ನಿದ್ರೆಗೆ ಜಾರಿದ ಶೈಕ್ಷಣಿಕ ಎಚ್ಚರ

Advertisement
Advertisement
Advertisement

ನಾನೀಗ ಟಿವಿ ನೋಡುತ್ತಿಲ್ಲ! ಆರೋಗ್ಯವಾಗಿದ್ದೇನೆ! ಸದ್ಯ ದಿನಪತ್ರಿಕೆಗಳನ್ನು ಓದುತ್ತೇನೆ. ಆ ಓದು ರದ್ದಾಗಲು ಹೆಚ್ಚು ದಿವಸ ಬೇಡ – ಈ ಮಾತುಗಳು ‘ನನ್ನನ್ನು ಸ್ಥಾಪಿಸಲು’ ಇರುವ ಟೂಲ್ಸ್ ಅಲ್ಲ ಎನ್ನುವ ಎಚ್ಚರವಿದೆ.

Advertisement

ಯಾವುದೇ ಒಂದು ಮಾಧ್ಯಮವು ಬದುಕಿಗೆ ಹತ್ತಿರವಾದಾಗ, ಬದುಕಲು ಮತ್ತು ಬದುಕಿಗೆ ಬೇಕಾದ ಒಳಸುರಿಗಳನ್ನು ನೀಡಿದಾಗ ಅದು ಸಾಮಾಜಿಕ ಸ್ವಾಸ್ಥ್ಯಕ್ಕೆ ತನ್ನ ಕೊಡುಗೆಯನ್ನು ನೀಡಿದಂತಾಗುತ್ತದೆ. ಈಗ ಮಾಧ್ಯಮಗಳ ಸ್ವಾಸ್ಥ್ಯ ಕಾಪಾಡುವುದೇ ದೊಡ್ಡ ಸಮಸ್ಯೆಯಾಗಿದೆ!

Advertisement

ಸಾರ್ವತ್ರಿಕವಾದ ಒಂದು ಭಾಷೆಯು ಸಮಾಜದಲ್ಲಿ ಸಂಚಲನವನ್ನುಂಟು ಮಾಡುತ್ತದೆ. ಅದು ಶಿಷ್ಟತೆಯ ವ್ಯಾಪ್ತಿಯಲ್ಲಿರಬೇಕೆನ್ನುವುದು ಸ್ವನಿಯಂತ್ರಣ. ಒಂದು ಕಾಲಘಟ್ಟದ ಜನಜೀವನದಲ್ಲಿ ಇಂತಹ ಸಾರ್ವಜನಿಕ ಶಿಷ್ಟತೆಯ ಭಾಷಾ ವಿನಿಮಯಗಳಿದ್ದುವು, ಭಾಷಾ ಪ್ರಯೋಗಗಳಿದ್ದುವು. ಖಾಸಗಿ ಮಾತುಕತೆಗಳಲ್ಲಿ ಶಿಷ್ಟತೆ ಭಂಗವಾದರೂ ಹತ್ತು ಜನ ಸೇರಿದಾಗ ಭಾಷಾ ಪ್ರಯೋಗಗಳು ಬಿಗಿಯಾಗುತ್ತವೆ. ಇದು ಆ ಕಾಲದ ಶೈಕ್ಷಣಿಕ ಎಚ್ಚರ.
ಅದನ್ನೇ ಈ ಕಾಲಕ್ಕೆ ಸಮೀಕರಿಸೋಣ. ‘ಶಿಷ್ಟ’ ಎನ್ನುವ ಪದ ಪದಕೋಶಕ್ಕೆ ಮಾತ್ರ ಸೀಮಿತ. ಎಷ್ಟು ಕೆಟ್ಟದಾಗಿ ಭಾಷಾ ಪ್ರಯೋಗ ಮಾಡಿದಷ್ಟೂ ಆಗ ಸುಭಗ ಮತ್ತು ಬುದ್ಧಿವಂತ. ಅದನ್ನು ಸಂಭ್ರಮಿಸುವ ಆತನ ಅನುಯಾಯಿಗಳು. ಆ ಸಂಭ್ರಮವನ್ನು ಹಬ್ಬಿಸುವ ತುಂಡರಸುಗಳು!

ವರನಟ ಕೀರ್ತಿಶೇಷ ರಾಜಕುಮಾರ್ ಅವರ ಸಿನಿಮಾವನ್ನೊಮ್ಮೆ ಮನಸ್ಸಿಗೆ ತೆಕ್ಕೊಳ್ಳಿ. ಅವರ ಸಿನಿಮಾಗಳಲ್ಲಿ ‘ಮೂರ್ಖ’ ಎನ್ನುವ ಪದಪ್ರಯೋಗ ಬಂದರೆ ಅದು ಗರಿಷ್ಠ ಬಯ್ಗಳು. ಬಯ್ಯುವುದಕ್ಕೂ ಶಿಷ್ಟ ಭಾಷೆಯ ಬಳಕೆಯನ್ನು ರಾಜಕುಮಾರ್ ಪಾಲಿಸಿದ್ದರು. ಅದು ಅವರ ಸಂಸ್ಕಾರ. ಈಗಿನ ಸಿನಿಮಾದ ಭಾಷೆಯ ಕುರಿತು ಪ್ರತ್ಯೇಕ ಉಲ್ಲೇಖಿಸಬೇಕಾಗಿಲ್ಲ. ಎಷ್ಟು ಕೆಟ್ಟದಾಗಿ, ಅಸಹ್ಯವಾಗಿ ಮತ್ತು ಹೊಸ ಹೊಸ ಶಬ್ದಗಳನ್ನು ಟಂಕಿಸುವುದು ಖಯಾಲಿಯಾಗಿದೆ.

Advertisement
Advertisement

ಭಾಷೆ, ಸಂಸ್ಕಾರ ಎನ್ನುವುದರ ಅಡಿಗಟ್ಟು ಶಿಕ್ಷಣ. ಉರುಹೊಡೆದು ನೂರಕ್ಕೆ ನೂರು ಅಂಕ ಪಡೆಯುವುದು ಶಿಕ್ಷಣವಲ್ಲ. ಪ್ರಾಥಮಿಕ, ಪ್ರೌಢ ಹಂತದ ಶಿಕ್ಷಣಗಳಲ್ಲಿ ಬದುಕಿನ ಸಂಸ್ಕಾರಗಳ, ನೀತಿಯ ಪಾಠಗಳನ್ನು ಓದಿ, ಮನನಿಸಿ ಅದರ ತಳಹದಿಯಲ್ಲಿ ಬದುಕನ್ನು ಕಟ್ಟಿದ ಹಿರಿಯರು ಕಣ್ಮುಂದೆ ಇದ್ದಾರೆ. ಆದರೆ ಇಂದು ಸಂಸ್ಕಾರ, ನೀತಿಗಳ ಅರ್ಥಗಳ ಗಾಢತೆಯು ಶುಷ್ಕವಾಗಿದೆ. ಇದನ್ನು ಶುಷ್ಕ ಮಾಡಿದ ಪಾಪಕ್ಕೆ ಕೇವಲ ಸರಕಾರ ಮಾತ್ರವಲ್ಲ ನಾವೆಲ್ಲರೂ ಒಳಗಾಗಲೇ ಬೇಕು.

ಮಾಧ್ಯಮಗಳನ್ನು ಜನ ನಂಬುತ್ತಾರೆ. ಅದರಲ್ಲಿ ಬರುವ ಸುಳ್ಳುಗಳನ್ನೂ ನಂಬುತ್ತಾರೆ. ಊಹೆಗಳನ್ನೂ ನಂಬುತ್ತಾರೆ. ಜನರು ನಂಬುತ್ತಾರೆಂದು ಏನೇನೋ ಪ್ರಸಾರ ಮಾಡುವುದು ಬೌದ್ಧಿಕ ದಾರಿದ್ರ್ಯ. ವಾಹಿನಿಗಳ ಸುದ್ದಿಗಳನ್ನೋ, ಜಾಹೀರಾತುಗಳನ್ನೋ ಗಮನಿಸಿ. ಸುಳ್ಳುಗಳ ಸರಮಾಲೆ! ಕೆಟ್ಟ ಕೆಟ್ಟ ಶಬ್ದಗಳ ಪ್ರಯೋಗ. ವೈಯಕ್ತಿಕ ವಿಚಾರಗಳತ್ತ ಆಸಕ್ತಿ.
ಈಗ ಚುನಾವಣೆಯ ಕಾವು ದೇಶದೆಲ್ಲೆಡೆ ಹಬ್ಬುತ್ತಿದೆ. ತಂತಮ್ಮ ಪಕ್ಷಗಳ ಸಾಧನೆಯನ್ನು ಬಿಂಬಿಸುವುದರ ಹೊರತಾದ ‘ಶಿಷ್ಟತೆ’ಯನ್ನು ಮರೆತ ಭಾಷಾಪ್ರಯೋಗವನ್ನು ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ನೋಡುತ್ತೇವೆ. ಎಲ್ಲೋ ಒಂದು ಸಭೆಯಲ್ಲೋ, ರ್ಯಾಲಿಯಲ್ಲೋ ಆಡಿದ ಮಾತು ಇಡೀ ದೇಶಕ್ಕೆ ಸಂಬಂಧಿಸಿದ್ದು ಎನ್ನುವ ರೀತಿಯಲ್ಲಿ ಬಿಂಬಿಸುವುದನ್ನು ನೋಡಿದರೆ ಮಾಧ್ಯಮ ಜಗತ್ತು ಎತ್ತ ಸಾಗುತ್ತಿದೆ? ಆರ್ಥವಾಗುತ್ತಿಲ್ಲ.
ಪಕ್ಷ ಯಾವುದೇ ಇರಲಿ. ದೇಶದ ಪ್ರಧಾನಿಯನ್ನು ಕೊಲ್ಲುತ್ತೇನೆಂದು ಓರ್ವ ಘೋಷಣೆಯನ್ನು ಮಾಡಿದಾಗ ಅದನ್ನು ಪ್ರತಿಭಟಿಸುವ (ಪಕ್ಷಬೇಧ ಮರೆತು) ಬಾಯಿಗಳು ಮೌನವಾಗಿವೆ. ಸಂಭ್ರಮಿಸುವ ಮನಸ್ಸುಗಳು ನೂರಾರಿವೆ. ಪ್ರಧಾನಿಯಲ್ಲ, ದೇಶದ ಯಾವ ನಾಗರಿಕನ್ನೂ ಓರ್ವ ‘ಕೊಲ್ಲುತ್ತೇನೆ’ ಎನ್ನುವುದೇ ಅಪರಾಧ. ಇದಕ್ಕೆ ಯಾವ ಸಾಕ್ಷಿಗಳು ಬೇಕಾಗಿಲ್ಲ. ಆತನ ಮಾತೇ ಸಾಕ್ಷಿಯಾಗುತ್ತದೆ.

Advertisement

ಹಾಗಾದರೆ ‘ಶಿಷ್ಟತೆ’ ಎನ್ನುವುದು ಭಾರತಕ್ಕೆ ಮರೀಚಿಕೆಯೇ? ಶಿಷ್ಟತೆ ಎಂದಾಗ ಅದಕ್ಕೆ ‘ಎಡ-ಬಲ’ಗಳನ್ನು ಥಳುಕು ಹಾಕಬೇಕಾಗಿಲ್ಲ. ಶಿಕ್ಷಣದಿಂದ ‘ಶಿಷ್ಟ’ ಭಾಷೆ, ಬದುಕು, ಸಂಸ್ಕಾರಗಳು ನಮ್ಮದಾಗಬಹುದೆನ್ನುವ ಭ್ರಮೆ ನನಗಿಲ್ಲ. ಹಾಗಾದರೆ ಇದನ್ನು ಮರುಸ್ಥಾಪಿಸಲು ಜಾಗ ಎಲ್ಲಿ? ಮಾಧ್ಯಮಗಳಿಂದ ಸಾಮಾಜಿಕ ಸ್ವಾಸ್ಥ್ಯ ಸಿಗಹುದೆನ್ನುವ ನಿರೀಕ್ಷೆಯಿಲ್ಲ. ಆ ಆಶೆ ಎಂದೋ ಸತ್ತು ಹೋಗಿವೆ! ‘ಶೈಕ್ಷಣಿಕ ಎಚ್ಚರ’ವು ಪೂರ್ತಿಯಾಗಿ ನಿದ್ರೆಗೆ ಜಾರಿಗೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನಿದ್ರೆಗೆ ಜಾರಿದ ಶೈಕ್ಷಣಿಕ ಎಚ್ಚರ"

Leave a comment

Your email address will not be published.


*