ಅಡಿಕೆ ಬೆಳೆಯುವ ಪ್ರದೇಶಗಳಲ್ಲಿನ ಸಾಮಾಜಿಕ, ಆರ್ಥಿಕ ಜೀವನಮಟ್ಟ ಉನ್ನತ ಮಟ್ಟದಲ್ಲಿರುವುದು ನಮಗೆಲ್ಲ ಅನುಭವಕ್ಕೆ ಬಂದಿರುವುದೇ ಆಗಿದೆ. ಉಳಿದ ಎಲ್ಲ ಕೃಷಿ ಉತ್ಪನ್ನಗಳಿಗಿಂತ ಅಡಿಕೆಗೆ ಇರುವ ಉತ್ತಮ ಧಾರಣೆಯೇ ಇದಕ್ಕೆ ಕಾರಣ. ಕರಾವಳಿ ಜಿಲ್ಲೆಗಳು ಅಡಿಕೆ ಕೃಷಿಯಿಂದ ತಮ್ಮ ಸಾಮಾಜಿಕ ಜೀವನಮಟ್ಟವನ್ನು ಎತ್ತರಿಸಿಕೊಳ್ಳುವುದು ಇತರ ಮಲೆನಾಡು ಮತ್ತು ಬಯಲು ಸೀಮೆಯವರಿಗೂ ಅರಿವಿಗೆ ಬಂತು. ಮಲೆನಾಡಿನಲ್ಲಿದ್ದ ಸಾಂಪ್ರದಾಯಿಕ ಅಡಿಕೆ ಕೃಷಿಗೆ ಪುನರುಜ್ಜೀವನ ಆಗುವುದರ ಜೊತೆ ಜೊತೆಗೆ ಬಯಲು ಸೀಮೆಗೆ ಅಡಿಕೆ ಕೃಷಿ ಲಗ್ಗೆ ಇಟ್ಟದ್ದು ಮಾತ್ರ ಒಂದು ರೀತಿಯ ಆತಂಕದ ಸಂಗತಿ. ಯಾಕೆಂದರೆ ಎಲ್ಲಿ ಯಾವುದನ್ನು ಬೆಳೆಯ ಬೇಕೊ ಅದನ್ನು ಬೆಳೆಯದೆ ಕೇವಲ ಆರ್ಥಿಕತೆಯೊಂದನ್ನೇ ನೋಡಿದರೆ ಏನಾಗುತ್ತದೆ ಎಂಬುದಕ್ಕೆ ಕೆಲವು ಪ್ರದೇಶಗಳು ನಮಗೆ ಸಾಕ್ಷಿಯಾಗುತ್ತವೆ. ಕೆಲವರಿಗೆ ತಾವು ನಡೆದದ್ದೇ ಹಾದಿಯೆಂಬ ಅಹಂ ಬೇರೆ. ಯಾರ ಮಾತನ್ನೂ ಒಪ್ಪದ ಮತ್ತು ಕಿವಿಮೇಲೆ ಹಾಕಿಸಿಕೊಳ್ಳಲೂ ತಯಾರಿಲ್ಲದ ಜನರಿದ್ದರೆ ಕೆಲವೊಮ್ಮೆ ಏನೇನೊ ಆಗಿಬಿಡುತ್ತವೆ. ಮತ್ತೆ ಬಂದದ್ದನ್ನು ಅನುಭವಿಸಬೇಕು.
ತುಮಕೂರು ಜಿಲ್ಲೆಯ ಕೆಲವು ಕಡೆ ಮತು ಚೆನ್ನಗಿರಿಯ ಓಡಾಡುವ ಮತ್ತು ಅಲ್ಲಿನ ಕೃಷಿಕರ ಜೊತೆ ಮಾತಾಡುವ ಅವಕಾಶ ಮೊನ್ನೆ ಒದಗಿಬಂತು. ಇದೆಲ್ಲ ಹಸಿ ಅಡಿಕೆಯನ್ನು ಬೇಯಿಸಿ ಕೆಂಪಡಿಕೆ ಮಾಡುವ ಪ್ರದೇಶ. ಚಾಲಿ ಅಡಿಕೆಗಿಂತ ಹೆಚ್ಚಿನ ಧಾರಣೆ ಬೇರೆ. ಶಿರಾ ತುಮಕೂರಿನಿಂದ ಸುಮಾರು ಐವತ್ತು ಕಿ.ಮೀ. ದೂರವಿದೆ. ಸಮತಲ ಪ್ರದೇಶ. ಅದು ನಿಜವಾಗಿ ನೋಡಿದರೆ ಕಡ್ಲೆ ( ಶೇಂಗಾ) ಬೆಳೆಯುತ್ತಿದ್ದ ಪ್ರದೇಶ. ಮಳೆ ಕಡಿಮೆ. ಇದುವರೆಗೆ ಅಲ್ಲಿ ಸರಿಯಾದ ಮಳೆಯೇ ಬರಲಿಲ್ಲ. ಅಡಿಕೆಯ ಧಾರನೆಗೆ ಮನಸೋತು ಅಲ್ಲೆಲ್ಲ ಬಲಾತ್ಕಾರವಾಗಿ ನೆಲ ಒಪ್ಪದಿದ್ದರೂ ಅಡಿಕೆ ಬೆಳೆಯುತ್ತಿದ್ದಾರೆ. ಮಳೆಯನ್ನು ನಂಬಿ ಅಲ್ಲಿ ಯಾವ ಕೃಷಿಯನ್ನೂ ಮಾಡುವ ಹಾಗಿಲ್ಲ. ಇಲ್ಲೆಲ್ಲ ಮಳೆ ಬರುವ ಸಮಯದಲ್ಲಿ ಹನಿ ಹನಿ ಮಳೆ ಬಂದರೆ ಅವರಿಗೆ ಕಡ್ಲೆ ಬೆಳೆಯಲು ಸಾಕಾಗುತ್ತದೆ. ಒಬ್ಬೊಬ್ಬರಿಗೆ ಹತ್ತರಿಂದ ನೂರು ಎಕರೆ ಅಡಿಕೆ ತೋಟಗಳಿವೆ. ಹತ್ತಿರ ಎಲ್ಲಿಯೂ ಅಣೆಕಟ್ಟಿನ ನಾಲೆ ನೀರು ಬರುವ ಹಾಗಿಲ್ಲ. ಹಾಗಾಗಿ ಕೊಳವೆಬಾವಿಗಳೇ ನೀರಿಗೆ ಆಧಾರ. ಒಬ್ಬೊಬ್ಬರು ಕೊರೆಯಿಸಿದ ಕೊಳವೆಬಾವಿಗಳಿಗೆ ಲೆಕ್ಕವಿಲ್ಲ. ಎಂಟುನೂರು ಒಂದು ಸಾವಿರ ಅಡಿಯಲ್ಲದೆ ನೀರಿನ ಸುಳಿವು ಸಿಗುವುದು ಕಡಿಮೆಯಂತೆ. ಚೆನ್ನಗಿರಿ ಭಾಗದಲ್ಲಿ ಕೂಡ ಇದುವೇ ಕಥೆ. ನಾಲೆಯಲ್ಲಿ ನೀರು ಬರುವಲ್ಲಿ ಎಕರೆಗಟ್ಟಲೆ ತೋಟಗಳು. ಕೆಲವು ಕಡೆ ಕೊಳವೆ ಬಾವಿಗಳೇ ಆಧಾರ. ಕೊಳವೆಬಾವಿಯೂ ಕೈಕೊಟ್ಟರೆ ಟ್ಯಾಂಕರ್ ಬಳಕೆ ಮಾಡಿ ದೂರ ದೂರ ನೀರಿದ್ದಲ್ಲಿಂದ ನೀರು ತುಂಬಿಸಿ ತಂದು ತೋಟದ ಬದಿಯಲ್ಲಿ ಹೊಂಡ ತೆಗೆದು ಪ್ಲಾಸ್ಟಿಕ್ ಮುಚ್ಚಿದ ಕೆರೆಯಲ್ಲಿ ತುಂಬಿಸಿ ತೋಟಕ್ಕೆ ನೀರಾವರಿ ಮಾಡುತ್ತಾರೆ.
ಇಷ್ಟು ಕಷ್ಟ ಪಟ್ಟು ಅಡಿಕೆ ಬೆಳೆದು ಸುಖ ಪಡುವ ಜನ ನಮ್ಮ ನಡುವೆ ಇದ್ದಾರೆ. ಅವರನ್ನು ಮಾತನಾಡಿಸಿದರೆ ಕಷ್ಟ ಪರಂಪರೆಗಳು ಉದ್ದನೆ ಬರುತ್ತವೆ, ಕೊಳವೆ ಬಾವಿಗಳು ಬತ್ತಿದ ನೋವು, ಅಡಿಕೆ ಮರಗಳು ಸತ್ತು ಹೋದ ಬೇಸರ ಅವರ ಮಾತುಕತೆಯಲ್ಲಿ ಧಾರಾಳ. ಇಷ್ಟಿದ್ದೂ ಅವರಿಗೆ ಅಡಿಕೆಯೇ ಬೇಕು. ಯಾಕೆ ನೀವು ಪರ್ಯಾಯ ಬೆಳೆಗಳಿಗೆ, ಸಮಗ್ರ ಕೃಷಿಗೆ ಒತ್ತು ಕೊಡಬಾರದೆಂದು ಕೇಳಿದರೆ ಬಾಳೆ, ಕಾಳುಮೆಣಸು ಅಡಿಕೆ ನಡುವೆ ಬದುಕುವುದೇ ಇಲ್ಲ ಎಂಬ ವಿಚಿತ್ರ ಉತ್ತರ. ಅವರದ್ದು. ಸಮಗ್ರ ಕೃಷಿಗೆ ಮನಸ್ಸು ಮಾಡಿದರೆ ಬೇಸಿಗೆಯ ತಾಪವಾದರೂ ಕಡಿಮೆಯಾಗಬಹುದೇನೊ?
ಇದು ಬಯಲು ಸೀಮೆಯ ವಿವರಗಳಾಯಿತು. ನಮ್ಮ ಕರಾವಳಿಯಲ್ಲಿಯೂ ಇದಕ್ಕೆ ಸಮನಾದ ಮನೋಭಾವಗಳು ಇಲ್ಲದಿಲ್ಲ. ಬೇಸಿಗೆಯಲ್ಲಿ ನೀರಿಲ್ಲದೆ ಮರ ಸತ್ತಿತು, ಹಿಂಗಾರ ಒಣಗಿ ಹೋಯಿತು, ಸೋಗೆ ಬಾಡಿತು ಅಂತ ಬೊಬ್ಬೆ ಹೊಡೆಯುವ ಎಷ್ಟು ಕೃಷಿಕರಿಲ್ಲ. ಪ್ರತಿವರ್ಷ ಕೊಳವೆ ಬಾವಿ ಕೊರೆಯಿಸಿ ಅಲ್ಲಲ್ಲಿ ಒಂದಷ್ಟು ಹೊಸ ತೋತ ಎಬ್ಬಿಸುವ ಕೃಷಿಕರು ಕಡಿಮೆಯಲ್ಲ. ಹೇಳುವಾಗ ತುಂಬ ಇಲ್ಲ ನಾನ್ನೂರು ಗಿಡಗಳಷ್ಟೆ ಎಂಬ ಸಮಜಾಯಿಷಿ. ಜಾಗ ಇದೆಯೆಂದು ಮನವರಿಕೆಯಾದರೆ ಅಲ್ಲಿಗೆ ಹಿಟಾಚಿ ಆಗಮನ ಎಂದೇ ಲೆಕ್ಕ. ಕಳೆದ ಬೇಸಿಗೆಯಲ್ಲಿ ನೀರಿನ ಅಭಾವ ಬಂದು ಕೆಲವರು ಅಡಿಕೆ ಕೃಷಿಯಿಂದ ದೂರ ಹೋಗಬಹುದು ಎಂದೆಣಿಸಿದರೆ ಹಳೆ ತೋಟವನ್ನು ಕಡಿದು ಹೊಸ ತೋಟ ಎಬ್ಬಿಸುವ ಜನರ ಸಂಖ್ಯೆ ಹೆಚ್ಚುತ್ತಿದೆ. ಮಂಗಳವೋ, ಇಂಟರ್ ಮಂಗಳವೊ, ರತ್ನಗಿರಿಯೊ, ಊರಿನ ತಳಿಯೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಶಯ ನಿವಾರಿಸಿಕೊಳ್ಳುವವರ, ಗಿಡಗಳ ಲಭ್ಯತೆಯ ಬಗ್ಗೆ ವಿಚಾರಿಸುವವರ ಸಂಖ್ಯೆ ಕಡಿಮೆಯಲ್ಲ.
ನೀರಿದ್ದರೆ, ತೋಟಕ್ಕೆ ತಕ್ಕ ಕಾರ್ಮಿಕ ಬಲವಿದ್ದರೆ, ನಿತ್ಯ ತೋಟದ ಕೆಲಸಗಳನ್ನು ಸ್ವತಃ ಮಾಡುವ ಅಥವ ಮಾಡಿಸುವ ಜನರಿದ್ದರೆ ಅದಕ್ಕೆ ತಕ್ಕ ಅಡಿಕೆ ಕೃಷಿ ಬೇಕು. ನೋಡಲಾರದೆ ನಿತ್ಯ ಅದು ಇದು ಸಿಕ್ಕ ಸಿಕ್ಕವರಲ್ಲಿ ಹೇಳಿಕೊಂಡು ತಿರುಗುವ, ತೋಟದ ಮರದಲ್ಲಿ ಏನೂ ಸಿಗದಂತಿರುವ ಕೃಷಿ ಮಾಡುವ ಅಡಿಕೆ ಕೃಷಿಕ ಎಷ್ಟು ಸಾಧ್ಯವೊ ಅಷ್ಟೆ ತೋಟಕ್ಕೆ ಗಮನ ಕೊಟ್ಟರೆ ಸಾಲದೇ?
- ಶಂ.ನಾ.ಖಂಡಿಗೆ