# ಸ್ಪೆಷಲ್ ಕರೆಸ್ಪಾಂಡೆಂಟ್ , ಸುಳ್ಯನ್ಯೂಸ್.ಕಾಂ
ಸುಳ್ಯ : ನಗರ ಪಂಚಾಯತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ತಲ್ಲೀನರಾಗಿದ್ದ ಪಕ್ಷಗಳ ಚಿತ್ತ ಇನ್ನು ಪ್ರಚಾರದತ್ತ ಹೊರಳಲಿದೆ.
ಚುನಾವಣೆ ಘೋಷಣೆಯಾದಲ್ಲಿಂದ ಆರಂಭಗೊಂಡ ಅಭ್ಯರ್ಥಿ ಆಯ್ಕೆ ಕಸರತ್ತಿನಿಂದ ಹೈರಾಣಾಗಿ ಸ್ವಲ್ಪ ರಿಲಾಕ್ಸ್ ಮೂಡ್ ಗೆ ಬಂದ ಪಕ್ಷದ ನೇತೃತ್ವ ಇನ್ನು ನಿಧಾನಕ್ಕೆ ಪ್ರಚಾರದ ಅಬ್ಬರದೆಡೆಗೆ ಧುಮುಕಬೇಕಾಗಿದೆ. ನಾಮಪತ್ರ ಸಲ್ಲಿಕೆ ಕೊನೆಗೊಂಡ ಮರುದಿನದಿಂದಲೇ ಅಭ್ಯರ್ಥಿಗಳು ಮತ್ತು ಸ್ಥಳೀಯ ನಾಯಕರು ತಮ್ಮ ವಾರ್ಡ್ ಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಮನೆ ಮನೆ ಭೇಟಿ ನೀಡಿ ಮತದಾರರನ್ನು ಭೇಟಿ ಮಾಡುವ ಪ್ರಚಾರ ಕಾರ್ಯಕ್ಕೆ ಪಕ್ಷಗಳು ಆದ್ಯತೆ ನೀಡಲಿದ್ದಾರೆ. 20 ರಂದು ನಾಮಪತ್ರ ಹಿಂಪಡೆಯುವ ಸಮಯ ಮುಗಿದ ಬಳಿಕ ವಾರ್ಡ್ ಗಳಲ್ಲಿರುವ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟವಾಗಲಿದೆ. ಬಳಿಕ ಪ್ರಚಾರಕ್ಕೆ ಇನ್ನಷ್ಟು ವೇಗ ದೊರಕಲಿದ್ದು ಪ್ರಚಾರದ ರಣತಂತ್ರ ರೂಪಿಸಲಿದೆ.
ಬಿಜೆಪಿ ಇಂದು ಸಭೆ ನಡೆಸಿ ಚುನಾವಣಾ ಪ್ರಚಾರಕ್ಕೆ ರೂಪುರೇಷೆ ತಯಾರಿಸಿದೆ. ಕಾಂಗ್ರೆಸ್ ಸಭೆ ನಾಳೆ ನಡೆಯಲಿದ್ದು ರಣ ತಂತ್ರ ರೂಪಿಸಲಿದ್ದಾರೆ.
ನೇರ, ತ್ರಿಕೋನ ಸ್ಪರ್ಧಯ ರಂಗು:
ನಗರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಅಧಿಕಾರಕ್ಕಾಗಿ ಹೋರಾಟ ನಡೆಯಲಿದೆ. ಕೆಲವು ವಾರ್ಡ್ ಗಳಲ್ಲಿ ನೇರ ಸ್ಪರ್ಧೆ ನಡೆದರೆ ಹಲವು ವಾರ್ಡ್ ಗಳಲ್ಲಿ ತ್ರಿಕೋನ- ಚತುಷ್ಕೋನ ಸ್ಪರ್ಧೆಯ ರಂಗು ತರಲಿದೆ.
ಐದು ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎಲ್ಲಾ 20 ವಾರ್ಡ್ ಗಳಲ್ಲಿ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ ಎರಡು ವಾರ್ಡ್ ಗಳಲ್ಲಿ, ಎಸ್.ಡಿ.ಪಿ.ಐ ಐದು ವಾರ್ಡ್ ಗಳಲ್ಲಿ, ಆಮ್ ಆದ್ಮಿ ಪಕ್ಷ ಮೂರು ವಾರ್ಡ್ ಗಳಲ್ಲಿ ಮತ್ತು ವಿವಿಧ ವಾರ್ಡ್ ಗಳಲ್ಲಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು ಚುನಾವಣಾ ಕಣ ರಂಗೇರಿಸಲಿದೆ.
ಮೂರು ಬಾರಿ ನಿರಂತರ ಅಧಿಕಾರ ನಡೆಸಿದ ಬಿಜೆಪಿ ಈ ಬಾರಿ ಹೊಸ ಮುಖಗಳಿಗೆ ಆದ್ಯತೆ ನೀಡಿದ್ದರೆ, ಕಾಂಗ್ರೆಸ್ ಹಿರಿಯರಿಗೆ ಮತ್ತು ಹೊಸಬರಿಗೆ ಎರಡೂ ವಿಭಾಗಕ್ಕೂ ಆದ್ಯತೆ ನೀಡಿದೆ. ಬಿಜೆಪಿ 19 ಮಂದಿ ಹೊಸಬರು ಮತ್ತು ಒಬ್ಬರು ಮಾಜಿ ಸದಸ್ಯರಿಗೆ ಟಿಕೆಟ್ ನೀಡಿದೆ. ಇವರಲ್ಲಿ ಒಂದಿಬ್ಬರು ಈ ಹಿಂದೆ ಸ್ಪರ್ಧಿಸಿದ್ದರೂ ಆಯ್ಕೆಯಾಗಿರಲಿಲ್ಲ.
ಕಾಂಗ್ರೆಸ್ ಆರು ಮಂದಿ ಮಾಜಿ ಸದಸ್ಯರಿಗೆ ಮತ್ತು 14 ಮಂದಿ ಹೊಸ ಮುಖಗಳಿಗೆ ಸೀಟ್ ನೀಡಿದೆ. ಕೆಲವು ವಾರ್ಡ್ ಗಳಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿಗಳು, ಆಮ್ ಆದ್ಮಿ ಪಕ್ಷದ ಬೆಂಬಲಿತರು ಮತ್ತು ಪಕ್ಷೇತರರು ಸ್ಪರ್ಧೆ ನೀಡಲಿದ್ದಾರೆ. ಜೆಡಿಎಸ್ ಎರಡು ಕಡೆ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಏರ್ಪಡುವ ಸಾಧ್ಯತೆ ಇದ್ದರೂ ಸೀಟ್ ಹಂಚಿಕೆಯ ಚಿತ್ರಣ ಸ್ಪಷ್ಟವಾಗಿಲ್ಲ. ಇನ್ನು ತಲಾ ಮೂರು ವಾರ್ಡ್ ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಬಂಡಾಯ ಅಭ್ಯರ್ಥಿಗಳ ಬಿಸಿ ತಟ್ಟಲಿದೆ. ಇದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕಾದು ನೋಡಬೇಕಾಗಿದೆ

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ನ ಪಂ ಚುನಾವಣೆ : ಪ್ರಚಾರದತ್ತ ಪಕ್ಷಗಳ ಚಿತ್ತ"