ನವದೆಹಲಿ: ಪ್ರವಾಹದಿಂದ ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದ ರಾಜ್ಯಕ್ಕೆ ಕೇಂದ್ರ ಸರಕಾರ ಎರಡನೆಯ ಕಂತಿನ ಪರಿಹಾರ ಬಿಡುಗಡೆ ಘೋಷಣೆ ಮಾಡಿದೆ.
ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಏಳು ರಾಜ್ಯಗಳಿಗೆ 5,908 ಕೋಟಿ ರೂ ಅಧಿಕ ಅತಿವೃಷ್ಟಿ ಪರಿಹಾರ ನೀಡಲು ಅನುಮತಿ ನೀಡಲಾಗಿದೆ. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅತಿವೃಷ್ಟಿಯಿಂದ ಉಂಟಾದ ನಷ್ಟಕ್ಕೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ ಎಂದು ತಿಳಿಸಿದ್ದರು.
ಅತಿವೃಷ್ಟಿಯಿಂದ ತೀವ್ರ ಹಾನಿ ಅನುಭವಿಸಿರುವ ಕರ್ನಾಟಕದ ಪ್ರವಾಹ ಪರಿಹಾರ ನಿಧಿಗೆ ಎರಡನೆಯ ಹಂತದಲ್ಲಿ 1869.85 ಕೋಟಿ ರೂ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ರಾಜ್ಯ ಹೆಚ್ಚಿನ ಪರಿಹಾರ ಕೋರಿದ್ದರೂ ಕೇಂದ್ರ ಸರ್ಕಾರ ಕೇವಲ 1200 ಕೋಟಿ ರೂ ಬಿಡುಗಡೆ ಮಾಡಿತ್ತು.
ಮಧ್ಯಪ್ರದೇಶಕ್ಕೆ 1749.73 ಕೋಟಿ ರೂ., ಮಹಾರಾಷ್ಟ್ರಕ್ಕೆ 956.93 ಕೋಟಿ ರೂ., ಅಸ್ಸಾಂಗೆ 616.63 ಕೋಟಿ ರೂ, ಹಿಮಾಚಲ ಪ್ರದೇಶಕ್ಕೆ 284.93 ಕೋಟಿ ರೂ, ತ್ರಿಪುರಾಕ್ಕೆ 63.32 ಕೋಟಿ ರೂ ಮತ್ತು ಉತ್ತರ ಪ್ರದೇಶಕ್ಕೆ 367.17 ಕೋಟಿ ರೂ. ಪ್ರವಾಹ ಪರಿಹಾರ ನಿಧಿಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. 35 ಸಾವಿರ ಕೋಟಿಗೂ ಅಧಿಕ ನಷ್ಟ ರಾಜ್ಯದಲ್ಲಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಮಳೆಯಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಆಸ್ತಿಪಾಸ್ತಿ ಕಳೆದುಕೊಂಡಿದ್ದರು. ಅತಿವೃಷ್ಟಿಯಿಂದಾಗಿ 35 ಸಾವಿರ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.