ಬಳ್ಪ: ಬಳ್ಪ ಆದರ್ಶ ಗ್ರಾಮದಲ್ಲಿ 46 ಮನೆಗಳಲ್ಲಿ ಇನ್ನೂ ಶೌಚಾಲಯವಿಲ್ಲ ಎಂಬ ಮಾಹಿತಿಯನ್ನು ಆಂಗ್ಲ ದೈನಿಕವೊಂದು ಪ್ರಕಟಿಸಿದೆ.
ಕಳೆದ ಒಂದು ವಾರದಿಂದ ಬಳ್ಪ ಆದರ್ಶ ಗ್ರಾಮವು ಚರ್ಚೆಯಲ್ಲಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯವಾಗಿದೆ ಎಂದು ವಾದ ಒಂದು ಕಡೆಯಾದರೆ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬ ವಾದ ಇನ್ನೊಂದು ಕಡೆ. ರಸ್ತೆಯೇ ಅಭಿವೃದ್ಧಿಯಲ್ಲ ಎಂಬ ವಾದ ಒಂದು ಕಡೆಯಾದರೆ ರಸ್ತೆಯೂ ಅಭಿವೃದ್ಧಿಗೆ ಪೂರಕ ಎಂಬ ಬಲವಾದ ವಾದ ಮತ್ತೊಂದು ಕಡೆ. ಜನಸಾಮಾನ್ಯರು ನಮಗೇನು ಆದರ್ಶ ಗ್ರಾಮದಲ್ಲಿ ಸಿಕ್ಕಿಲ್ಲ ಎಂದರೆ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತದೆ ಎನ್ನುತ್ತಾರೆ ಪಕ್ಷಗಳ ಮುಖಂಡರು.
ಡಿಜಿಟಲ್ ಇಂಡಿಯಾ ಎನ್ನುತ್ತಾರೆ ಆದರೆ ಬಳ್ಪ ಗ್ರಾಮದಲ್ಲಿ ಬಿ ಎಸ್ ಎನ್ ಎಲ್ 3ಜಿ ಸೇವೆ ಬಿಡಿ ಸರಿಯಾಗಿ ಮಾತನಾಡಲು ಖಾಸಗಿ ನೆಟ್ ವರ್ಕ್ ಬಳಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಜನತೆ. ಖಾಸಗಿ ನೆಟ್ ವರ್ಕ್ ಆದರೂ ಇದೆಯಲ್ಲ ಎನ್ನುತ್ತಾರೆ ಮುಖಂಡರು. ಹೀಗಾಗಿ ಕಳೆದ ವಾರದ ಚಯರ್ ಮೇಲೆ ರೋಗಿಯೊಬ್ಬರನ್ನು ಕರೆದುಕೊಂಡು ಹೋದ ಬಳಿಕ ಈಗ ಚರ್ಚೆಯ ಮೇಲೆ ಚರ್ಚೆ ನಡೆಯುತ್ತಿದೆ. ಇದೀಗ ಶೌಚಾಲಯವೇ 46 ಮನೆಗಳಲ್ಲಿ ಇಲ್ಲ ಎಂಬ ಮಾಹಿತಿಯನ್ನು ಆಂಗ್ಲ ದೈನಿಕ ವರದಿ ಮಾಡಿದೆ.