ನೀರಿಗಾಗಿ ಹೊಳೆಯಲ್ಲಿ ನಡಿಗೆ ….. ಇದು ನೀರ ನೆಮ್ಮದಿಗೆ ಪ್ಲಾನ್…!

May 23, 2019
8:00 AM

ಎಲ್ಲೆಡೆ ನೀರಿಲ್ಲದ ಕೂಗು. ಬರದ ಛಾಯೆ. ಕೃಷಿಗೆ ಬಿಡಿ, ಕುಡಿಯುವ ನೀರಿಗೂ ಪರದಾಟ. ಹಾಗಿದ್ದರೂ ಎಲ್ಲಾ ಕಡೆ ಒಂದೇ ಮಾತು ನೀರಿಲ್ಲ… ನೀರಿಲ್ಲ…!. ಪರಿಹಾರ, ಭವಿಷ್ಯದ ಯೋಚನೆಯ ಕಡೆಗೆ ಮಾಡುವ ಜನರ ಸಂಖ್ಯೆ ವಿರಳವಾಗಿದೆ. ಕೊಳವೆ ಬಾವಿಯೊಂದೇ ಪರಿಹಾರ ಎಂದು ನಂಬಿದವರು ಅನೇಕರು. ಅದಕ್ಕಿಂತಲೂ ಭಿನ್ನವಾದ ಯೋಚನೆ ಮಾಡಿದ್ದಾರೆ ಪಡ್ರೆ ಗ್ರಾಮದ ಮಂದಿ.

ಆದರೆ ಕಾಸರಗೋಡು ಜಿಲ್ಲೆಯ ಪೆರ್ಲ ಬಳಿಯ ಪಡ್ರೆ ಗ್ರಾಮದಲ್ಲಿ  ನೀರ ನೆಮ್ಮದಿಗೆ ಪ್ರಯತ್ನ ಆರಂಭಿಸಿದ್ದಾರೆ. ಇದು 3 ವರ್ಷದ ಪ್ಲಾನ್. ನೀರಿಲ್ಲ ಎಂಬ ಕೂಗಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಿದ್ಧವಾಗಿದ್ದಾರೆ ಇಲ್ಲಿನ ಜನ. ಹೀಗಾಗಿ ಮೊದಲು ಆರಂಭ ಮಾಡಿದ್ದು ಹೊಳೆಯಲ್ಲಿ  ನಡಿಗೆ. ಇದು  “ನಮ್ಮ ನಡಿಗೆ ತೋಡಿನೆಡೆಗೆ”

ದಕ್ಷಿಣ ಕನ್ನಡ ಜಿಲ್ಲೆಯ ಪಾಣಾಜೆ ಹಾಗೂ ಕಾಸರಗೋಡು ಜಿಲ್ಲೆಯ ಪೆರ್ಲದ ಗಡಿನಾಡು ಪಡ್ರೆ ಗ್ರಾಮ. ಇಲ್ಲಿನ ಸ್ವರ್ಗ ಎಂಬ ಊರು ಜಲಸಮೃದ್ಧಿಯ ಊರಾಗಿತ್ತು ಒಂದು ಕಾಲದಲ್ಲಿ. ಒಂದರ್ಥದಲ್ಲಿ ಜಲ ಶ್ರೀಮಂತ ಊರು. ಇದಕ್ಕೆ ಮುಖ್ಯ ಕಾರಣವಾಗಿದ್ದದ್ದು ಸ್ವರ್ಗ ತೋಡು. ಈ ತೋಡು ಸುಮಾರು 7- 8 ಕಿಮೀ ದೂರ ಇದೆ. ಹೀಗಾಗಿ ಈ ಊರಿನ ಲೈಫ್ ಲೈನ್ ಇದಾಗಿತ್ತು. ಈ ತೋಡು ಹೇಗಿತ್ತೆಂದರೆ ಆಸುಪಾಸಿನ ಗ್ರಾಮಗಳಲ್ಲಿ ನೀರು ಬತ್ತಿದ ನಂತರ ಕೊನೆಗೆ ಈ ತೋಡು ಬತ್ತುತ್ತಿತ್ತು.  ಆದರೆ 1983 ರ ನಂತರ ಮೊದಲ ಬಾರಿಗೆ  ಈ ವರ್ಷ ಜಲಕ್ಷಾಮ ಬೇಗನೇ ಈ ಊರಲ್ಲಿ ಕಂಡುಬಂತು. ಅಂದರೆ ಜಲದ ಕೊರತೆ ಹಿಂದೆ ಹಾಕಿದೆ. ಕುಡಿಯುವ ನೀರಿಗೂ ತತ್ತ್ವಾರ ಉಂಟಾಯಿತು. ಹಿಂದೆಲ್ಲಾ ಬೇಸಗೆಯ ಕೊನೆಯಲ್ಲಿ  2 ಗಂಟೆ ಮಳೆ ಬಂದರೆ ಹೊಳೆ ರೀಚಾರ್ಜ್ ಆಗಿ ನೀರು ಹರಿಯಲು ಆರಂಭವಾಗುತ್ತಿತ್ತು. ಅಂದರೆ ನೀರಿನ ಕೊರತೆ ಕಡಿಮೆ ಇತ್ತು.  ಹೀಗಾಗಿ ಕೊಳವೆಬಾವಿಗಳೂ ಹೆಚ್ಚು ಇರಲಿಲ್ಲ.

 

ಈ ಬಾರಿ ನೀರಿನ ಕೊರತೆ ಉಂಟಾಯಿತು. ಕುಡಿಯಲೂ ನೀರಿಲ್ಲದ ಸ್ಥಿತಿ ಬಂತು. ಕಳೆದ 3-4 ವಾರದ ಆಸುಪಾಸಿನಲ್ಲಿ  ಪಡ್ರೆ ಗ್ರಾಮದಲ್ಲಿ ಸುಮಾರು 90 ರಿಂದ 100 ಕೊಳವೆ ಬಾವಿಗಳು ನಿರ್ಮಾಣವಾದವು. ಇಷ್ಟೂ ಮಂದಿಗೂ ನೀರಿನ ಅನಿವಾರ್ಯತೆ ಹೆಚ್ಚಾಯಿತು. ಪರಿಹಾರ ಹೇಗೆ ಎಂಬ ಯೋಚನೆ ಇದ್ದರೂ ಮುಂದಡಿ ಇಡಲು ಹಿಂದುಮುಂದು ನೋಡಬೇಕಾಯಿತು.

ಆದರೆ ಸ್ವರ್ಗ  ತೋಡಿನ  ತೀರದಲ್ಲಿರುವ ಮಂದಿ ಪ್ರಯತ್ನ ಮಾಡಿದರೆ ಅದಕ್ಕಿಂತಲೂ ಮನಸ್ಸು ಮಾಡಿದರೆ ಈ ಸಮಸ್ಯೆ ಪರಿಹಾರ ಸಾಧ್ಯ ಎಂಬ ಅಂಶವನ್ನು ಜಲತಜ್ಞ ಶ್ರೀ ಪಡ್ರೆ ಅವರು ಕೆಲ ಯುವಕರ ಮುಂದಿಟ್ಟರು. ಆದರೆ ಮೀಟಿಂಗ್ ಮಾಡುವುದರ ಬದಲಾಗಿ ಮನೆ ಮನೆಗೆ ಭೇಟಿ ಜೊತೆಗೆ ತೋಡಿನಲ್ಲಿ  ನಡೆದು ಸ್ಥಿಗತಿ ಹಾಗೂ ತಕ್ಷಣ ಪರಿಹಾರದ ಬಗ್ಗೆ ಅರಿಯುವ ಕೆಲಸಕ್ಕೆ ಮುಂದಾದರು. ಇದು “ನಮ್ಮ ನಡಿಗೆ ತೋಡಿನೆಡೆಗೆ”. 

 

( ಚಿತ್ರಗಳು – ಶ್ರೀಪಡ್ರೆ)

 

ಕಳೆದ 3 ದಿನದಲ್ಲಿ  8 ಕಿಮೀ ತೋಡನ್ನು ನಡೆದು ಅರಿವು ಮೂಡಿಸಲಾಯಿತು. ಈ ನಡಿಗೆಯಲ್ಲಿ  ಕಂಡ ಮೊದಲ ಅಂಶ ನೀರಿನ ಕೊರತೆಗೆ  ಈ ತೋಡಿನಲ್ಲಿದ್ದ ಕಟ್ಟಗಳ ತೆರವು ಮುಖ್ಯ ಕಾರಣ ಎಂಬುದು ಎಲ್ಲರಿಗೂ ಮನದಟ್ಟಾಯಿತು. ಹೀಗಾಗಿ ಮುಂದಿನ ವರ್ಷವೇ  ಸುಮಾರು 30 ರಿಂದ 35 ಕಟ್ಟ ನಿರ್ಮಾಣದ ಭರವಸೆ ಸಿಕ್ಕಿತು. ಸ್ವರ್ಗದ ಪೊಯ್ಯೆ ಎಂಬಲ್ಲಿ  ಸುಮಾರು 10-15 ಕಟ್ಟಗಳ ರಚನೆಯಾಗುತ್ತಿತ್ತು. ಈಗ ಕಟ್ಟಗಳೇ ಇಲ್ಲಿ ಅಪರೂಪವಾಗಿತ್ತು. ಅಲ್ಲೂ ಕಟ್ಟಗಳ ರಚನೆಗೆ ಯುವಕರು ಉತ್ಸಾಹ ತೋರಿದರು. ಹೀಗಾಗಿ ಮೊದಲ ವರ್ಷ ಅಂದರೆ ಮುಂದಿನ ವರ್ಷ ಕನಿಷ್ಠ 30-35 ಕಟ್ಟಗಳ ನಿರ್ಮಾಣ ಮಾಡುವ ನಿರ್ಧಾರಕ್ಕೆ ಬರಲಾಯಿತು. 3 ದಿನ ಮಧ್ಯಾಹ್ನದವರೆಗೆ ನಿರಂತರ   ತೋಡಿನಲ್ಲಿ  ನಡಿಗೆ ಮಾಡಲಾಯಿತು. ಸುಮಾರು  60 -75  ಜನ 3 ದಿನದಲ್ಲಿ ಭಾಗವಹಿಸಿದ್ದಾರೆ.

 

 

ಇನ್ನೊಂದು ಪ್ರಮುಖವಾದ ಅಂಶವೆಂದರೆ ಸ್ವರ್ಗ ಹೊಳೆಯ ಉಗಮ ಕಿಂಞಣ್ಣಮೂಲೆ ಸ್ವರ್ಗ ತೋಡು ಉಗಮ. ಇಲ್ಲಿ  20 ಮನೆಗಳಲ್ಲಿನ ಅರ್ಧ ಭಾಗದ ಮನೆಗಳಲ್ಲಿ  ನೀರು ಬಾವಿಯಲ್ಲಿ ಬತ್ತಿದೆ. ಈಗ 80 ಶೇಕಡಾ ಭಾಗದಲ್ಲಿ ಓಡುವ ನೀರನ್ನು ತಡೆಯುವ ಪ್ರಯತ್ನವಾಗುತ್ತಿದೆ.

2 ನೇ ವರ್ಷಕ್ಕೆ ಸ್ವರ್ಗ ಪರಿಸರದ ಗಡ್ಡದ ತುದಿಯಲ್ಲಿ  ನೀರಿಂಗಿಸುವ ಕೆಲಸ ಮಾಡುವುದು, ಈ ಮೂಲಕ ಓಡುವ ನೀರನ್ನು  ನಿಲ್ಲುವಂತೆ ಮಾಡಿ ನೀರಿಂಗಿಸುವ ಕೆಲಸ ಮಾಡುವುದು.

3 ನೇ ವರ್ಷ ಬೇಸಗೆಯಲ್ಲಿ ಕೊಳವೆ ಬಾವಿ ನೀರು ಬಳಕೆಗಿಂತ ಮೇಲಿನ ನೀರನ್ನು ಬಳಕೆ ಮಾಡುವುದು  ಹಾಗೂ ನೀರಿನ ಮಿತ ಬಳಕೆಯ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.

ಸ್ವರ್ಗದ ನೀರ ನೆಮ್ಮದಿಯ ಈ ಕಾಯಕಕ್ಕೆ ಸರಕಾರದತ್ತ ನೋಡುವ ಬದಲಾಗಿ ಗ್ರಾಮದ ಮಂದಿ ಎಲ್ಲಾ ಸೇರಿ ರಾಜಕೀಯ ರಹಿತವಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಒಂದು ಯುವಕರ ತಂಡ ಶ್ರಮದಾನದ ಮೂಲಕ ಕಟ್ಟ ನಿರ್ಮಾಣ ಮಾಡುವುದಾಗಿ ಈಗಲೇ ಆಸಕ್ತಿ ವಹಿಸಿದೆ. ಈಗಾಗಲೇ ಕಟ್ಟಗಳ ಬಗೆಗಿನ ಪುಸ್ತಕದ ವಿತರಣೆಯನ್ನೂ ಇಲ್ಲಿನ ಆಸಕ್ತರಿಗೆ ಮಾಡಲಾಗಿದೆ. ಈಗ ಇದಕ್ಕಾಗಿಯೇ ವ್ಯಾಟ್ಸಪ್ ಗ್ರೂಪು ಕೂಡಾ ರಚನೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡುವ ಜಲತಜ್ಞ ಶ್ರೀಪಡ್ರೆ, ” ಪಡ್ರೆ ಗ್ರಾಮದ ಸ್ವರ್ಗದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನ ನಡೆಯುತ್ತಿದೆ. ಊರು ಕೈಜೋಡಿಸಿದರೆ ಸ್ವರ್ಗ ತೋಡು ಬತ್ತದ ಹಾಗೆ ಸತತ 3 ವರ್ಷದ ಪ್ರಯತ್ನದಿಂದ  ಮಾಡಬಹುದು. ಈಗ ನೀರ ನೆಮ್ಮದಿಯತ್ತ ಪಡ್ರೆ ಗ್ರಾಮ ಸಾಗುವ ಯೋಚನೆ ಹಾಕಿಕೊಂಡಿದೆ. ಅದಕ್ಕಿಂಲೂ ಮುಖ್ಯವಾಗಿ ಈಗ ಪಡ್ರೆಯಲ್ಲಿ  ನೀರು ಬತ್ತಿದೆ ಆದರೆ ಜನರ ಉತ್ಸಾಹ ಬತ್ತಲಿಲ್ಲ” ಎಂದು ಜನರ ಪ್ರತಿಕ್ರಿಯೆ ಗಮನಿಸಿ ಹೇಳುತ್ತಾರೆ.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ರಾಜ್ಯದಲ್ಲಿ ರೈತರು ಬೆಳೆದ ಸಾಗುವಾನಿ, ಹುಣಸೆ ಮರಗಳನ್ನು ಕಟಾವು ಮಾಡಲು ಅನುಮತಿ | 2 ವರ್ಷದಲ್ಲಿ 189241 ಮರ ಕಡಿಯಲು ಅನುಮತಿ |
March 10, 2025
11:01 PM
by: ದ ರೂರಲ್ ಮಿರರ್.ಕಾಂ
ಮಹಾಕುಂಭದ ವೇಳೆ ಗಂಗಾ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು |
March 10, 2025
10:32 PM
by: ದ ರೂರಲ್ ಮಿರರ್.ಕಾಂ
ಲೋಕ ಅದಾಲತ್‌ನಲ್ಲಿ ಐದು ಜಿಲ್ಲೆಗಳಲ್ಲಿ 31 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥ
March 10, 2025
7:41 AM
by: The Rural Mirror ಸುದ್ದಿಜಾಲ
ಕುಕ್ಕೆ ಸುಬ್ರಹ್ಮಣ್ಯವನ್ನೂ…… ಪವಿತ್ರ ಕುಮಾರಧಾರ ನದಿಯನ್ನೂ ಮಲಿನ ಮಾಡ್ತೀರಾ….?
March 9, 2025
10:21 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror