ಮಡಿಕೇರಿ : ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಲ್ಪಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಿಂದ ಮಡಿಕೇರಿಯವರೆಗೆ ಬೈಕ್‍ರ್ಯಾಲಿ ನಡೆಸುವ ಮೂಲಕ ಕೊಡವ ರೈಡರ್ಸ್ ಕ್ಲಬ್ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿತು.
ಬೆಂಗಳೂರಿನ ಕೊಡವ ಸಮಾಜದಿಂದ ಹೊರಟ ಬೈಕ್‍ರ್ಯಾಲಿಗೆ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಹಾಗೂ ಪತ್ರಕರ್ತ ಸಂತೋಷ್ ತಮ್ಮಯ್ಯ ಚಾಲನೆ ನೀಡಿದರು.
ಬೆಂಗಳೂರಿನಿಂದ ಬೈಕ್‍ಗಳಲ್ಲಿ ಸಾಗಿದ ಕ್ಲಬ್‍ನ ಪ್ರಮುಖರು ಮೈಸೂರು, ಗೋಣಿಕೊಪ್ಪ, ವಿರಾಜಪೇಟೆ ಮಾರ್ಗವಾಗಿ ಮಡಿಕೇರಿಗೆ ಆಗಮಿಸಿ ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಹಲವು ವರ್ಷಗಳಿಂದ ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗಿದೆ. ಆದರೆ ಇಲ್ಲಿಯವರೆಗೂ ಈ ಬೇಡಿಕೆ ಬಗ್ಗೆ ಗಂಭೀರ ಚಿಂತನೆ ನಡೆದಿಲ್ಲ. ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆ ಇದೆಯಾದರು ಅದು ಹೆಸರಿಗೆ ಮಾತ್ರ ಎಂಬಂತ್ತಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಾಗ ಖುದ್ದು ಇಲ್ಲಿನ ವೈದ್ಯರುಗಳೇ ಮಂಗಳೂರು, ಮೈಸೂರು ಅಥವಾ ಬೆಂಗಳೂರಿಗೆ ರೋಗಿಗಳನ್ನು ಕರೆದೊಯ್ಯುವಂತೆ ಸೂಚನೆ ನೀಡುತ್ತಾರೆ. ಇದರಿಂದ ರೋಗಿಗಳು ಮಾರ್ಗದ ಮಧ್ಯೆಯೇ ಪ್ರಾಣ ಕಳೆದುಕೊಳ್ಳುತ್ತಿದ್ದು, ಕುಟುಂಬ ವರ್ಗ ಚಿಂತೆಗೀಡಾಗುತ್ತಿದೆ.
ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರಿದ್ದಾರೆ, ಲಕ್ಷಾಂತರ ಪ್ರವಾಸಿಗರು ಬರುತ್ತಿದ್ದಾರೆ. ಕಾರ್ಮಿಕರು ವನ್ಯಜೀವಿಗಳ ದಾಳಿಗೆ ಅಥವಾ ಇನ್ಯಾವುದೇ ಅನಾಹುತಗಳಿಗೆ ಸಿಲುಕಿ ಚಿಂತಾಜನಕ ಸ್ಥಿತಿಗೆ ತಲುಪಿದರೆ ಅಗತ್ಯ ಚಿಕಿತ್ಸೆ ಜಿಲ್ಲೆಯಲ್ಲಿ ಲಭ್ಯವಿಲ್ಲ. ಅಪಘಾತದಲ್ಲಿ ಜನ ಚಿಂತಾಜನಕ ಸ್ಥಿತಿಯಲ್ಲಿ ನರಳಿದರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಬದುಕಿಸುವ ಸೌಲಭ್ಯಗಳಿಲ್ಲ. ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಕಂಡಾಕ್ಷಣ ಅಸಹಾಯಕತೆ ವ್ಯಕ್ತಪಡಿಸುವ ಜಿಲ್ಲೆಯ ವೈದ್ಯಕೀಯ ವರ್ಗ ಹೊರ ಜಿಲ್ಲೆಯ ಕಡೆ ಬೆರಳು ಮಾಡುತ್ತದೆ. ಈ ರೀತಿ ಹೊರ ತೆರಳಿದ ಬಹುತೇಕ ರೋಗಿಗಳು, ಗಾಯಾಳುಗಳು ಮರಳಿದ್ದು ವಿರಳ, ದಾರಿ ಮಧ್ಯದಲ್ಲಿ ಮರಣವನಪ್ಪಿದ್ದೇ ಹೆಚ್ಚು ಎಂದು ಕ್ಲಬ್‍ನ ಸದಸ್ಯರು ಆತಂಕ ವ್ಯಕ್ತಪಡಿಸಿದರು.Advertisement
ಸುಮಾರು ಆರು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕೊಡಗಿನಲ್ಲಿ ಸುಸ್ಸಜ್ಜಿತವಾದ ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಇರುವುದು ಶೋಭೆ ತರುವ ವಿಚಾರವಲ್ಲ. ತಕ್ಷಣ ಸರಕಾರ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಲ್ಪಿಸುವ ಮೂಲಕ ಸಾವು, ನೋವುಗಳನ್ನು ತಪ್ಪಿಸಬೇಕೆಂದು ಮನವಿ ಸಲ್ಲಿಸುವ ಸಂದರ್ಭ ಪ್ರಮುಖರು ಒತ್ತಾಯಿಸಿದರು.
ಕೊಡವ ರೈಡರ್ಸ್ ಕ್ಲಬ್‍ನ ಸಂಚಾಲಕರಾದ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ನಿರ್ದೇಶಕರುಗಳಾದ ಸಣ್ಣುವಂಡ ದರ್ಶನ್ ಕಾವೇರಪ್ಪ, ಬೊಳ್ಳಜಿರ ಪೃಥ್ವಿ ಪೂಣಚ್ಚ, ನಾಳಿಯಂಡ ವಿನೀತ್ ಮುತ್ತಣ್ಣ, ಚಿರಿಯಪಂಡ ಅಶ್ವಿನ್ ಬೋಪಣ್ಣ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೊಡವ ಜಾವಾ, ಯಸ್ಡಿ ಮೋಟರ್ ಸೈಕಲ್ ಕ್ಲಬ್‍ನ ಕೊಕ್ಕಲೇರ ತಿಮ್ಮಯ್ಯ, ಅಜ್ಜಿಕುಟ್ಟೀರ ತಿಮ್ಮಯ್ಯ, ತೀತಿಮಾಡ ಸುಖೇಶ್, ಮಲ್ಲೇಂಗಡ ಸೋಮಣ್ಣ ಹಾಗೂ ತಮ್ಮಣ್ಣ, ಕೊಡವ ಪಡೆ ತಂಡದ ಚೇಂದಂಡ ಶಮಿ ಮತ್ತಿ ಕೊಡಗು ಫಾರ್ ಟುಮಾರೋ ಸಂಘಟನೆಯ ಪ್ರಮುಖರು ಹಾಜರಿದ್ದರು.