ಧರ್ಮಸ್ಥಳ : ಉತ್ತಮ ಗುಣಮಟ್ಟದ ಶಿಕ್ಷಣ ನೌಕರಿ ಹಾಗೂ ಸ್ವ-ಉದ್ಯೋಗದೊಂದಿಗೆ ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಸ್ವ-ಉದ್ಯೋಗ ತರಬೇತಿಯಿಂದಾಗಿ ಮಹಿಳಾ ಸಬಲೀಕರಣವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿ ರುಡ್‍ಸೆಟ್ ಸಂಸ್ಥೆಯಲ್ಲಿ ಬ್ಯೂಟಿ ಪಾರ್ಲರ್ ನಿರ್ವಹಣೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಕೇಶ ವಿನ್ಯಾಸ ಹಾಗೂ ವಸ್ತ್ರ ವಿನ್ಯಾಸದ ಬಗ್ಗೆ ಇಂದು ಎಲ್ಲಾ ಕಡೆಗಳಿಂದಲೂ ಸಾಕಷ್ಟು ಉಪಯುಕ್ತ ಮಾಹಿತಿಗಳು ದೊರಕುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇಶ ವಿನ್ಯಾಸ ಹಾಗೂ ವಧುವಿನ ಅಲಂಕಾರದಲ್ಲಿ ಸೃಜನಾತ್ಮಕತೆ ಇರಬೇಕು. ಯುವತಿಯರನ್ನು ಸೆಕ್ಸಿಯಾಗಿ ಅಲಂಕರಿಸಬಾರದು, “ಲಕ್ಷ್ಮಿ”ಯಾಗಿ ಅಲಂಕರಿಸಬೇಕು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು. ಶ್ರದ್ಧೆಯಿಂದ, ಪ್ರಾಮಾಣಿಕವಾಗಿ, ವಿನೀತರಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಸರಳ ಜೀವನ ನಡೆಸಬೇಕುಎಂದುಅವರು ಸಲಹೆ ನೀಡಿದರು.
ಮೂಲತಃ ಕಾರ್ಕಳದ ನಿವಾಸಿಯಾಗಿದ್ದು ಪ್ರಸ್ತುತ ಮುಂಬಯಿನಲ್ಲಿ ಖ್ಯಾತ ಕೇಶ ವಿನ್ಯಾಸ ತಜ್ಞರಾದ ಶಿವರಾಂ ಕೆ.ಭಂಡಾರಿ ಮಾತನಾಡಿ ಹಸಿವಿನ ದಾಹವಿದ್ದಾಗ ಮಾತ್ರ ಜೀವನದಲ್ಲಿಉನ್ನತ ಸಾಧನೆ ಮಾಡಬಹುದು. ನಾವು ಯಾವುದೇ ಪ್ರತಿಪಲಾಪೇಕ್ಷೆಇಲ್ಲದೆ ಧನಾತ್ಮಕ ಚಿಂತನೆಯಿಂದ ನಮ್ಮ ಕರ್ತವ್ಯವನ್ನು ಮಾಡಿ ಇತರರ ಸೇವೆ ಮಾಡಬೇಕು ಎಂದು ಹೇಳಿದರು. ಶಿಬಿರಾರ್ಥಿಗಳ ಪರವಾಗಿ ಬೆಂಗಳೂರಿನ ಸುಷ್ಮಾ ಶಿವಕುಮಾರ್ ಮತ್ತುಅಮೀರ್‍ಜಾನ್‍ಎಂ.ಜೆ.ತಮ್ಮಅನುಭವವನ್ನು ವಿವರಿಸಿದರು. ಆರ್‍ಸೆಟಿಗಳ ರಾಷ್ಟ್ರೀಯ ನಿರ್ದೇಶಕ ಪಿ.ಸಂತೋಷ್ ಮತ್ತುಅಪರ್ಣಾ ಪಾಠಕ್ ಉಪಸ್ಥಿತರಿದ್ದರು.
ರುಡ್‍ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಮ್.ಜನಾರ್ದನ್ ಸ್ವಾಗತಿಸಿದರು. ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಸಿ.ವಿನಯಕುಮಾರ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು. ನಾಲ್ಕು ದಿನ ನಡೆದ ತರಬೇತಿ ಶಿಬಿರದಲ್ಲಿ ಕರ್ನಾಟಕದಿಂದ 29 ಮಂದಿ ಸೇರಿದಂತೆ ಒಟ್ಟು 54 ಮಂದಿ ಭಾಗವಹಿಸಿದರು.