥಾಪನೆ ಮಾಡಬೇಕು. ವಾಹನಗಳನ್ನು ನದಿಯಲ್ಲಿ ತೊಳೆಯದಂತೆ ವಾಹನ ಚಾಲಕರಿಗೆ ಜಾಗೃತಿ ಮೂಡಿಸಬೇಕು, ಸ್ಪೋಟಕಗಳನ್ನು ಬಳಸಿ ಮೀನುಗಾರಿಕೆ ಮತ್ತು ಬಲೆ ಹಾಕಿ ಮೀನು ಹಿಡಿಯುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ನದಿಯಲ್ಲಿ ತುಂಬಿರುವ ಮರಳು ಮತ್ತು ಹೂಳನ್ನು ತೆಗೆಯಬೇಕು. ನದಿಯಲ್ಲಿ ನೀರಿನ ಹರಿವು ಉಳಿಸಲು ಮತ್ತು ಅಂತರ್ಜಲ ಹೆಚ್ಚಿಸಲು ನದಿಯಲ್ಲಿ 10 ಕಿ.ಮಿ. ದೂರಕ್ಕೆ ಒಂದರಂತೆ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಬೇಕು. ಅಲ್ಲದೆ ಪಯಸ್ವಿನಿ ನದಿಯಲ್ಲಿ ಚೆನ್ನಕೇಶವ ಮತ್ತು ಕಾಂತಮಂಗಲ ಸುಬ್ರಹ್ಮಣ್ಯ ದೇವರ ಜಳಕದ ಗುಂಡಿಯನ್ನು ಅಭಿವೃದ್ಧಿಪಡಿಸಿ ಪವಿತ್ರ ಸಂಗಮ ಕ್ಷೇತ್ರದ ಸೃಷ್ಠಿ ಮಾಡಿದರೆ ನದಿಯ ಪಾವಿತ್ರ್ಯತೆಯನ್ನು ಉಳಿಸಬಹುದು ಎಂದು ಡಾ.ಪ್ರಭಾಕರ ಶಿಶಿಲ ಸಲಹೆ ನೀಡಿದರು.
ಪಯಸ್ವಿನಿ ಉತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೃಂದಾವನ ಸೇವಾ ಟ್ರಸ್ಟ್‍ನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ರೋಟರಿ ಕ್ಲಬ್ ಅಧ್ಯಕ್ಷ ಡಾ.ಪುರುಷೋತ್ತಮ ಕೆ.ಜಿ, ಪ್ರಭಾಕರ ನಾಯರ್, ಜಯರಾಮ ಭಾರದ್ವಾಜ್, ಡಾ.ಸುಧಾಕರ, ಕೇಶವ ಮಾಸ್ತರ್, ಹರ್ಷಾ ಕರುಣಾಕರ, ದೇವಿಪ್ರಸಾದ್ ಜಿ.ಸಿ, ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪಯಸ್ವಿನಿ ಉತ್ಸವ ಸಮಿತಿಯ ಸಂಚಾಲಕ ಪ್ರಕಾಶ್ ಮೂಡಿತ್ತಾಯ ಸ್ವಾಗತಿಸಿ ಪ್ರಸ್ತಾವನೆಗೈದರು. ಮನಮೋಹನ ಪುತ್ತಿಲ ವಂದಿಸಿ ಶಶಿಧರ ಎಂ.ಜೆ.ಶಶಿಧರ ಕಾರ್ಯಕ್ರಮ ನಿರೂಪಿಸಿದರು.
ನದಿಯ ಅಭಿವೃದ್ಧಿಗೆ ಕ್ರಿಯಾ ಯೋಜನೆ:
ಪಯಸ್ವಿನಿ ನದಿಯ ಅಭಿವೃದ್ಧಿಗೆ ಮುಂದಿನ ಒಂದು ವರ್ಷದಲ್ಲಿ ಕೈಗೊಳ್ಳಬಹುದಾದ ಕಾರ್ಯ ಯೋಜನೆಗಳ ಬಗ್ಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವರ ನೀಡಿದರು. ರೋಟರಿ ಕ್ಲಬ್ ಸುಳ್ಯ, ಸೇಹ ಶಿಕ್ಷಣ ಸಂಸ್ಥೆ, ಶ್ರೀ ಗುರು ರಾಘವೇಂದ್ರ ಮಠ, ಭಾರದ್ವಾಜಾಶ್ರಮ ಅರಂಬೂರು, ದೀಪಾಂಜಲಿ ಮಹಿಳಾ ಮಂಡಲ, ಸುದ್ದಿ ಬಳಗ ನದೀ ಸಂರಕ್ಷಣೆಗೆ ತಮ್ಮ ಕಾರ್ಯ ಯೋಜನೆಗಳನ್ನು ಪ್ರಸ್ತುತಪಡಿಸಿದರು. ಪಯಸ್ವಿನಿ ಉತ್ಸವದ ಅಂಗವಾಗಿ ಪಯಸ್ವಿನಿ ನದಿಯ ಕುರಿತು ಮಾಹಿತಿ ಕಾರ್ಯಾಗಾರ, ಸಂವಾದ, ಪ್ರತಿಜ್ಞೆ, ನದಿ ಪೂಜೆ ನೆರವೇರಿತು.