ಸುಳ್ಯ: ನಾಡ ಹಬ್ಬಗಳ ಆಚರಣೆ ಸಮಿತಿ ತಾಲೂಕು ಆಡಳಿತ, ಸುಳ್ಯ ತಾಲೂಕು ಸವಿತಾ ಸಮಾಜ, ಸವಿತಾ ಸಮಾಜ ಮಹಿಳಾ ಘಟಕ ಮತ್ತು ಸವಿತಾ ಯುವ ಘಟಕ ಮತ್ತು ಬಾರ್ಬರ್ಸ್ ಅಸೋಸಿಯೇಷನ್ ಸುಳ್ಯ ತಾಲೂಕು ಇವರುಗಳ ಸಂಯುಕ್ತ ಆಶ್ರಯದಲ್ಲಿ ಸವಿತಾ ಮಹರ್ಷಿ ಜಯಂತಿ ಹಾಗೂ ಸತ್ಯನಾರಾಯಣ ಪೂಜೆಯ ದಶಮಾನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಫೆ.4 ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಳದ ಮುಂಭಾಗದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಗುರುರಾಜ್ ಅಜ್ಜಾವರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ವಿವರ ನೀಡಿದರು. ಅಂದು ಸಂಜೆ ಕಾರ್ಯಕ್ರಮ ನಡೆಯಲಿದ್ದು, ಸವಿತಾ ಧರ್ಮಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಾಸಕ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುವುದು. ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ ಪ್ರಶಸ್ತಿ ಪ್ರದಾನ ಮಾಡುವರು. ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಸೇರಿದಂತೆ ಹಲವು ಗಣ್ಯ ರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಸವಿತಾ ಸಮಾಜದ ಮುಖಂಡ ಹಾಗೂ ಪತ್ರಕರ್ತ ಹರೀಶ್ ಬಂಟ್ವಾಳ ರಿಗೆ ‘ಸವಿತಾ ಶ್ರೀ ಪ್ರಶಸ್ತಿ’ ಹಾಗೂ ಸವಿತಾ ಸಮಾಜದ ಸ್ಥಾಪಕಾಧ್ಯಕ್ಷ ಮೋಹನ್ ಭಂಡಾರಿಯವರಿಗೆ ‘ಸಾಧನ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಾಜಿ ಅಧ್ಯಕ್ಷರಾದ ಗಂಗಾಧರ ಎಂ.ಎಂ., ಯಸ್.ಪದ್ಮನಾಭ, ಕೆಂಚಪ್ಪ ಭಂಡಾರಿ, ದಿನೇಶ್ ಗುತ್ತಿಗಾರು, ವಸಂತ ಮೂರಾಜೆಯವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಸಮಿತಿ ಅಧ್ಯಕ್ಷೆ ಇಂದಿರಾ ಪದ್ಮನಾಭ, ಕಾರ್ಯದರ್ಶಿ ಭಾರತಿ ಬಂಟ್ವಾಳ್, ಯುವ ಘಟಕದ ಖಜಾಂಚಿ ನವೀನ್ ಸೂಂತೋಡು, ಬಾರ್ಬರ್ಸ್ ಅಸೋಸಿಯೇಷನ್ ಖಜಾಂಚಿ ಧನು ಮೂರ್ನಾಡು, ಗೀತಾಂಜಲಿ, ಸಮಿತಿ ಗೌರವ ಸಲಹೆಗಾರ ಹರೀಶ್ ಬಂಟ್ವಾಳ್ ಇದ್ದರು.