ಸಂಪಾಜೆ : ಹೌದು, ನೀವು ಹೇಳ್ತೀರಿ , ನಿಜ. ನಮ್ಮ ಭೂಮಿ , ನಮ್ಮ ದನ ಕರುಗಳು , ನಮ್ಮ ನಾಯಿ ಬಿಟ್ಟು ನಾವು ಮಾತ್ರಾ ಎಲ್ಲಿಗೆ ಹೋಗುವುದು ಹೇಳಿ…?. ಅವನ್ನೆಲ್ಲಾ ಕರೆದುಕೊಂಡು ಹೋಗೋಣವೇ, ಬಿಟ್ಟು ಹೋಗವೇ…? ಹೀಗಂತ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ ಭೂಮಿಯ, ಕೃಷಿಯ ಜೊತೆಗಿನ ಒಟನಾಟವನ್ನು ಬಿಚ್ಚಿಡುತ್ತಾರೆ ಮೊಣ್ಣಂಗೇರಿಯ ಪಾರ್ವತಿ.
ಮೊಣ್ಣಂಗೇರಿಯ ವಿವಿಧ ಮನೆಗಳಿಗೆ “ಸುಳ್ಯನ್ಯೂಸ್.ಕಾಂ” ತಂಡ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾಗ ಕೇಳಿಬಂದ ಮಾತುಗಳು ಇದು. ಇದು ಪಾರ್ವತಿ ಅವರ ಒಬ್ಬರ ಮಾತಲ್ಲ. ಎಲ್ಲಾ ಮನೆಯಲ್ಲೂ ಇದೇ ಮಾತು. ಕಳೆದ ಅನೇಕ ವರ್ಷಗಳಿಂದ ಇಲ್ಲಿ ವಾಸವಿದ್ದು ಈಗ ಮಳೆ ಬರುವಾಗ ಹೋಗಿ ಎಂತ ಹೇಳುವುದು ಸುಲಭ ನಿಜ. ಜೀವ ಉಳಿಯಬೇಕು ನಿಜ. ಆದರೆ ನಾವು ಬೆವರು ಸುರಿದ ಬೆಳೆದ ಕೃಷಿ, ನಮ್ಮ ಪ್ರೀತಿಯ ದನ ಇದರ ಮೇಲೆ ಪ್ರೀತಿ ಇದೆ, ಹೀಗಾಗಿ ಸುಲಭವಾಗಿ ಎದ್ದುಬಿಡಿ ಅಂತ ಹೇಳಿದರೆ ಹೇಗೆ ಎನ್ನವುದು ಅವರ ಮಾತಿನ ಸಾರಾಂಶ.
ನಿಜ, ಮೊಣ್ಣಂಗೇರಿ ಪ್ರದೇಶದಲ್ಲಿ ಮೊದಲ ಮಳೆಗೇ ಭಯ ಶುರುವಾಗಿದೆ ಹೌದು. ಆದರೆ ಮೊಣ್ಣಂಗೇರಿ ಪ್ರದೇಶ ಸುಮಾರು 188 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಈ ಬಾರಿ ಸುಮಾರು 90 ಮನೆಗಳ ಸ್ಥಳಾಂತರ ಆಗಲೇಬೇಕು. ಆದರೆ ಅವರೆಲ್ಲರ ಪ್ರಶ್ನೆ, “ಎಲ್ಲಿಗೆ ಹೋಗುವುದು”.
ಕಳೆದ ವರ್ಷದ ಭಯಾನಕ ಸ್ಥಿತಿ ಮತ್ತೆ ಮರುಕಳಿಸಿದರೆ ? ಎಂಬ ಪ್ರಶ್ನೆಯ ಜೊತೆಗೇ ಮೊನ್ನೆಯಿಂದ ಭೂಮಿಯ ಅಡಿಯಲ್ಲಿ ಬೆಟ್ಟ ಗುಡ್ಡಗಳಿಂದ ಭಯಾನಕ ಶಬ್ದ ಕೇಳಿ ಬರುತ್ತಿತ್ತು ಎನ್ನುತ್ತಾರೆ ಮೊಣ್ಣಂಗೇರಿಯ ವಾರಿಜಾ ವೆಂಕಪ್ಪ. ನಮ್ಮದೆಲ್ಲವನ್ನೂ ಬಿಟ್ಟು ಮತ್ತೆ ಮನೆ ಬಿಟ್ಟು ಹೋಗಾಬೇಕಾದ ಸ್ಥಿತಿ ಬರಬಹುದು ಎಂಬ ಆತಂಕ ಇದೆ. ಆದರೆ ಹೋಗುವುದಾದರು ಎಲ್ಲಿಗೆ ಎಂಬ ಪ್ರಶ್ನೆ ಕಾಡುತಿದೆ ಎನ್ನುತ್ತಾರೆ ಅವರು.
ಹೌದು ದೂರದಲ್ಲಿ ಕುಳಿತಿರುವ ಎಲ್ಲರಿಗೂ ಒಂದೇ ವಾಕ್ಯ ,” ಎಲ್ಲಾ ಬಿಟ್ಟು ಬನ್ನಿ…” , ಆದರೆ ಅಲ್ಲಿ ಕುಳಿತಿರುವ ಮಂದಿಯ ಭಾವನೆಗೆ ಬೆಲೆ ಕಟ್ಟಲು ಸಾಧ್ಯವೇ ?.