ಕೋಲ್ಕತಾ: ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಭಾರತದ ಕ್ರಿಕೆಟ್ ತಂಡ ಇನಿಂಗ್ಸ್ ಹಾಗೂ 46 ರನ್ ಗಳ ಜಯ ಗಳಿಸಿದೆ.
ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಎರಡು ಪಂದ್ಯಗಳ ಸರಣಿಯನ್ನು ಭಾರತ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ವೇಗಿ ಇಶಾಂತ ಶರ್ಮಾ ಅವರು ಪಂದ್ಯ ಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೂರನೇ ದಿನವಾಗಿರುವ ರವಿವಾರ ಬಾಂಗ್ಲಾದೇಶ ಎರಡನೇ ಇನಿಂಗ್ಸ್ ನಲ್ಲಿ ಉಮೇಶ್ ಯಾದವ್ (53ಕ್ಕೆ 5) ಮತ್ತು ಇಶಾಂತ್ ಶರ್ಮಾ(56ಕ್ಕೆ 4) ದಾಳಿಗೆ ಸಿಲುಕಿ 41.1 ಓವರ್ ಗಳಲ್ಲಿ 195 ರನ್ ಗಳಿಗೆ ಆಲೌಟಾಗಿದೆ. ಮುಶ್ಫೀಕುರ್ರಹೀಂ 74 ರನ್ (96ಎ, 13ಬೌ) ಗಳಿಸಿರುವುದು ಎರಡನೇ ಇನಿಂಗ್ಸ್ ನಲ್ಲಿ ಬಾಂಗ್ಲಾ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಮೊದಲ ಇನಿಂಗ್ಸ್ ನಲ್ಲಿ ಬಾಂಗ್ಲಾ 106 ರನ್ ಗಳಿಸಿತ್ತು. ಮೊದಲ ಇನಿಂಗ್ಸ್ ನಲ್ಲಿ ಭಾರತ 9 ವಿಕೆಟ್ ನಷ್ಟದಲ್ಲಿ 347 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು.