`ನಿಸರ್ಗದತ್ತ ಆಹಾರ’ ಗಮನ ಸೆಳೆಯುತಿದೆ ವಿದ್ಯಾರ್ಥಿನಿಯ ಪುಸ್ತಕ

May 3, 2019
7:00 AM

ಸುಳ್ಯ: ಹಿಂದಿನ ಕಾಲದಲ್ಲಿ ಪಾರಂಪರಿಕ ಪ್ರಕೃತಿ ದತ್ತವಾದ ಆಹಾರವನ್ನು ಸೇವಿಸುತ್ತಿದ್ದ ಹಿರಿಯರು ಉತ್ತಮ ಆರೋಗ್ಯವನ್ನು ಪಡೆದು ರೋಗಗಳಿಂದ ದೂರ ಉಳಿದಿದ್ದರು. ಆದರೆ ಆಧುನಿಕ ಯುಗದಲ್ಲಿ ಫಾಸ್ಟ್ ಫುಡ್ ಸಂಸ್ಕೃತಿಯನ್ನು ನೆಚ್ಚಿಕೊಂಡಿರುವ ಹೊಸ ತಲಮಾರು ಪ್ರಕೃತಿ ದತ್ತ ಆಹಾರದಿಂದ ದೂರ ಸರಿದಿದ್ದಾರೆ. ಆದುದರಿಂದಲೇ ಮನುಷ್ಯ ಶರೀರವು ದಿನದಿಂದ ದಿನಕ್ಕೆ ರೋಗದ ದಾಸರಾಗಿದೆ. ಇಂತಹಾ ಸಂದರ್ಭದಲ್ಲಿ ಪಾರಂಪರಿಕ ಆಹಾರ ಪದ್ದತಿಯನ್ನು ಪರಿಚಸಲು ವಿದ್ಯಾರ್ಥಿನಿ ಸುಕನ್ಯಾ ಕೆ.ಎಸ್. ರಚಿಸಿದ `ನಿಸರ್ಗದತ್ತ ಆಹಾರ’ ಪುಸ್ತಕ ಗಮನ ಸೆಳೆಯುತಿದೆ.

Advertisement

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಕೃಷಿಕ ಶ್ರೀನಿವಾಸ ಉಬರಡ್ಕ ಅವರ ಪುತ್ರಿ ಸುಕನ್ಯಾ ಮಂಗಳೂರು ವಿವಿಯಲ್ಲಿ ಸಸ್ಯಶಾಸ್ತ್ರ ವಿಭಾಗದ ಎರಡನೇ ವರ್ಷದ ಎಂಎಸ್ಸಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ. ಚಿಕ್ಕಂದಿಂದಲೇ ಪ್ರಕೃತಿಯಿಂದ ಮತ್ತು ಹಿರಿಯರಿಂದ ತಾನು ಪಡೆದ ಆಹಾರ ಸಸ್ಯಗಳ ಕುರಿತಾದ ಅಪೂರ್ವ ಮಾಹಿತಿಯನ್ನು ಅಕ್ಷರ ರೂಪಕ್ಕಿಳಿಸಿ ಪುಸ್ತಕವನ್ನು ಹೊರ ತಂದಿದ್ದಾರೆ. ಮಗಳ ಆಸಕ್ತಿಗೆ ಸಾಥ್ ನೀಡಿರುವ ಶ್ರೀನಿವಾಸ ಉಬರಡ್ಕ ಪ್ರಕಾಶಕರಾಗಿರುವ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ.

157 ಆಹಾರ ಸಸ್ಯಗಳ ಪಟ್ಟಿ:
ಪುಸ್ತಕದಲ್ಲಿ 157 ಆಹಾರ ಸಸ್ಯಗಳ ಪಟ್ಟಿಯನ್ನು ತಯಾರಿಸಲಾಗಿದೆ. ಅದರ ಕನ್ನಡ ಹೆಸರು, ತುಳು ಮತ್ತು ಮಲಯಾಳ ಹೆಸರುಗಳನ್ನು ನಮೂದಿಸಲಾಗಿದೆ. ಪ್ರತಿ ಸಸ್ಯದ ವೈಜ್ಞಾನಿಕ ಹೆಸರು, ಪ್ರಭೇದ ಅಥವಾ ಕುಟುಂಬವನ್ನು ತಿಳಿಸಲಾಗಿದೆ. ಗಿಡ, ಪೊದರು, ಬಳ್ಳಿ, ಮರ ಇವುಗಳಲ್ಲಿ ಪ್ರಸ್ತುತ ಗಿಡ ಯಾವುದರಲ್ಲಿ ಸೇರಿದೆ, ನೆಟ್ಟು ಬೆಳೆಸುವುದಾ ಅಥವಾ ಕಾಡಿನಲ್ಲಿ ಇರುವುದಾ ಎಂದು ವಿಂಗಡಿಲಾಗಿದೆ. ಅದರಿಂದ ತಯಾರಿಸಬಹುದಾದ ಆಹಾರ ಮತ್ತು ಆ ಪ್ರಸ್ತುತ ಗಿಡದಲ್ಲಿನ ಔಷಧೀಯ ಗುಣವನ್ನು ಸರಳವಾಗಿ ವಿವರಿಸಲಾಗಿದೆ. ಪ್ರತಿಯೊಂದು ಗಿಡದ ಆಹಾರವೂ ಮನುಷ್ಯನ ದೇಹದಲ್ಲಿ ಯಾವ ರೀತಿ ಶಕ್ತಿವರ್ಧಕ, ಪೋಷಕಾಂಶ, ವಿವಿಧ ರೋಗಗಳ ಪ್ರತಿರೋಧಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಲಾಗಿದೆ.

ಆಹಾರ ಸಸ್ಯಗಳಲ್ಲಿ ಹಲವು ವಿಧಗಳು:
ಪುಸ್ತಕದಲ್ಲಿ ಆಹಾರ ಸಸ್ಯಗಳನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಪ್ರಮುಖವಾದುದು ಹಸಿರು ಸೊಪ್ಪುಗಳು. ಅನೇಕ ರೀತಿಯ ಪೋಷಕಾಂಶಗಳು, ಖನಿಜಾಂಶಗಳು ಇವರುವುದರಿಂದ ರಕ್ತ ಶುದ್ದಿಗೆ, ರಕ್ತ ಪ್ರಮಾಣ ಹೆಚ್ಚಿಸಲು ಸಹಕಾರಿಯಾಗಿದೆ. ಚಿಗುರು, ಎಲೆ. ಗಿಡ ಹೀಗೆ ನಾನಾ ರೀತಿಯಲ್ಲಿ ಬಳಸಲಾಗುತ್ತದೆ. ಹಸಿರು ಸೊಪ್ಪುಗಳನ್ನು ಬಳಸಿ ತಯಾರು ಮಾಡಬಹುದಾದ ಆಹಾರ ಮತ್ತು ಇದನ್ನು ಮಾಡುವ ವಿಧಾನಗಳನ್ನು ವಿವರಿಸಲಾಗಿದೆ. ಇನ್ನೊಂದು ವಿಭಾಗ ಗೆಡ್ಡೆ ಗೆಣಸುಗಳು. ಸಿಹಿ ಗೆಣಸು, ಮರಗೆಣಸು, ಅಡ್ಡಗೆಣಸು, ಸೊಣ ಗೆಣಸು, ನರೆ, ಕೆಸರು ಮುಂಡಿ, ಹಾಲು ಮುಂಡಿ, ಕೆಸು, ಸುವರ್ಣ ಗೆಡ್ಡೆ ಹೀಗೆ ಹತ್ತಾರು ಗೆಡ್ಡೆ ಗೆಣಸು ಮತ್ತು ಅದರ ಉಪಯೋಗವನ್ನು ವಿವರಿಸಲಾಗಿದೆ. ಕಾಡು ಕಾಯಿ ಹಣ್ಣುಗಳು, ಹೂವು ಮೊಗ್ಗುಗಳು, ಕಾಂಡ ತೊಗಡೆಗಳು, ಬೀಜ ಹಾಗು ಹಣ್ಣಿನ ಮತ್ತು ತರಕಾರಿ ಸಿಪ್ಪೆಗಳು ಇವುಗಳನ್ನು ಆಹಾರದಲ್ಲಿ ಬಳಸಬಹುದಾದ ರೀತಿಯನ್ನು ವಿವರಿಸಲಾಗಿದೆ. ಸಸ್ಯಗಳನ್ನು ಆಹಾರವಾಗಿ ಬಳಸುವುದರ ಜೊತೆಗೆ ಪಾನಕ, ಆಹಾರ ಸೇವಿಸಲು ಬಳಕೆ ಸೇರಿದಂತೆ ಇತರ ಉಪಯೋಗಗಳನ್ನೂ ತಿಳಿಸುತ್ತದೆ. ಆಹಾರ ಪದಾರ್ಥವಾಗಿ ಬಳಸುವ ವಸ್ತುಗಳ ಚಿತ್ರಗಳು ಪುಸ್ತಕದ ಅಂದವನ್ನು ಹೆಚ್ಚಿಸಿದೆ.

ಆಹಾರ ಪದಾರ್ಥಗಳ ಸಂರಕ್ಷಣೆಗೂ ಉಪಾಯ:
ಹಿರಿಯರು ಪ್ರಕೃತಿಯಿಂದ ದೊರೆಯುವ ಆಹಾರ ಪದಾರ್ಥಗಳನ್ನು ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸುವ ವಿಧಾನಗಳನ್ನು ಅನುಸರಿಸುತ್ತಿದ್ದರು. ಕೆಲವೊಂದು ಆಹಾರಗಳನ್ನು ನಿರ್ದಿಷ್ಟ ತಿಂಗಳಲ್ಲಿ ಅದರ ರುಚಿಯನ್ನು ಸವಿಯಲು ಮತ್ತು ಉಪಯೋಗಿಸಲು ಕೆಲವು ಉಪಾಯಗಳನ್ನು ಕಂಡು ಹುಡುಕಿದ್ದರು. ವಿವಿಧ ಆಹಾರ ಪದಾರ್ಥಗಳು ಕೆಡದಂತೆ ಸಂರಕ್ಷಿಸುವ ವಿಧಾನಗಳನ್ನೂ ಪುಸ್ತಕ ವಿವರಿಸುತ್ತದೆ. ಅಲ್ಲದೆ ದಿನ ನಿತ್ಯದ ಅಗತ್ಯಕ್ಕೆ ಬಳಸುವ ಉಪ್ಪಿನಕಾಯಿ, ಪಾಯಸ, ಹಲ್ವ, ಕಲಸು, ಪೋಡಿ, ಪಕೋಡ ಸೇರಿ ಹತ್ತಾರು ಆಹಾರ ತಯಾರಿಕೆಗೆ ಬಳಸುವ ವಸ್ತುಗಳನ್ನು ಮತ್ತು ತಯಾರು ಮಾಡುವ ವಿಧಾನಗಳು ಪುಸ್ತಕದ ಹೈಲೈಟ್ಸ್.

ಶಾಲಾ ಮಟ್ಟದಲ್ಲಿಯೇ ಆಸಕ್ತಿ:
ತನ್ನ ಮನೆಯ ಹಿರಿಯರಿಂದ ಬಳುವಳಿಯಾಗಿ ಬಂದ ಆಹಾರ ವಸ್ತುಗಳ ಬಗ್ಗೆ ಚಿಕ್ಕಂದಿನಿಂದಲೇ ಸುಕನ್ಯ ಆಸಕ್ತಿಯಿಂದ ಅಧ್ಯಯನ ನಡೆಸುತ್ತಿದ್ದರು. ಗಿಡಗಳನ್ನು ನೆಟ್ಟು ಬೆಳೆಸಿ ಅದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಆಸಕ್ತಿಗೆ ತಾನು ಕಲಿತ ಸುಳ್ಯದ ಸ್ನೇಹ ಶಾಲೆ ಮತ್ತು ವಿವೇಕಾನಂದ ಕಾಲೇಜಿನ `ನೇಚರ್ ಕ್ಲಬ್’ ಇನ್ನಷ್ಟು ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿತು. ಚಿಕ್ಕಂದಿನ ಅಭಿರುಚಿ ಹವ್ಯಾಸವಾಗಿ ಬೆಳೆದು ಪದವಿಯಲ್ಲಿ ಜೀವಶಾಸ್ತ್ರ ಅಧ್ಯಯನ ಆಯ್ಕೆ ಮಾಡಿ ಆಳವಾದ ಅಧ್ಯಯನ ನಡೆಸಿದ ಇವರು ರಾಷ್ಟ್ರೀಯ ಸಮ್ಮೇಳನದಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಕಿರು ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಹಲವು ಸಸ್ಯಶಾಸ್ತ್ರ, ಪರಿಸರ ಕುರಿತ ಕಾರ್ಯಾಗಾರ, ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ನಿವೃತ್ತ ಸಸ್ಯಶಾಸ್ತ್ರ ಉಪನ್ಯಾಸಕ ಪ್ರೊ.ದೇವಿಪ್ರಸಾದ್ ಅವರ ಮಾರ್ಗದರ್ಶನ ಮತ್ತು ಸಲಹೆಯ ಮೇರೆಗೆ ಮತ್ತು ತಾನು ಕಲಿಯುವ ಕಾಲೇಜು ಮತ್ತು ಹೆತ್ತವರ ಪ್ರೋತ್ಸಾಹದಿಂದ ತಿಳಿದುಕೊಂಡ ಸಸ್ಯಜ್ಞಾನವನ್ನು ಪುಸ್ತಕ ರೂಪದಲ್ಲಿ ಹೊರ ತರಲು ಸಾಧ್ಯವಾಯಿತು. ತಾನು ಚಿಕ್ಕಂದಿನಿಂದಲೇ ತಿಳಿದುಕೊಂಡ ಆಹಾರ ಸಸ್ಯಗಳ ಬಗ್ಗೆ ಪುಸ್ತಕದಲ್ಲಿ ದಾಖಲಿಸಲಾಗಿದೆ. ಇನ್ನಷ್ಟು ಆಹಾರ ಸಸ್ಯಗಳ ಬಗ್ಗೆ ಮತ್ತು ಅವುಗಳ ಉಪಯೋಗದ ಬಗ್ಗೆ ಅಧ್ಯಯನ ನಡೆಸುವ ಆಸಕ್ತಿ ಇದೆ ಎನ್ನುತ್ತಾರೆ ಸುಕನ್ಯಾ.ಕೆ.ಎಸ್.

ಸುಕನ್ಯಾ

ಆಹಾರ ಸಸ್ಯಗಳು ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಇಂದು ಹಲವು ಆಹಾರ ಸಸ್ಯಗಳು ಜನ ಮಾನಸದಿಂದ ಮರೆಯಾಗುತಿದೆ. ನಮ್ಮ ಕುಟುಂಬದ ಹಿರಿಯರು ಹಲವು ಸಸ್ಯಗಳನ್ನು ಆಹಾರವಾಗಿ ಬಳಸುತ್ತಿದ್ದರು. ಆ ಸಸ್ಯಗಳ ಬಗ್ಗೆ ಸುಕನ್ಯಾ ಚಿಕ್ಕಂದಿನಿಂದಲೇ ಆಸಕ್ತಿಯಿಂದ ಅಧ್ಯಯನ ನಡೆಸುತ್ತಿದ್ದಳು. ಅವಳು ಸಂಗ್ರಹಿಸಿದ ಮಾಹಿತಿಗಳು ದಾಖಲೆಯಾಗಬೇಕು ಎಂಬ ದೃಷ್ಠಿಯಿಂದ ಪುಸ್ತಕ ಹೊರ ತರಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಶ್ರೀನಿವಾಸ ಉಬರಡ್ಕ.

 

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 26-03-2025 | ಇಂದೂ ಕೆಲವು ಕಡೆ ಗಾಳಿ ಸಹಿತ ಮಳೆ ಸಾಧ್ಯತೆ | ಮಾ.27 ರಿಂದ ಮಳೆ ಕಡಿಮೆ |
March 26, 2025
1:29 PM
by: ಸಾಯಿಶೇಖರ್ ಕರಿಕಳ
ಕಂದಕ ಬದು ನಿರ್ಮಾಣ ಕುರಿತ ಕಾರ್ಯಾಗಾರ | ಬದು ನಿರ್ಮಾಣದಿಂದ ಮಳೆ ನೀರು ಪೋಲು ನಿಯಂತ್ರಣ |
March 26, 2025
7:06 AM
by: The Rural Mirror ಸುದ್ದಿಜಾಲ
ಹಾಸನ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ | ಸೆರೆ ಹಿಡಿದ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
March 26, 2025
6:49 AM
by: The Rural Mirror ಸುದ್ದಿಜಾಲ
ಕೋಲಾರ ತಾಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು  ಕಾರ್ಯಾಚರಣೆ
March 26, 2025
6:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror