ಮಂಗಳೂರು:- ಶ್ರಮ ಸಮ್ಮಾನ ಪ್ರಶಸ್ತಿ ಅರ್ಜಿ ಆಹ್ವಾನವನ್ನು ಫೆಬ್ರವರಿ 25 ರವರೆಗೆ ಮುಂದೂಡುವ ಮೂಲಕ ಗರಿಷ್ಠ ಅರ್ಜಿಗಳನ್ನು ಸ್ವೀಕರಿಸಿ ಎಂದು ಅಪರ ಜಿಲ್ಲಾಧಿಕಾರಿ ಎಮ್.ಜೆ.ರೂಪ ಹೇಳಿದರು.
ಗುರುವಾರ ಜಿಲ್ಲಾಧಿಕಾರಿ ಕೋರ್ಟ್ ಹಾಲ್‍ನಲ್ಲಿ ನಡೆದ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಾರ್ಚ್ 1 ರಂದು ಕಾರ್ಮಿಕ ಸಮ್ಮಾನ ದಿನ ಆಚರಣೆ ಕುರಿತು ಜಿಲ್ಲಾ ಮಟ್ಟದ ತ್ರಿಪಕ್ಷೀಯ ನಿರ್ವಹಣಾ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಮಾಲಿ ಕಾರ್ಮಿಕರು, ಗೃಹ ಕಾರ್ಮಿಕರು, ಚಿಂದಿ ಆಯುವವರು, ಟೈಲರ್‍ಗಳು, ಮೆಕ್ಯಾನಿಕ್ ಕಾರ್ಮಿಕರು, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಭಟ್ಟಿ ಕಾರ್ಮಿಕರು, ಚಾಲಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಈ ಎಲ್ಲಾ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ ನೀಡಲಾಗುವ ಶ್ರಮ ಸಮ್ಮಾನ ಪ್ರಶಸ್ತಿ ಅರ್ಜಿಯನ್ನು ಸಲ್ಲಿಸಲು ಫೆಬ್ರವರಿ 25 ಸಂಜೆಯವರೆಗೆ ಅವಕಾಶವಿದ್ದು, ಗರಿಷ್ಠ ಅರ್ಜಿಯನ್ನು ಸ್ವೀಕರಿಸಿ ಎಂದು ಸೂಚಿಸಿದರು.
ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಾರ್ಚ್ 1 ರಂದು ಶ್ರಮ ಸಮ್ಮಾನ ದಿನ ಆಚರಣೆ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ 13 ವರ್ಗದ ಕಾರ್ಮಿಕರನ್ನು ಗುರುತಿಸಿ ಶ್ರಮ ಸಮ್ಮಾನ ಪ್ರಶಸ್ತಿ ನೀಡಲಾಗುತ್ತದೆ. ಇದರಲ್ಲಿ ಪ್ರಥಮ ಪ್ರಶಸ್ತಿ ರೂ 15,000 ಮೌಲ್ಯದ ಸ್ವರ್ಣ ಪದಕ, ದ್ವಿತೀಯ ಪ್ರಶಸ್ತಿ ರೂ. 10,000 ಮೌಲ್ಯದ ರಜತ ಪದಕ, ತೃತೀಯ ಪ್ರಶಸ್ತಿ ರೂ 8,000 ಮೌಲ್ಯದ ರಜತ ಪದಕವನ್ನು ನೀಡಲಾಗುತ್ತದೆ ಎಂದು ಉಪವಿಭಾಗ-1ರ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ ಸಭೆಗೆ ತಿಳಿಸಿದರು.
ಸಭೆಯಲ್ಲಿ ಸರ್ಕಾರದ ಆಶಾದೀಪಾ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೆಲಸಗಾರರನ್ನು ನೋಂದಾಯಿಸಿಕೊಂಡ ಮಾಲೀಕರಿಗೆ, ಮಾಲೀಕರ ಪಾಲಿನ ಭವಿಷ್ಯನಿಧಿ ವಂತಿಗೆ ಶೇ.12 ಹಾಗೂ ಇ.ಎಸ್.ಐ ವಂತಿಗೆ ಶೇ.3.25 ಮರುಪಾವತಿಯ ಚೆಕ್‍ನ್ನು ಯುನಿಟಿ ಆಸ್ಪತ್ರೆ, ಫಸ್ಟ್ ನ್ಯೂರೋ, ಫಾದರ್ ಮುಲ್ಲರ್ ಆಸ್ಪತ್ರೆ, ಅನುಪಮಾ ಫೀಡ್ಸ್ ಸಂಸ್ಥೆಯ ಮಾಲೀಕರಿಗೆ ಅಪರ ಜಿಲ್ಲಾಧಿಕಾರಿ ವಿತರಿಸಿದರು.
ಸಭೆಯಲ್ಲಿ ಉಪ ವಿಭಾಗ-2ರ ಕಾರ್ಮಿಕ ಅಧಿಕಾರಿ ಅಮರೇಂದ್ರ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅಸಂಘಟಿತ ವಲಯದ ಸದಸ್ಯರು ಉಪಸ್ಥಿತರಿದ್ದರು.