ಮಡಿಕೇರಿ :ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಹರಿಸಿದ ಪರಿಣಾಮ ಜಲಾವೃತಗೊಂಡ ಕೂಡಿಗೆಯ ಒಂದನೇ ವಾರ್ಡ್‍ನ ಸುಮಾರು 50ಕ್ಕೂ ಅಧಿಕ ಕುಟುಂಬಗಳಿಗೆ ಇನ್ನೂ ಪರಿಹಾರ ನೀಡದಿರುವ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗಿದೆ.
ಕೂಡಿಗೆಯ ಸೇತುವೆ ಸಮೀಪವಿರುವ 50 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಭಾರೀ ನಷ್ಟವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಗ್ರಾಮ ಪಂಚಾಯತ್ ಮೂಲಕ ಸಮಗ್ರ ಮಾಹಿತಿ ಪಡೆದುಕೊಂಡು ತಾತ್ಕಾಲಿಕ ಪರಿಹಾರವಾಗಿ ತಲಾ 3500 ರೂ.ಗಳನ್ನು ನೀಡಿದ್ದರು. ಅಲ್ಲದೆ ಪರಿಶೀಲನೆಯ ನಂತರ ಹೆಚ್ಚುವರಿ ಪರಿಹಾರ ಒದಗಿಸುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ತೆರಳಿದ್ದರು.
ಅದರಂತೆ ಗ್ರಾಮ ಪಂಚಾಯತ್ ಕೂಡ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ದಾಖಲಾತಿಗಳನ್ನು ಕಂದಾಯ ಇಲಾಖೆಗೆ ಒದಗಿಸಿತ್ತು. ಆದರೂ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿದ್ದ ಗ್ರಾಮಸ್ಥರು ಈ ಹಿಂದೆ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆಯನ್ನೂ ನಡೆಸಿದ್ದರಲ್ಲದೆ, ಕಳೆದ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಿದ್ದರು.
ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು, ಪರಿಹಾರ ನೀಡುವ ಭರವಸೆ ನೀಡುವುದರೊಂದಿಗೆ ಚುನಾವಣೆ ಬಹಿಷ್ಕರಿಸದಂತೆ ಸಂತ್ರಸ್ತರ ಮನವೊಲಿಸಿದ್ದರು.ಆದರೆ ಇದುವರೆಗೂ ಸಂತ್ರಸ್ತರಿಗೆ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಇದೀಗ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ.
ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಎರಡು ದಿನಗಳಲ್ಲಿ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿ ಶೀಘ್ರವಾಗಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ನೆರೆ ಸಂತ್ರಸ್ತರು ಪರಿಹಾರಕ್ಕಾಗಿ ಇಷ್ಟೆಲ್ಲಾ ಹರಸಾಹಸ ಮಾಡಿದರೂ ಈವರೆಗೆ ಯಾವುದೇ ಪ್ರಯೋಜವಾಗಿಲ್ಲ. ನೆರೆ ಪರಿಹಾರ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ತೋರಿರುವ ನಿರ್ಲಕ್ಷ್ಯದ ಬಗ್ಗೆ ಹಾಗೂ ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವುದು ಎಂದು ನೆರೆ ಸಂತ್ರಸ್ತರಾದ ದೇವಕಿ ಗೋಪಾಲ್ ಕುಮಾರ್, ರಾಜಣ್ಣ, ಸುನೀತಾ, ಕೃಷ್ಣ, ರಾಮಚಂದ್ರ, ಸ್ವಾಮಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಕುಟುಂಬಸ್ಥರು ತಿಳಿಸಿದ್ದಾರೆ.