ಸುಳ್ಯ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಡ್ಡಮತದಾನದ ಪ್ರಕರಣ ಮತ್ತೆ ಕಾವು ಪಡೆದಿದೆ. ಸತ್ಯದ ನೆಲೆಯಲ್ಲೂ ಇತ್ಯರ್ಥವಾಗದ ಪ್ರಕರಣ ಈಗ ರಾಜೀನಾಮೆ ಸೂಚನೆ ನಂತರವೂ ಪ್ರಕರಣ ಬಗೆಹರಿದಿಲ್ಲ…!
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಡ್ಡಮತದಾನದ ನಂತರ ಬಿಜೆಪಿ ಹಾಗೂ ಸಂಘಪರಿವಾರ ಮತ್ತು ಸಹಕಾರ ಭಾರತಿಯು ಮತದಾನ ಮಾಡಿದ 17 ಮಂದಿಯೂ ರಾಜೀನಾಮೆ ನೀಡಲು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ 3 ಮಂದಿ ಅಧಿಕೃತವಾಗಿ ರಾಜೀನಾಮೆ ಪತ್ರ ನೀಡಿದ್ದರು. ಆದರೆ ಉಳಿದ ಯಾರೊಬ್ಬರೂ ರಾಜೀನಾಮೆ ನೀಡದೇ ಇರುವುದು ಈಗ ಮತ್ತೊಂದು ಚರ್ಚೆಗೆ ಕಾರಣವಾಗಿದೆ.
ಡಿಸಿಸಿ ಬ್ಯಾಂಕ್ ಚುನಾವಣೆಯ ಬಳಿಕ ಅಡ್ಡಮತದಾನದ ಪ್ರಕರಣವು ಕಾವು ಪಡೆದಿತ್ತು. ಅಡ್ಡಮತದಾನ ಮಾಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ. ಕೊನೆಗ ಸತ್ಯದ ಮೊರೆ ಹೋದರೂ ಅಡ್ಡಮತದಾನ ಮಾಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ. ಕೊನೆಗೆ ಡಿಸಿಸಿ ಚುನಾವಣೆಯಲ್ಲಿ ಭಾಗವಹಿಸಿ ಎಲ್ಲಾ 17 ಮಂದಿಯೂ ರಾಜೀನಾಮೆ ನೀಡುವಂತೆ ಬಿಜೆಪಿ ಹಾಗೂ ಸಂಘಪರಿವಾರ ಮತ್ತು ಸಹಕಾರ ಭಾರತಿಯು ಸೂಚನೆ ನೀಡಿತ್ತು. ಇದಕ್ಕಾಗಿ ಹಲವರಿಗೆ ಜವಾಬ್ದಾರಿಯನ್ನೂ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವೆಂಕಟ್ ದಂಬೆಕೋಡಿ, ಪ್ರಸನ್ನ ಎಣ್ಮೂರು ಹಾಗೂ ವಿಷ್ಣು ಭಟ್ ಅಧಿಕೃತವಾಗಿ ರಾಜೀನಾಮೆ ನೀಡಿದ್ದರು. ಉಳಿದ ಕೆಲವರು ಪಕ್ಷದ ಕಚೇರಿಗೆ ರಾಜೀನಾಮೆ ಪತ್ರ ನೀಡಿದ್ದರೆ ಇನ್ನೂ ಕೆಲವರು ರಾಜೀನಾಮೆ ನೀಡಿಲ್ಲ. ಇದೀಗ 10 ದಿನಗಳ ನಂತರವೂ ಯಾವುದೇ ಕ್ರಮ ಆಗದೇ ಇರುವ ಕಾರಣ ಮತ್ತೆ ಚರ್ಚೆಗೆ ಕಾರಣವಾಗಿದೆ.
ಈ ನಡುವೆ ಮತದಾನದಲ್ಲಿ ಭಾಗವಹಿಸಿರುವ ಕೆಲವರು ಸಭೆ ನಡೆಸಿ ರಾಜೀನಾಮೆ ನೀಡದೇ ಇರಲು ನಿರ್ಧರಿಸಿದ್ದು ಇದಕ್ಕಾಗಿ ಪ್ರತ್ಯೇಕ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಸಂಫಪರಿವಾರದ ಪ್ರಮುಖರ ಸಭೆಯೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆ ನೀಡಿರುವ ಪ್ರಸನ್ನ ಎಣ್ಮೂರು “ಸುಳ್ಯನ್ಯೂಸ್.ಕಾಂ” ಜೊತೆ ಮಾತನಾಡಿ, ಕ್ರಮಬದ್ಧವಾಗಿ ರಾಜೀನಾಮೆ ನೀಡಿ 10 ದಿನ ಕಳೆದರೂ ಯಾವುದೇ ಪ್ರತಿಕ್ರಿಯೆ ಯಾರಿಂದರಲೂ ಬಂದಿಲ್ಲ. ಪಕ್ಷದ, ಸಂಘಪರಿವಾರದ ಸೂಚನೆಯಂತೆ ರಾಜೀನಾಮೆ ನೀಡಲಾಗಿದೆ. ಆದರೆ ಯಾವುದೇ ಬೆಳವಣಿಗೆ ಹಾಗೂ ಇತರ ಯಾರೂ ರಾಜೀನಾಮೆ ನೀಡದ ಕಾರಣ ನಾನು ರಾಜೀನಾಮೆ ಪತ್ರ ಹಿಂಪಡೆಯುತ್ತೇನೆ” ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಇದೀಗ ಡಿಸಿಸಿ ಅಡ್ಡಮತದಾನ ಪ್ರಕರಣ ಸುಳ್ಯದಲ್ಲಿ ಮತ್ತೆ ಕಾವು ಪಡೆಯುತ್ತಿದೆ. ಸತ್ಯದ ಜಾಗದಲ್ಲಿ ಹೇಳಿದರೂ, ರಾಜೀನಾಮೆ ಸೂಚನೆ ನೀಡಿದರೂ ಅಡ್ಡಮತದಾನ ಪ್ರಕರಣ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಚರ್ಚೆಗಳು ಹೆಚ್ಚಾಗುತ್ತಿದೆ. ಇದು ಮುಂದೆ ಯಾವ ಪರಿಣಾಮ ಬೀರಲಿದೆ ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.