ಮಂಡೆಕೋಲು: ತಾಲೂಕಿನ ಮಂಡೆಕೋಲು ಗ್ರಾಮಪಂಚಾಯತ್ ವ್ಯಾಪ್ತಿಯ ಬೊಳುಗಲ್ಲು ಪ್ರದೇಶದಲ್ಲಿ ನೀರಿನ ಹಾಹಾಕಾರ ಎದ್ದಿದೆ. ಕೃಷಿಗೆ ನೀರಿಲ್ಲದೆ ಒಣಗಿದರೆ , ಕುಡಿಯಲು ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ಇಲ್ಲಿನ ಮನೆಗಳ ಬಾವಿಗಳು, ತೋಟದ ಕೆರೆಗಳು ಬತ್ತಿ ಹೋಗಿವೆ. ಹನಿ-ಹನಿ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಈ ಪ್ರದೇಶದಲ್ಲಿ ಉಂಟಾಗಿದೆ. ಈ ಬಗ್ಗೆ ಪಂಚಾಯತ್ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಪ್ರತೀ ಬೇಸಿಗೆಕಾಲದಲ್ಲೂ ಬೊಳುಗಲ್ಲು ಪ್ರದೇಶದ ಜನರು ನೀರಿನ ಬರ ಎದುರಿಸುತ್ತಿದ್ದಾರೆ. ಗ್ರಾಮ ಪಂಚಾಯತ್‍ನ ವಾರ್ಡ್ ಸಭೆಯಲ್ಲಿ, ಗ್ರಾಮ ಸಭೆಯಲ್ಲಿ ಈ ಕುರಿತು ಜನರು ಒತ್ತಾಯಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬೊಳುಗಲ್ಲು ಪ್ರದೇಶದಲ್ಲಿ 25 ಮನೆಗಳಿದ್ದು ಪ್ರತೀ ಮನೆಯವರು ನೀರಿಗಾಗಿ ಪರದಾಟ ನಡೆಸುವಂತಾಗಿದೆ. ಬೊಳುಗಲ್ಲು ಭಾಗಕ್ಕೆ ಪಂಚಾಯತ್ ಕುಡಿಯುವ ನೀರಿನ ಸಂಪರ್ಕ ಕೂಡ ಇಲ್ಲವಾಗಿದೆ. 1983 ನಂತರ ಇದೇ ಮೊದಲು ಇಷ್ಟೊಂದು ನೀರಿನ ಸಮಸ್ಯೆ ಈ ಪ್ರದೇಶದಲ್ಲಿ ಉಂಟಾಗಿದೆ. ಮಂಡೆಕೊಲು ಗ್ರಾಮದ ಬೊಳುಗಲ್ಲು,ಬೆಂಗತ್ತ ಮಲೆ ಚಾಕೊಟೆ,ಕನ್ಯಾನ,ತೋಟಪ್ಪಾಡಿ ಭಾಗದಲ್ಲಿ ಜಾಸ್ತಿ ಸಮಸ್ಯೆ ಆಗಿದೆ. ಈಗ 5 ಮನೆಗಳಲ್ಲಿ 1 ಮನೆಯಲ್ಲಿ ಮಾತ್ರ ಬಾವಿಯಲ್ಲಿ ನೀರು ಇದ್ದು ಉಳಿದೆಲ್ಲಾ ಕಡೆ ಬತ್ತಿದೆ.
ಗ್ರಾಮ ಪಂಚಾಯತ್‍ಗೆ ಬೊಳುಗಲ್ಲು ಪ್ರದೇಶದ ಜನರ ಪರವಾಗಿ ಮನವಿ ಸಲ್ಲಿಸಿದ ಸ್ಥಳೀಯ ನಿವಾಸಿ ಪ್ರಶಾಂತ್ ಬೊಳುಗಲ್ಲು ದಯಮಾಡಿ ನಮ್ಮ ಪ್ರದೇಶಕ್ಕೆ ನೀರು ಒದಗಿಸುವ ಕುರಿತು ಹೆಚ್ಚಿನ ಆಸಕ್ತಿ ವಹಿಸಬೇಕು. ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
” ಕಳೆದ 3 ವರ್ಷದಿಂದ ಪಂಚಾಯತ್ ವಾರ್ಡ್ ಸಭೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಅಂತ ಮನವಿ ಮಾಡುತ್ತಾ ಬಂದಿದ್ದೇನೆ.ಆದರೆ ಏನು ಉಪಯೋಗ ಆಗಿಲ್ಲ. 700 ಅಡಿಗಳ ವರೆಗೆ ಬೋರ್‍ವೆಲ್ ಕೊರೆದರೂ ನೀರಿಲ್ಲದ ಸ್ಥಿತಿ ಇದೆ. ನಾವೂ ಇರುವುದೇ ಕಾಡಂಚಿನಲ್ಲಿ.ಆದರೂ ಕುಡಿಯಲು ಸಹ ನೀರಿಲ್ಲ” ಎಂದು ಮಂಡೆಕೋಲು ಗ್ರಾಮದ ಬೊಳುಗಲ್ಲು ನಿವಾಸಿ ಪ್ರಶಾಂತ್ ಬೊಳುಗಲ್ಲು “ಸುಳ್ಯ ನ್ಯೂಸ್.ಕಾಂ” ಗೆ ತಿಳಿಸಿದ್ದಾರೆ.