# ಸ್ಪೆಶಲ್ ಕರೆಸ್ಪಾಂಡೆಂಟ್ , ಸುಳ್ಯನ್ಯೂಸ್.ಕಾಂ
ಸುಳ್ಯ: ಈ ಬಾರಿ ನಗರ ಪಂಚಾಯತ್ ಚುನಾವಣೆಯ ಕೇಂದ್ರ ಬಿಂದುವಾಗಿ ಮಾರ್ಪಾಡಾಗಿರುವ ವಾರ್ಡ್ ಬೋರುಗುಡ್ಡೆ.
ಹಿಂದುಳಿದ ವರ್ಗ(ಎ) ವಿಭಾಗಕ್ಕೆ ಮೀಸಲಾದ ಈ ವಾರ್ಡ್ ನಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಸಡ್ಡು ಹೊಡೆದು ಪ್ರಮುಖರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಇಲ್ಲಿನ ಚುನಾವಣಾ ಕಣಕ್ಕೆ ವಿಶೇಷ ರಂಗು ತಂದಿದೆ. 10 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವ ಬೋರುಗುಡ್ಡೆ ಪ್ರತಿಷ್ಠೆಯ ಕಣವಾಗಿದೆ. ಚುನಾವಣೆ ಘೋಷಣೆಯಾದಲ್ಲಿಂದ ಈ ವಾರ್ಡ್ ಮೇಲೆ ಹಲವರು ಕಣ್ಣಿಟ್ಟಿದ್ದರು. ಆದುದರಿಂದಲೇ ಹಲವರು ಆಕಾಂಕ್ಷಿಗಳೂ ಇದ್ದರು. ನಾಮ ಪತ್ರ ಸಲ್ಲಿಕೆ ಕೊನೆಗೊಂಡಾಗ ಅತೀ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿದ ವಾರ್ಡ್ ಎಂಬ ಹೆಗ್ಗಳಿಕೆ ಬೋರುಗುಡ್ಡೆಗೆ ದಕ್ಕಿತ್ತು.
5 ಬಾರಿ ಗೆದ್ದು ನ.ಪಂ.ಸದಸ್ಯರಾಗಿದ್ದು 6 ನೇ ಬಾರಿ ಸ್ಪರ್ಧಿಸುತ್ತಿರುವ ಕೆ.ಎಂ.ಮುಸ್ತಫಾ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವ ಆರ್.ಕೆ.ಮಹಮ್ಮದ್ ಮತ್ತು ಕಳೆದ ಬಾರಿ ನಗರ ಪಂಚಾಯತ್ ನಲ್ಲಿ ಎಸ್.ಡಿ.ಪಿ.ಐ ಸದಸ್ಯನಾಗಿದ್ದು ಈ ಬಾರಿ ಪಕ್ಷೇತರನಾಗಿ ಸ್ಪರ್ಧಿಸುವ ಕೆ.ಎಸ್.ಉಮ್ಮರ್ ಕಣದಲ್ಲಿರುವ ಪ್ರಮುಖರು.
ರಂಜಿತ್ ಪೂಜಾರಿ ಬಿಜೆಪಿ ಅಭ್ಯರ್ಥಿಯಾಗಿ ಮತ್ತು ಜೆಡಿಎಸ್ ನಿಂದ ಅಬ್ದುಲ್ ರಹೀಂ ಫ್ಯಾನ್ಸಿ ಕಣದಲ್ಲಿದ್ದಾರೆ. ಎಸ್.ಡಿ.ಪಿ.ಐ ಅಭ್ಯರ್ಥಿ ಎಂ.ಕೆ.ಮಹಮ್ಮದ್ ಮುಸ್ತಫಾ, ಆಮ್ ಆದ್ಮೀ ಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಅಬ್ದುಲ್ ರಶೀದ್ ಜಟ್ಟಿಪಳ್ಳ ಕಣದಲ್ಲಿರುವ ಇತರ ಪ್ರಮುಖರು.
ಬೋರುಗುಡ್ಡೆ ವಾರ್ಡ್ ಈಗಾಗಲೇ ಗಮನ ಸೆಳೆದಿದ್ದು ಚರ್ಚೆಗೆ ಗ್ರಾಸವಾಗಿದೆ. ನ.ಪಂ.ಚುನಾವಣೆಯಲ್ಲಿ ಹೈ ವೋಲ್ಟೇಜ್ ಸ್ಪರ್ಧೆಯ ಕುತೂಹಲ ಕೆರಳಿಸುವ ನಿರೀಕ್ಷೆ ಇದೆ.