ಸವಣೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹುಟ್ಟೂರು ಪಾಲ್ತಾಡಿಗೆ ಮೊದಲ ಬಾರಿಗೆ ಆಗಮಿಸಿದ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಹುಟ್ಟೂರ ಸ್ವಾಗತ ಹಾಗೂ ಅಭಿನಂದನ ಕಾರ್ಯಕ್ರಮ ಕುಂಜಾಡಿಯಲ್ಲಿ ಶುಕ್ರವಾರ ನಡೆಯಿತು.
ಪುತ್ತೂರಿನಿಂದ ಸವಣೂರಿಗೆ ಆಗಮಿಸಿದ ನಳಿನ್ ಕುಮಾರ್ ಕಟೀಲ್ ಅವರನ್ನು ಸವಣೂರಲ್ಲಿ ಚೆಂಡೆ ಮೇಳದೊಂದಿಗೆ ಪಟಾಕಿ ಸಿಡಿಸಿ ಬೃಹತ್ ಹೂಹಾರ ಹಾಕಿ ಸ್ವಾಗತಿಸಿ ತೆರೆದ ವಾಹನದಲ್ಲಿ ಸವಣೂರು ಪೇಟೆಯಿಂದ ಚಂದ್ರನಾಥ ಬಸದಿಯವರೆಗೆ ಮೆರವಣಿಗೆ ಮಾಡಲಾಯಿತು.ಸವಣೂರು ಜಂಕ್ಷನ್ನಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ,ಹಿರಿಯ ಉದ್ಯಮಿ ಎನ್ ಸುಂದರ ರೈ ,ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ್,ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಉಪಾಧ್ಯಕ್ಷ ರವಿಕುಮಾರ್ ಹಾಗೂ ಸದಸ್ಯರು ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಮತ್ತು ಕುಟುಂಬಸ್ಥರು, ಪಕ್ಷದ ಪ್ರಮುಖರು,ಕಾರ್ಯಕರ್ತರು ,ಗ್ರಾ.ಪಂ.ಸದಸ್ಯರು ಹೂ ಹಾರ ಹಾಕಿ ಸ್ವಾಗತಿಸಿದರು.
ಸವಣೂರು ಬಸದಿಯಲ್ಲಿ ಶ್ರಾವಣ ಮಾಸದ ಶುಕ್ರವಾರದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.ಬಸದಿಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಶತ್ರುಂಜಯ ಆರಿಗ ಅವರು ನಳಿನ್ ಅವರನ್ನು ಗೌರವಿಸಿದರು.
ಹುಟ್ಟೂರ ಅಭಿನಂದನೆ:ಕುಂಜಾಡಿಯಲ್ಲಿ ಹುಟ್ಟೂರು ಹಾಗೂ ಕುಟುಂಬಸ್ಥರ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ,ನಳಿನ್ ಕುಮಾರ್ ,ಈ ಮಣ್ಣಿನ ಶಕ್ತಿಯಿಂದಾಗಿ ಅತ್ಯುನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗಿದೆ.ನನ್ನ ಎಲ್ಲಾ ಬೆಳವಣಿಗೆಯ ಹಿಂದಿರುವ ಶಕ್ತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಸಂಘದ ಮೂಲಕ ಸಾಮಾಜಿಕ ಕ್ಷೇತ್ರಕ್ಕೆ ಪರಿಚಯಿಸಿದ ಗುರು ಬಿ.ಕೆ.ರಮೇಶ್ ಅವರು ಎಂದರು. ಹುಟ್ಟೂರಿನ ಮೇಲೆ ತನಗೆ ವಿಶೇಷ ಪ್ರೀತಿ ಹಾಗೂ ಅಭಿಮಾನ. ತನಗೆ ರಾಜಕೀಯಕ್ಕೆ ಬರಲು ಇಷ್ಟವಿರಲಿಲ್ಲ .ಲೋಕ ಸಭಾ ಚುನಾವಣೆಗೆ ಮುನ್ನವೇ ಮೂಡಬಿದಿರೆ ಕ್ಷೇತ್ರದ ಅಭ್ಯರ್ಥಿಯಾಗಲು ಪಕ್ಷ ಸೂಚಿಸಿತ್ತು. ಆದರೆ ತಿರಸ್ಕರಿಸಿದೆ. ಲೋಕ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಡುವಾಗಲೂ ಒಪ್ಪಲಿಲ್ಲ. ಕೊನೆಗೆ ಸಂಘದ ಹಿರಿಯರ ಸೂಚನೆಯಂತೆ ಅನಿವಾರ್ಯವಾಗಿ ಚುನಾವಣೆಗೆ ಸ್ಫರ್ಧಿಸಿದೆ.ಆ ಬಳಿಕದಿಂದ ಮೂರು ಬಾರಿ ಸಂಸದನಾಗಿ ಆಯ್ಕೆಯಾದೆ.ಯಾವತ್ತೂ ಅವಕಾಶಕ್ಕಾಗಿ ಯಾರ ಮನೆ ಬಾಗಿಲೂ ತಟ್ಟಿಲ್ಲ . ಪಕ್ಷದ ರಾಜ್ಯಾಧ್ಯಕ್ಷನಾಗುವಂತೆಯೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆಮಾಡಿ ಸೂಚಿಸಿದರು.ಎಲ್ಲಾ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇನೆ .ಸಂಘದ ಶಿಕ್ಷಣ ಹಾಗೂ ಮಾರ್ಗದರ್ಶನದಿಂದ ಎತ್ತರಕ್ಕೆ ಬೆಳೆಯುಂವತಾಗಿದೆ.ಯಾವುದೇ ಅಧಿಕಾರ ಶಾಶ್ವತವಲ್ಲ ಪ್ರೀತಿ ಬಾಂಧವ್ಯ ಶಾಶ್ವತ ಎಂದ ಅವರು ಬಾಲ್ಯದ ಶಾಲಾ ದಿನಗಳು ಹಾಗೂ ಸಂಘದ ಸಂಪರ್ಕದ ನಂತರದ ದಿನಗಳನ್ನು ನೆನಪಿಸಿಕೊಂಡು ಬಾವುಕರಾದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ,ನಳಿನ್ ಅವರ ಗುರು ಬಿ.ಕೆ.ರಮೇಶ್, ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯರಾದ ಪ್ರಮೀಳಾ ಜನಾರ್ಧನ್, ಪುಷ್ಪಾವತಿ ಬಾಳಿಲ, ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ, ಪುಷ್ಪಾವತಿ ಕಳುವಾಜೆ, ಎಸ್.ಎನ್.ಮನ್ಮಥ, ಸುಳ್ಯ ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್ ರೈ, ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸವಣೂರು ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಪಾಲ್ತಾಡಿ ಬೂತ್ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಬಲಾಡಿ , ಸುಳ್ಯ ನಗರ ಪಂ.ಮಾಜಿ ಸದಸ್ಯ ಎನ್.ಎ.ರಾಮಚಂದ್ರ ಮೊದಲಾದವರಿದ್ದರು. ಬಳಿಕ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಳಿನ್ ಅವರನ್ನು ಅಭಿನಂದಿಸಲಾಯಿತು.
ಅಮೃತ್ ಕುಮಾರ್ ರೈ ಕುಂಜಾಡಿ ಸ್ವಾಗತಿಸಿ, ಪ್ರಪುಲ್ಲಚಂದ್ರ ರೈ ವಂದಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.