ಸುಳ್ಯ: ನಗರ ಪಂಚಾಯತ್ ಚುನಾವಣೆಯಲ್ಲಿ 10ನೇ ವಾರ್ಡ್ (ಪುರಭವನ-ಕೇರ್ಪಳ)ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಸಿ.ಸುನಿಲ್ ಕುಮಾರ್ ಸಲ್ಲಿಸಿದ್ದ ನಾಮಪತ್ರ ತಿರಸ್ಕಾರಗೊಂಡಿದೆ.
ಶುಕ್ರವಾರ ನಾಮಪತ್ರಗಳ ಪರಿಶೀಲನೆ ವೇಳೆ ಇವರ ನಾಮಪತ್ರವನ್ನು ತಾಂತ್ರಿಕ ಕಾರಣಗಳಿಂದ ಕಾಯ್ದಿರಿಸಲಾಗಿತ್ತು. ಇಂದು ನಿರ್ಧಾರ ಪ್ರಕಟಿಸಿದ ಚುನಾವಣಾಧಿಕಾರಿ ದೇವರಾಜ್ ಮುತ್ಲಾಜೆ ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆ ಮತ್ತು ಭಾಗ ಸಂಖ್ಯೆ ನಮೂದಿಸಿರುವುದಲ್ಲಿ ಲೋಪ ಉಂಟಾದ ಕಾರಣ ನಾಮಪತ್ರದ ಕುರಿತಾದ ನಿರ್ಧಾರ ಪ್ರಕಟಿಸುವುದನ್ನು ಮುಂದೂಡಲಾಗಿತ್ತು. ಮತ್ತು ದೃಢೀಕರಣ ಪತ್ರವನ್ನು ಸಲ್ಲಿಸಲು ಸೂಚಿಸಿದ್ದರು. ಬಳಿಕ ಸುನಿಲ್ ಕುಮಾರ್ ದೃಢೀಕರಣ ಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ ನಾಮಪತ್ರವನ್ನು ತಿರಸ್ಕರಿಸಿದ್ದಾರೆ.
ನಾಮಪತ್ರದಲ್ಲಿ ಮತ್ತು ಪ್ರಮಾಣ ಪತ್ರದಲ್ಲಿ ಮತದಾರ ಪಟ್ಟಿಯ ಕ್ರಮ ಸಂಖ್ಯೆ ಮತ್ತು ಭಾಗ ಸಂಖ್ಯೆ ನಮೂದಿಸಿರುವುದಲ್ಲಿ ಲೋಪ ಕಂಡು ಬಂದ ಕಾರಣ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.