ಸೋಣಂಗೇರಿ: ಸುಳ್ಯ-ಬೆಳ್ಳಾರೆ ರಸ್ತೆಯ ಸೋಣಂಗೇರಿ ಸಮೀಪದ ಬೇಂಗಮಲೆ ಕಾಡಿನಲ್ಲಿ ಕಸದ ರಾಶಿ ಹಾಗೂ ತ್ಯಾಜ್ಯ ಮತ್ತೆ ಕಾಣಿಸಿಕೊಂಡು ಈಗ ತ್ಯಾಜ್ಯ ಘಟಕ ನಿರ್ಮಾಣವಾಗಿದೆ.
ರಸ್ತೆಯ ಎರಡೂ ಕಡೆಗಳಲ್ಲಿ ಕೋಳಿ ತ್ಯಾಜ್ಯ, ಬಿಯರ್ ಬಾಟಲ್, ಪ್ಲಾಸ್ಟಿಕ್ ಬಾಟಲ್ ಹಾಗೂ ಇತರ ತಾಜ್ಯಗಳು ರಾಶಿ ಬಿದ್ದಿದ್ದು ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ವಾಹನ ಸವಾರರು, ಪಾದಾಚಾರಿಗಳು ಮೂಗು ಮುಚ್ಚಿಕೊಂಡೇ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಕೋಳಿ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಎಸೆಯುತ್ತಿದ್ದರು. ಕೆಲ ತಿಂಗಳ ಹಿಂದೆ ಈ ಪ್ರದೇಶವನ್ನು ಸ್ಥಳೀಯಾಡಳಿತ ಹಾಗೂ ಸಂಘ ಸಂಸ್ಥೆಗಳು ಜಂಟಿಯಾಗಿ ಸ್ವಚ್ಛಗೊಳಿಸಿ ಕಸ ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳುವ ಸೂಚನಾ ಫಲಕವನ್ನೂ ಹಾಕಲಾಗಿತ್ತು. ಇದಾದ ಬಳಿಕ ಈ ಪ್ರದೇಶದಲ್ಲಿ ತ್ಯಾಜ್ಯ ಎಸೆತ ಕಡಿಮೆಯಾಗಿತ್ತಾದರೂ ಇದೀಗ ಮತ್ತೆ ಅದೇ ಸಮಸ್ಯೆ ಪುನರಾವರ್ತನೆಗೊಂಡಿದೆ.
ಸ್ವಚ್ಚ ಭಾರತದ ಪರಿಕಲ್ಪನೆಯಲ್ಲಿ ದೇಶ ಸಾಗುತ್ತಿರುವಾಗ ಮತ್ತೆ ತ್ಯಾಜ್ಯ ಹಾಕುತ್ತಿರುವುದು ಕೆಲ ನಾಗರಿಕರ ಮನಸ್ಥಿತಿಯ ಕೈಗನ್ನಡಿಯಾಗಿದೆ. ಪ್ರಜ್ಞಾವಂತ ನಾಗರಿಕರು ಈ ಸಮಸ್ಯೆ ಉಲ್ಬಣಿಸದಂತೆ ತಡೆಯಬೇಕಾಗಿದೆ.