ಸುಳ್ಯ: ಕ್ರೀಡೆಯು ಪ್ರತಿಯೊಬ್ಬನಿಗೆ ಪ್ರಾಮುಖ್ಯವಾದುದು. ಅದು ಆತ್ಮವಿಶ್ವಾಸ, ಮಾನಸಿಕ ಸ್ಥೈರ್ಯ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕರಿಸುವುದು ಎಂದು ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇಲ್ಲಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ ಬಾಲಚಂದ್ರ ಗೌಡ ಅವರು ಹೇಳಿದರು.
ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ದ್ವಜಾರೋಹಣವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ , ಕೋಚ್ ಗಣೇಶ್ ರೈ ಪುತ್ತೂರು ಇವರು ನೆರವೇರಿಸಿ, ಉತ್ತಮ ಕ್ರೀಡಾಸ್ಫೂರ್ತಿಯಿಂದ ವಿದ್ಯಾರ್ಥಿಗಳು ಭಾಗವಹಿಸುವುದು ಮುಖ್ಯವಾಗುತ್ತದೆ. ದೈಹಿಕ ಚಲನೆಯಿರುವ ಆಟದಲ್ಲಿ ತೊಡಗಿಸಿಕೊಂಡಾಗಿನ ಪರಿಣಾಮ ಅದ್ಭುತವಾಗಿರುತ್ತದೆ ಎಂದು ನುಡಿದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ನಿರ್ದೇಶಕರಾದ ಶೋಭಾ ಚಿದಾನಂದ ಅವರು ವಹಿಸಿದ್ದರು. ಅವರು ಮಾತನಾಡಿ , ಶಿಕ್ಷಣ ಮತ್ತು ಕ್ರೀಡೆ ಎರಡನ್ನು ಸಮದೂಗಿಸಿಕೊಂಡು ಮುನ್ನಡೆಯಬೇಕು . ಕಠಿಣ ಪರಿಶ್ರಮ ಯಶಸ್ಸನ್ನು ತಂದುಕೊಡುತ್ತದೆ ಎಂದರು. ಜೀವನದಲ್ಲಿ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಬೇಕು, ಕೇವಲ ವಾರ್ಷಿಕ ಕ್ರೀಡಾಕೂಟಗಳಿಗೆ ಆಟವನ್ನು ಸೀಮಿತಗೊಳಿಸದೆ ದಿನಂಪ್ರತಿ ಸ್ವಲ್ಪ ಸಮಯವನ್ನು ಕ್ರೀಡೆಗೆ ಮೀಸಲಿಟ್ಟು, ಪಠ್ಯದಲ್ಲಿ ಚೆನ್ನಾಗಿ ತೊಡಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವೇದಿಕೆಯಲ್ಲಿ ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಪ್ರಾಂಶುಪಾಲರು ಡಾ. ಗಿರಿಧರ ಗೌಡ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹರಿಣಿ ಪುತ್ತೂರಾಯ ಉಪಸ್ಥಿತರಿದ್ದರು.
ಗುಂಪು ಸಮವಸ್ತ್ರದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು ಮತ್ತು ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಕಾಲೇಜಿನ ಕ್ರೀಡಾಪಟುಗಳು ಕ್ರೀಡಾ ಜ್ಯೋತಿಯನ್ನು ಕ್ರೀಡಾ ಮೈದಾನಕ್ಕೆ ಆಕರ್ಷಕವಾಗಿ ಹೊತ್ತು ಸಾಗಿ ಬಂದರು. ವಿದ್ಯಾರ್ಥಿ ನಾಯಕ ರಜತ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಪದವಿ ಕಾಲೇಜಿನ ಎನ್ ಸಿಸಿ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ವಿಶೇಷ ಮೆರುಗು ನೀಡಿತ್ತು. ಉಧ್ಘಾಟನಾ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ್ ಸ್ವಾಗತಿಸಿ, ಉಪನ್ಯಾಸಕ ಲಕ್ಷ್ಮಣ್ ಏನೆಕಲ್ ಅವರು ವಂದಿಸಿದರು. ಕಾರ್ಯಕ್ರವನ್ನು ಉಪನ್ಯಾಸಕಿ ಹರ್ಷಿತಾ ಮತ್ತು ಉಪನ್ಯಾಸಕ ಕಿಶೋರ್ ಕುಮಾರ್ ಅವರು ನಿರ್ವಹಿಸಿದರು.