ಪರಿಸರ ಉಳಿದರೆ ಕೊಡಗು ಉಳಿದೀತು…..! , ಬನ್ನಿ ಪರಿಸರ ಉಳಿಸೋಣ…..

Advertisement

ಕೊಡಗಿನಲ್ಲಿ ಅನಾದಿ ಕಾಲದಿಂದಲೂ ಜನರು ಪರಿಸರವನ್ನೇ ದೇವರೆಂದು ನಂಬಿ, ಆರಾಧಿಸಿಕೊಂಡು ಬಂದಿದ್ದಾರೆ. ಅರಣ್ಯವನ್ನು ಮುಂದಿನ ಪೀಳಿಗೆಗಾಗಿ ಉಳಿಸಬೇಕೆಂಬ ಉದ್ದೇಶದಿಂದ ಕಾಡುಗಳ ಮೇಲೆ ದೈವ ಭಾವನೆಯನ್ನು ಮೂಡಿಸಿ ದೇವರಕಾಡು ಎನ್ನುವ ಪರಿಕಲ್ಪನೆಯೊಂದಿಗೆ ಕಾಡನ್ನು ರಕ್ಷಿಸುತ್ತಾ ಬಂದಿದ್ದಾರೆ. ಗೋಮಾಳವನ್ನು ಕೂಡ ಪೂಜ್ಯ ಭಾವನೆಯಿಂದ ನೋಡಲಾಗುತ್ತಿತ್ತು.

Advertisement

ದೇವರಕಾಡುಗಳಿಂದ ಒಂದು ಸಣ್ಣ ಕೊಂಬೆಯನ್ನು ಕೂಡ ಕಡಿಯದೆ ಮತ್ತು ಆ ಕಾಡು ದೇವರಿಗೆ ಸೀಮಿತವಾದ ಕಾಡೆಂದು ಅಲ್ಲಿಗೆ ಪ್ರವೇಶಿಸದೆ ಹಸಿರ ಪರಿಸರವನ್ನು ಹಿರಿಯರು ಉಳಿಸಿಕೊಂಡು ಬಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದೇವರಕಾಡುಗಳು ಮಾತ್ರವಲ್ಲದೇ ಹಿರಿಯರು ಕಾಪಾಡಿಕೊಂಡು ಬಂದಿದ್ದ ಗೋಮಾಳ, ಊರುಡುವೆ, ನದಿ ತೀರಗಳು ಕೂಡ ತೋಟಗಳಾಗಿ ಪರಿವರ್ತನೆಗೊಂಡಿದೆ. ಪೈಸಾರಿ ಮತ್ತು ಸಿಎನ್‍ಡಿ ಜಾಗವು ಕಬಳಿಕೆಯಾಗಿದೆ. ಅಲ್ಲದೇ ವನ್ಯಜೀವಿಗಳಿಗೆ ಸೀಮಿತವಾದ ಆಹಾರ ಪದಾರ್ಥಗಳೂ ಇಲ್ಲವಾಗಿದೆ. ಕಾರಣ, ಹೇಳಬೇಕಾಗಿಲ್ಲ.

Advertisement

ಉದಾಹರಣೆಗೆ, ಕಾಡಾನೆಗಳಿಗೆ ಪ್ರಿಯವಾದ ಬಿದಿರನ್ನು ಅವುಗಳಿಗಾಗಿಯೇ ಉಳಿಸಿ ಬೆಳೆಸಿದೆ ಬಿದಿರು ಇಲ್ಲವಾಗುತ್ತಿದೆ.  ಇದರಿಂದ ಕಾಡಿನಲ್ಲಿ ಆಹಾರದ ಕೊರತೆ ಕಾಡುತ್ತಿದ್ದು, ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಪ್ರಕೃತಿಯ ಮೇಲಿನ ದಾಳಿಯಿಂದಾಗಿ ಕೊಡಗಿನಲ್ಲಿ ಜಲ ಮೂಲಗಳು ಬತ್ತಲು ಆರಂಭವಾಗಿದೆ. ಅಲ್ಲದೇ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿನ ಸಮಸ್ಯೆ ಮಿತಿಮೀರುತ್ತಿದೆ. ನಿತ್ಯ ತಂಪಾಗಿರುತ್ತಿದ್ದ ಕೊಡಗಿನ ಪರಿಸರ ಇಂದು ತಾಪಮಾನ ಏರಿಕೆಯಿಂದ ಸಮತೋಲನ ಕಳೆದುಕೊಳ್ಳುತ್ತಿದೆ.

ಕಾಡನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶ್ವಮಟ್ಟದಲ್ಲಿ “ಸೀಡ್ ಬಾಲ್” ಎಂಬ ಯೋಜನೆಯನ್ನು ಆಯಾ ಪ್ರದೇಶ ಮತ್ತು ಪರಿಸರಕ್ಕೆ ಅನುಗುಣವಾಗಿ ಜಾರಿಗೆ ತರಲಾಗುತ್ತಿದೆ. ಬೀಜಗಳನ್ನು ಮಣ್ಣಿನ ಉಂಡೆಗಳಾಗಿ ಮಾಡಿ ಅರಣ್ಯ ಪ್ರದೇಶ ಸೇರಿದಂತೆ ಇನ್ನಿತರ ಖಾಲಿ ಜಾಗದಲ್ಲಿ “ಸೀಡ್ ಬಾಲ್” ಎಸೆಯಲಾಗುತ್ತಿದೆ. ಇದು ಮಳೆಗಾಲದಲ್ಲಿ ಮೊಳಕೆಯೊಡೆದು ಗಿಡ ಮರಗಳಾಗುತ್ತವೆ. ಈ ಯೋಜನೆ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ ಮತ್ತು ಪರಿಣಾಮಕಾರಿಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಕೂಡ ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಅಗತ್ಯವಿದೆ. ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಜಿಲ್ಲೆಯ ಪರಿಸರವಾದಿ ಸಂಘಟನೆಗಳು “ಸೀಡ್ ಬಾಲ್” ಯೋಜನೆಯನ್ನು ಅನುಷ್ಠಾನಗೊಳಿಸಲು ಕಾರ್ಯಯೋಜನೆ ರೂಪಿಸಬೇಕಾಗಿದೆ. ಪರಿಸರ ಸ್ನೇಹಿ ಹಾಗೂ ವನ್ಯಜೀವಿಗಳ ಆಹಾರಕ್ಕೆ ಪೂರಕವಾದ ಗಿಡ, ಮರಗಳನ್ನು ಬೆಳೆಸುವ ಕಾರ್ಯವೂ ಆಗಬೇಕಾಗಿದೆ. ಅರಣ್ಯ ಪ್ರದೇಶದಲ್ಲಿರುವ ಖಾಲಿ ಜಾಗ, ಬೆಟ್ಟ ಗುಡ್ಡ, ನದಿದಂಡೆ, ದೇವರ ಕಾಡು, ಗೋಮಾಳ, ಕಾಡ್ಗಿಚ್ಚಿನಿಂದ ಉಂಟಾಗಿರುವ ಖಾಲಿ ಜಾಗ ಇನ್ನಿತರ ಭಾಗಗಳಲ್ಲಿ “ಸೀಡ್ ಬಾಲ್” ಗಳನ್ನು ಎಸೆಯಲು ಅಗತ್ಯ ಕಾರ್ಯ ಯೋಜನೆ ಮಾಡಬೇಕಾಗಿದೆ. ವಿನಾಕಾರಣ ಪ್ರತಿಭಟನೆಗಳಿಗೆ ದುಂದು ವೆಚ್ಚ ಮಾಡದೆ “ಸೀಡ್ ಬಾಲ್” ಗಳಂತಹ ಯೋಜನೆಗಳಿಗೆ ಹಣ ವ್ಯಯಿಸಿದರೆ ಪರಿಸರ ಸಂರಕ್ಷಣಾ ಕಾರ್ಯ ಅರ್ಥಪೂರ್ಣ ಎನ್ನಿಸಿಕೊಳ್ಳುತ್ತದೆ.

Advertisement

 ಪರಿಸರ ಸ್ನೇಹಿ ಪ್ರವಾಸೋದ್ಯಮ :

ಹಸಿರ ಪರಿಸರದ ಕೊಡಗು ಇಂದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿ ಪಡೆದುಕೊಂಡಿದೆ. ಪ್ರವಾಸೋದ್ಯಮವನ್ನೇ, ಸ್ಥಳೀಯರು ಆದಾಯ ಮೂಲವನ್ನಾಗಿ ಪರಿವರ್ತಿಸಿಕೊಂಡಿರುವುದರಿಂದ ಎಲ್ಲೆಂದರಲ್ಲಿ ರೆಸಾರ್ಟ್, ಹೊಟೇಲ್, ಲಾಡ್ಜ್ ಗಳು ತಲೆ ಎತ್ತುತ್ತಿದ್ದು, ಪರಿಸರದ ಸಮತೋಲನ ಹದಗೆಡುತ್ತಿದೆ. ಗುಡ್ಡಗಾಡು ಪ್ರದೇಶವನ್ನು ನಾಶ ಮಾಡಲಾಗುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಏಕೈಕ ಉದ್ದೇಶದಿಂದ ಬೆಟ್ಟಗುಡ್ಡಗಳಲ್ಲಿ ವ್ಯೂ ಪಾಯಿಂಟ್‍ಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಗುಡ್ಡಗಳನ್ನು ನಾಶಮಾಡಲಾಗುತ್ತಿದ್ದು, ಇದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ.

Advertisement

ಹಸಿರ ಗುಡ್ಡಗಾಡುಗಳ ಭೂ ಪರಿವರ್ತನೆಗೆ ಯಾವುದೇ ಕಾರಣಕ್ಕೂ ಅನುಮತಿಯನ್ನು ನೀಡಬಾರದು. ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಮಾತ್ರ ಒತ್ತು ನೀಡಲು ಜಿಲ್ಲಾಡಳಿತ ಪ್ರೋತ್ಸಾಹ ನೀಡಬೇಕು. ರೆಸಾರ್ಟ್, ಹೊಂಸ್ಟೇ, ಲಾಡ್ಜ್ ಗಳು ಹೆಚ್ಚಾದಂತೆಲ್ಲ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಬಾಟಲಿಗಳು ಸೇರಿದಂತೆ ಇನ್ನಿತರ ತ್ಯಾಜ್ಯಗಳು ಕಂಡುಬರುತ್ತಿದೆ. ರಸ್ತೆ, ಪವಿತ್ರ ಕ್ಷೇತ್ರಗಳು, ನದಿ ಪ್ರದೇಶ ಸೇರಿದಂತೆ ಹಲವು ಪ್ರದೇಶಗಳನ್ನು ತ್ಯಾಜ್ಯ ಕಲುಷಿತಗೊಳಿಸುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತ್ , ತಾಲೂಕು ಪಂಚಾಂಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲಾ ಆಡಳಿತ ವ್ಯವಸ್ಥೆಗಳು ಗಮನ ಹರಿಸಿ ಪರಿಸರಕ್ಕೆ ವಿರುದ್ಧವಾದ ಪ್ರವಾಸೋದ್ಯಮಕ್ಕೆ ಕಡಿವಾಣ ಹಾಕಬೇಕು ಮತ್ತು ಪರಿಸರಕ್ಕೆ ಹಾನಿ ಉಂಟುಮಾಡುವ ಪ್ರವಾಸಿಗರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ಜೂನ್ 5 ರಂದು ನಡೆಸುವ ವಿಶ್ವ ಪರಿಸರ ದಿನ ಕೇವಲ ಜೂನ್ 5 ಕ್ಕಷ್ಟೇ ಸೀಮಿತವಾಗದೆ ಪ್ರತೀ ದಿನ ಪರಿಸರದ ಮೇಲಿನ ಕಾಳಜಿಯ ಪರಿಸರ ದಿನ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಯುವ ಸಮೂಹ ಕಾರ್ಯೋನ್ಮಖರಾಗಿ ಪರಿಸರವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು. ಪರಿಸರವನ್ನು ಉಳಿಸುವುದರಿರೊಂದಿಗೆ ಬೆಳೆಸುವ ಕಾರ್ಯಕೂಡ ಆಗಬೇಕಾಗಿದೆ.

 

Advertisement

ಅಭಿಪ್ರಾಯ:

Advertisement

 

 

Advertisement
  • # ಬೊಳ್ಳಜಿರ ಬಿ.ಅಯ್ಯಪ್ಪ , ಮಡಿಕೇರಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಪರಿಸರ ಉಳಿದರೆ ಕೊಡಗು ಉಳಿದೀತು…..! , ಬನ್ನಿ ಪರಿಸರ ಉಳಿಸೋಣ….."

Leave a comment

Your email address will not be published.


*