ಭತ್ತದ ಗದ್ದೆಗಳೆಲ್ಲಾ ಮಾಯವಾಗಿದೆ. ಇರುವ ಗದ್ದೆಗಳೆಲ್ಲಾ ಬೇರೆ ಕೃಷಿಗೆ ವರ್ಗಾವಣೆಯಾಗಿದೆ. ಹಾಗೆಂದು ಆಚರಣೆಗಳು, ಪರಂಪರೆಗಳನ್ನು ಬಿಡಲಾಗುವುದಿಲ್ಲ. ಪ್ರತೀ ವರ್ಷ ಮನೆ ತುಂಬುವ ಕಾರ್ಯಕ್ರಮ, ನವಾನ್ನ ಭೋಜನ ಸೇರಿದಂತೆ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ಯಥಾ ಪ್ರಕಾರ ನಡೆಯಬೇಕು. ಆದರೆ ಆಚರಣೆಯ ಸ್ವರೂಪದಲ್ಲಿ ಬದಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮತ್ತೆ ಮೂಲ ಆಚರಣೆ ಉಳಿಸಿಕೊಳ್ಳಲು ಪ್ರಯತ್ನ ನಡೆಯುತ್ತದೆ. ಇದರ ಫಲವೇ ಭತ್ತದ ಗದ್ದೆಗಳ ನಿರ್ಮಾಣ. ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲು ಬಳಿಯ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಭತ್ತದ ಗದ್ದೆ ಮಾಡಲಾಗುತ್ತಿದೆ. ಈ ಕಡೆಗೆ ಫೋಕಸ್……
ಸುಳ್ಯ: ದೇವಸ್ಥಾನದ ಆದಾಯಕ್ಕಾಗಿ ಅಡಿಕೆ ತೋಟ ಸೇರಿದಂತೆ ಇತರ ಕೃಷಿ ಇರುವುದು ಕಂಡಿದ್ದೇವೆ. ಆದರೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಕೆಲವು ವರ್ಷಳಿಂದ ಭತ್ತದ ಗದ್ದೆ ಮಾಡುತ್ತಿದ್ದಾರೆ. ಈ ಮೂಲಕ ಆಚರಣೆ, ಸಂಪ್ರದಾಯ ಉಳಿಸಿಕೊಂಡರೆ, ಭತ್ತದ ಕೃಷಿಯೂ ಅಗತ್ಯ ಎಂಬ ಸಂದೇಶವನ್ನು ಭಕ್ತರಿಗೆ, ಸಮಾಜಕ್ಕೆ ನೀಡುತ್ತದೆ.
ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ತಾಲೂಕು ಮಾತ್ರವಲ್ಲ ರಾಜ್ಯದ ವಿವಿದೆಡೆಗೆ ತಿಳಿದಿರುವ ಪುಣ್ಯ ಕ್ಷೇತ್ರ. ದೇವಿಯ ಆರಾಧನೆಗೆ ನಾಡಿನ ವಿವಿದೆಡೆಯಿಂದ ಭಕ್ತರು ಆಗಮಿಸುತ್ತಾರೆ. ವಿವಾಹ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಇಲ್ಲಿ ಪ್ರಾರ್ಥನೆ ಮಾಡಿ, ಸೇವೆ ಸಲ್ಲಿಸಿದರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಸಾಕಷ್ಟು ಭಕ್ತರೂ ಆಗಮಿಸುತ್ತಾರೆ. ಎಲ್ಲಾ ಕ್ಷೇತ್ರದಂತೆಯೇ ಇಲ್ಲೂ ಹಲವಾರು ವಾರ್ಷಿಕ ಧಾರ್ಮಿಕ ಆಚರಣೆ ಇರುತ್ತದೆ. ಅದರಲ್ಲಿ ನವಾನ್ನ ಭೋಜನ, ಮನೆ ತುಂಬಿಸುವ ಕಾರ್ಯಕ್ರಮವೂ ಒಂದು.
ಈ ಕಾರ್ಯಕ್ರಮಕ್ಕೆ ಭತ್ತದ ಕೊರಳು ಬೇಕಾಗುತ್ತದೆ. ಬಂದ ಭಕ್ತರಿಗೆಲ್ಲಾ ಮನೆ ತುಂಬಿಸುವ ಕಾರ್ಯಕ್ರಮದಂದು ಭತ್ತದ ಕೊರಳು ಕೊಡಬೇಕಾಗುತ್ತದೆ. ಆದರೆ ದೇವಸ್ಥಾನ ಮಾತ್ರವಲ್ಲ ಸಮೀಪದಲ್ಲೂ ಎಲ್ಲೂ ಗದ್ದೆ ಇಲ್ಲದ ಕಾರಣ ದೂರದ ಪ್ರದೇಶದಿಂದ ತರಬೇಕಾಗಿತ್ತು. ಈ ಕಾರಣದಿಂದ ಕಳೆದ ಕೆಲವು ಸಮಯಗಳಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧೀರ್ ಅಮೆ ಅವರ ನೇತೃತ್ವದಲ್ಲಿ ದೇವಸ್ಥಾನದ ಪಕ್ಕದಲ್ಲಿಯೇ ಗದ್ದೆಯನ್ನು ಮಾಡಿ, ಚೆನ್ನಾಗಿ ಬೆಳೆಸಲಾಗುತ್ತದೆ. ಇದೇ ಗದ್ದೆಯಿಂದ ದೇವಸ್ಥಾನದ ಎಲ್ಲಾ ಆಚರಣೆಗಳಿಗೆ ಕೊರಳು ತೆಗೆಯಲಾಗುತ್ತದೆ, ಭಕ್ತರಿಗೂ ಹಮಚಲಾಗುತ್ತದೆ. ಈ ಮೂಲಕ ಆಚರಣೆಯನ್ನೂ, ಕೃಷಿಯನ್ನೂ ಉಳಿಸುವ ಹಾಗೂ ಬೆಳೆಸುವ ಕಾರ್ಯ ದೇವಸ್ಥಾನದ ಮೂಲಕ ಮಾಡಲಾಗುತ್ತದೆ.
ಗದ್ದೆಗೆ ನಾಟಿ ಮಾಡುವ ಕಾರ್ತಯಕ್ರಮ ಈಚೆಗೆ ನಡೆಯಿತು. ಈ ಸಂದರ್ಭ ದೇವಸ್ಥಾನದ ಅರ್ಚಕ ಜಗದೀಶ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಮುಖರಾದ ಧೀರೇನ್ ಪರಮಲೆ, ಕೊಚ್ಚಿ ವೆಂಕಟ್ರಮಣ ಗೌಡ, ಸುಧೀರ್ ಅಮೆ, ಕುಶಾಲಪ್ಪ ಗೌಡ, ಗೋಪಾಲ , ಸಿಬಂದಿ ಜಯರಾಮ ಮೊದಲಾದವರು ಇದ್ದರು.
ದೇವಸ್ಥಾನದ ಮೂಲಕ ನಮ್ಮ ಪರಂಪರೆ, ಆಚರಣೆ, ಸಂಪ್ರದಾಯಗಳು ಉಳಿಯಬೇಕು. ಈ ಕಾರಣದಿಂದ ದೇವಸ್ಥಾನದಲ್ಲಿ ಗದ್ದೆ ಮಾಡಿ ಭಕ್ತರಿಗೆ ಮನೆತುಂಬಿಸುವ ಕಾರ್ಯಕ್ರಮಕ್ಕೆ ತೆನೆ ನೀಡಲಾಗುತ್ತದೆ. – ಧೀರೇನ್ ಪರಮಲೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಕಳೆದ ಕೆಲವು ಸಮಯಗಳಿಂದ ಭತ್ತದ ತೆನೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ಪ್ರಸಂಗ ಇತ್ತು. ಈಗ ಅಂತಹ ಪ್ರಮೇಯ ಇಲ್ಲ. ಈ ಕಾರ್ಯದ ಮೂಲಕ ಕೃಷಿ ಪದ್ದತಿ ಹಾಗೂ ಧಾರ್ಮಿಕ ಪದ್ಧತಿ ಎರಡೂ ಉಳಿದುಕೊಂಡಿದೆ. – ಜಗದೀಶ್, ಅರ್ಚಕ