ಪಂಜ : ಸರಕಾರಿ ಶಾಲೆ ಉಳಿಸಿ ಅಭಿಯಾನದ ಅಡಿಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ(ಎಲ್‍ಕೆಜಿ) ಪ್ರಾರಂಭಿಸುವ ಕುರಿತು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪಂಜ ಪೂರ್ವ ಪ್ರಾಥಮಿಕ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ಸಭೆ ಪಂಜದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‍ಪಿ ಮಹಾದೇವ ಅವರು ಮಾತನಾಡಿ, 2020-2021ನೇ ಶೈಕ್ಷಣಿಕ ವರ್ಷದಲ್ಲಿ ಇದೇ ಶಾಲೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಲು ಇಲಾಖೆ ವತಿಯಿಂದ ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಹಾಗೂ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಪ್ರಥಮ ವರ್ಷದ ತರಗತಿಗೆ 30 ವಿದ್ಯಾರ್ಥಿಗಳ ದಾಖಲಾತಿಗೊಂಡ ಕಾರಣ ಮತ್ತು ಪೋಷಕರ ಬೇಡಿಕೆಯು ಹೆಚ್ಚುತ್ತಿರುವುದರಿಂದ ಪ್ರಸ್ತುತ ವರ್ಷವೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸುವುದೆಂದು ನಿರ್ಧರಿಸಲಾಯಿತು. ಜೊತೆಗೆ ತರಗತಿಗೆ ಅರ್ಹ ಶಿಕ್ಷಕಿಯರ ಹಾಗು ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ಸಭೆಯಲ್ಲಿ ಸಮಿತಿ ಸಂಚಾಲಕ ಕಾರ್ಯಪ್ಪ ಚಿದ್ಗಲ್ಲು, ಸಹಸಂಚಾಲಕ ದೇವಿಪ್ರಸಾದ್ ಜಾಕೆ, ಸೋಮಶೇಖರ ನೇರಳ, ತಿಮ್ಮಪ್ಪ ಪಲ್ಲತಡ್ಕ, ಶಶಿಧರ್ ಮಾವಿನಕಟ್ಟೆ, ದಾಮೋದರ ನೇರಳ, ವಾಚಣ್ಣ ಕರೆಮೂಲೆ, ಪುರುಷೋತ್ತಮ ನೆಕ್ಕಿಲ, ಶಿಕ್ಷಕ ಸಂಯೋಜಕ ವಸಂತ ಏನೆಕಲ್ ಉಪಸ್ಥಿತರಿದ್ದರು.