ಸುಳ್ಯ : ಭಿತ್ತಿಪತ್ರಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಕಿಡಿಗೇಡಿಗಳು ತನ್ನ ವೈಯುಕ್ತಿಕ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಇವರ ವಿರುದ್ಧ ಪೊಲೀಸ್ ಇಲಾಖೆಗೆ ಮತ್ತು ಸೈಬರ್ ಸೆಲ್‍ನವರಿಗೆ ದೂರು ನೀಡಲಾಗಿದೆ. ಈ ರೀತಿ ಅಪಪ್ರಚಾರ ಮಾಡುವವರನ್ನು ಪತ್ತೆ ಹಚ್ಚಿ ಇವರ ವಿರುದ್ಧ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶುಭದಾ ಎಸ್.ರೈ ಹೇಳಿದ್ದಾರೆ.
ಸುಳ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕವಾಗಿ ಮತ್ತು ಭ್ರಷ್ಟಾಚಾರ ರಹಿತವಾಗಿ ಜನ ಸೇವೆ ಮಾಡಿದ್ದೇನೆ. ತನ್ನ ಏಳಿಗೆಯನ್ನು ಸಹಿಸದೆ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಈ ರೀತಿಯ ಅಪಪ್ರಚಾರ ಮಾಡುತ್ತಿರಬಹುದು. ತನ್ನ ಮೇಲೆ ಯಾವುದಾದರೂ ರೀತಿಯ ಆರೋಪಗಳಿದ್ದರೆ ಅದರ ಬಗ್ಗೆ ತನಿಖೆ ನಡೆಸಲಿ. ಯಾವುದೇ ರೀತಿಯ ತನಿಖೆಯನ್ನು ಎದುರಿಸಲು ಸಿದ್ಧ. ಆದರೆ ಈ ರೀತಿ ಅಪ ಪ್ರಚಾರ ಮಾಡಿದ ಕಾರಣ ಮನಸಿಗೆ ಭಾರೀ ನೋವು ಮತ್ತು ಬೇಷರ ಆಗಿದೆ. ಅಪಪ್ರಚಾರ ಮಾಡಿ ರಾಜಕೀಯದಿಂದ ಹಿಂದೆ ಸರಿಸುವ ಪಿತೂರಿ ಮಾಡಿರುವ ಸಾಧ್ಯತೆಯೂ ಇದೆ. ಯಾವುದೇ ಕಾರಣಕ್ಕೂ ರಾಜಕೀಯ ಕ್ಷೇತ್ರದಿಂದ ಮತ್ತು ಸಾರ್ವಜನಿಕ ಬದುಕಿನಿಂದ ಹಿಂದೆ ಸರಿಯುವುದಿಲ್ಲ. ನನಗೆ ಎಷ್ಟು ಸಾಧ್ಯವೋ ಅಷ್ಟು ಜನ ಸೇವೆಯನ್ನು ಮುಂದೆಯೂ ಮಾಡುತ್ತೇನೆ ಎಂದು ಹೇಳೀದರು.
ಮಹಿಳಾ ಮೋರ್ಚಾ ಖಂಡನೆ:
ಈ ರೀತಿ ಅಪಪ್ರಚಾರ ಮಾಡುವುದನ್ನು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ತೀವ್ರವಾಗಿ ಖಂಡಿಸುತ್ತದೆ ಎಂದು ಮಹಿಳಾ ಮೋರ್ಚಾ ಮುಖಂಡೆ ಹಾಗು ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಹೇಳಿದ್ದಾರೆ. ಈ ರೀತಿ ಅಪಪ್ರಚಾರ ಮಾಡುವವರನ್ನು ಪತ್ತೆ ಹಚ್ಚಿ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ.ಸದಸ್ಯರಾದ ಪುಷ್ಪಾ ಮೇದಪ್ಪ, ಜಾಹ್ನವಿ ಕಾಂಚೋಡು, ಎಡಮಂಗಲ ಗ್ರಾ.ಪಂ.ಉಪಾಧ್ಯಕ್ಷೆ ಮೋಹಿನಿ, ವೇದಾವತಿ ಮಾಣಿಬೆಟ್ಟು ಉಪಸ್ಥಿತರಿದ್ದರು.