ಮಳೆಗಾಗಿ ಹಪಹಪಿಸುತ್ತಿರುವ ಮನಸ್ಸುಗಳು…..

( ಸಾಂದರ್ಭಿಕ ಚಿತ್ರ - ಇಂಟರ್ನೆಟ್ )
Advertisement

ಮಳೆಯ ಲಕ್ಷಣಗಳೇ ಕಾಣುತ್ತಿಲ್ಲ. ಹಸಿರಾಗಿ ಕಾಣುತ್ತಿದ್ದ ಅಡಿಕೆ ತೋಟಗಳು ನೆಟ್ಟಗೆ ನಿಲ್ಲಲಾರದೆ ಸೋತ ಸೋಗೆಗಳನ್ನು ನೆಲದಡಿಗೆ ಮುಖಮಾಡಿಸಿವೆ. ಹಿಂಗಾರಗಳು ಒಣಗಿ ಭವಿಷ್ಯದ ಫಸಲು ನೆಲ ಕಚ್ಚಿವೆ. ಬಾಳೆ, ಕೊಕ್ಕೊ, ಕಾಳುಮೆಣಸಿನಂತಹ ಉಪಬೆಳೆಗಳ ಪರಿಸ್ಥಿತಿಯೂ ಶೋಚನೀಯ. ನದಿ ತೋಡುಗಳು ಬತ್ತಿ, ಕೆರೆ ಬತ್ತಿ ಕೊನೆಗೆ ಕೊಳವೆಬಾವಿಗಳೂ ಬತ್ತಿ ಆಗಸದೆತ್ತರ ಕಣ್ಣುನೆಟ್ಟು ಮಳೆಹನಿಗೋಸ್ಕರ ಹಪಹಪಿಸುವ ಮನಸ್ಸುಗಳದೆಷ್ಟು! ಇಬ್ಬರು ಕೃಷಿಕರು ಮುಖಾಮುಖಿಯಾದಾಗ ನೀರಾವರಿ ಬಿಟ್ಟು ಉಳಿದುತೆಂತ ಇದೆ ಮಾತಾಡಲು. ಕೃಷಿಕರ ಭವಿಷ್ಯ ನಿಂತಿರುವುದೇ ವಾರದೊಳಗೆ ಸುರಿಯುವ ಮಳೆಯಲ್ಲಿ. ಈಗಾಗಲೆ ನೆಲ ಕಾವಲಿಗೆಯಂತೆ ಸುಡುತ್ತಿದೆ. ವಾರ ಕಳೆದರೆ ಕೆಂಡದಂತದೀತೆಂಬ ಭಯ. ನೀರಿಗಾಗಿ ಕೊಡಪಾನ ಹಿಡಿದು ಹತ್ತು ಮೀಟರ್ ನಡೆಯ ಬೇಕಿಲ್ಲದಿದ್ದ ಜಾಗಗಳೆಲ್ಲ ಈಗ ಮಾಯ. ಕೊಡ ಹಿಡಿಯದವರಲ್ಲಿ ಕೊಡ ಹಿಡಿಸಿದ ಬರರಾಯ. ಕರಾವಳಿ ಜಿಲ್ಲೆಗಳಲ್ಲಿ ಎಲ್ಲಿ ನೋಡಿದರೂ ಇದೇ ದೃಶ್ಯ. ಸಾಮಾನ್ಯವಾಗಿ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಉಳಿದ ಪ್ರದೇಶಗಳಿಗಿಂತ ಒಂದಷ್ಟು ಸಮಯ ಮುಂಚಿತವಾಗಿ ಮಳೆರಾಯನ ಆಗಮನವಾಗಿ ಕಡಲ ತೀರದವರ ನೀರದಾಹ ಹೆಚ್ಚಿರುತ್ತಿತ್ತು. ಈ ವರ್ಷ ಎಲ್ಲ ಕಡೆಯೂ ಸಮಾನವೇ ಆಗಿಹೋಗಿದೆ.

Advertisement

ಸ್ವಯಂಕೃತಾಪರಾಧವೇ?

Advertisement
Advertisement

ಮತ್ತಿನ್ನೇನು? ನಮ್ಮಲ್ಲಿ ಆರ್ಥಿಕ ಸಾಕ್ಷರತೆ ಸಾಮಾನ್ಯವಾಗಿ ಇದೆ. ಆದರೆ ಜಲ ಸಾಕ್ಷರತೆ ಇಲ್ಲವೇ ಇಲ್ಲ. ನೀರನ್ನು ಬಳಕೆ ಮಾಡಬೇಕಾದ ಕೌಶಲ್ಯವನ್ನು ನಾವು ಕಲಿಯಲೂ ಇಲ್ಲ ಅದರತ್ತ ಮನಸ್ಸೂ ಇಲ್ಲ. ನೀರಿನ ಬಳಕೆಯ ನಮ್ಮ ಕ್ರಮವೇ ಈಗ ನೀರಿನ ಕೊರತೆಗೆ ಮೂಲ ಕಾರಣ. ಕೈಗಾರಿಕೆಯಾಗಲಿ, ಕೃಷಿಯಾಗಲಿ ನಾವು ನೀರಿಗೆ ತಕ್ಕಂತೆ ವ್ಯವಸ್ಥೆ ರೂಪಿಸಲಿಲ್ಲ. ನಮಗೆ ಬೇಕಾದ ಹಾಗೆ ನೀರನ್ನು ದುಡಿಸಿಕೊಂಡೆವು. ಪ್ರಕೃತಿಯ ಮೇಲೆ ಸವಾರಿ ಮಾಡಿದೆವು. ನೆಲವನ್ನೆಲ್ಲ ಸಾಧ್ಯವಿದ್ದಷ್ಟು ಕಾಂಕ್ರೀಟೀಕರಣ ಮಾಡಿದೆವು. ಕಂಡಕಂಡಲ್ಲಿ ಕೃಷಿ ಮತ್ತು ಆಧುನಿಕ ವ್ಯವಸ್ಥೆಗಳಿಗೋಸ್ಕರ ಕಾಡುಕಡಿದು ಮುಕ್ಕಿದೆವು. ಹೊಸ ಗಿಡ ನಟ್ಟು ಬೆಳೆಸುವ ಮನಸ್ಸುಗಳಿಗೆ ನೀರೆರೆದು ಪೋಷಿಸುವಲ್ಲಿ ಸೋತೆವು. ಒಂದಷ್ಟು ಸಮಯ ನೀರು ನೆಲೆ ನಿಲ್ಲುವ ಗದ್ದೆ ಬೇಸಾಯ ಕಷ್ಟವೆಂದು ಅದಕ್ಕೆ ತಿಲಾಂಜಲಿ ನೀಡಿ ಅಡಿಕೆ ತೋಟಕ್ಕೆ ದೊಡ್ಡ ಮಣೆ ಹಾಕಿದೆವು. ಸಿಕ್ಕ ಸಿಕ್ಕ ಗುಡ್ಡಗಳಿಗೆ ಹಿಟಾಚಿ ಹತ್ತಿಸಿ ಅಡಿಕೆ ಗಿಡಗಳನ್ನು ನಟ್ಟು ಮೀಸೆ ಎಳೆದೆವು. ಹತ್ತಿರದ ಮನೆಯವ ನನ್ನಿಂದ ನಾಲ್ಕು ಕ್ವಿಂಟಾಲ್ ಅಡಿಕೆ ಹೆಚ್ಚು ಕೊಯ್ದು ಗೊತ್ತಾಗಿ ತಾನೂ ಎಂಟು ಕ್ವಿಂಟಾಲ್ ಹೆಚ್ಚು ಕೊಯ್ಯಲು ಮತ್ತಷ್ಟು ಅಡಿಕೆ ತೋಟ ವಿಸ್ತರಣೆ ಮಾಡಿಯಾಯಿತು. ನೆಲದೊಡಲಿನ ಧಾರಣಾ ಶಕ್ತಿಯನ್ನರಿಯದ ಮಹಾನುಭಾವರಿಗೆ ಪ್ರಕೃತಿ ಈಗ ಸರಿಯಾದ ಪಾಠ ಕಲಿಸುತ್ತಿದೆ. ಎಷ್ಟೊಂದು ಕೊಳವೆ ಬಾವಿಗಳನ್ನು ಕೊರೆಯಿಸಿದೆವು. ಭೂಗರ್ಭಕ್ಕೆ ಕೊರೆಯಿಸಿದ ತೂತುಗಳೆಷ್ಟು? ಕೊನೆಯಿದೆಯೇ  ಹಣ ಮಾಡುವ ಸ್ವಾರ್ಥಕ್ಕೆ? ನೀರು ಹೇಳುವವನಿಂದ ಹಿಡಿದು ಕೊಳವೆ ಬಾವಿ ಕೊರೆಯಿಸುವ ಬೋರ್ ವೆಲ್ ಏಜೆನ್ಸಿಯವರೆಗೆ ದಂಧೆಯ ತೆರದಲ್ಲಿ ನೆಲದೊಡಲಿಗೆ ಮಾಡಿದ ಅನ್ಯಾಯಗಳೆಷ್ಟು?

ನೀರಿಗೆ ದಾರಿಕೊಡದ ಆಧುನಿಕತೆ
ಪ್ಲಾಸ್ಟಿಕ್ ಮತ್ತು ಕಾಂಕ್ರೀಟ್ ಹೆಸರಿನ ಆಧುನಿಕತೆ ನಮ್ಮ ನೆಲವನ್ನು ಕಾಡುತ್ತಿರುವುದು ಕಡಿಮೆಯಲ್ಲ. ಮಣ್ಣಲ್ಲಿ ಮಣ್ಣಾಗದ ಅದೆಷ್ಟೊ ಟನ್ ತ್ಯಾಜ್ಯ ಪ್ಲಾಸ್ಟಿಕ್ ನಮ್ಮ ನೆಲದ ಮಣ್ಣಿನಲ್ಲಿ ನೀರಿಳಿಯದಂತೆ ತಡೆಯುತ್ತಿದೆ. ಸ್ವಚ್ಚತೆಯ ಪರಿಜ್ಞಾನವೇ ಇಲ್ಲದ ನಮ್ಮ ಬದುಕಿನ ರೀತಿ ರಿವಾಜುಗಳು ನಿರಂತರ ನೆಲದೊಡಲಿಗೆ ಪ್ಲಾಸ್ಟಿಕ್ ಮಿಶ್ರಮಾಡಿಬಿಡುತ್ತಿವೆ. ಹಾಲಿನಿಂದ ಹಿಡಿದು ಅನ್ನದವರೆಗೆ ಎಲ್ಲವೂ ಇಂದು ಪ್ಲಾಸ್ಟಿಕ್ ತೊಟ್ಟೆಯೊಳಗೆ ತುಂಬಿ ಪ್ರತಿ ಮನೆ ಸೇರುತ್ತಿದೆ. ಬಳಕೆಯ ನಂತರ ಬಹುತೇಕ ಈ ತ್ಯಾಜ್ಯ ಅಲ್ಲೇ ಪರಿಸರದಲ್ಲಿ ನೆಲದೊಡಲು ಸೇರುತ್ತಿದೆ. ನಮ್ಮ ನೆಲ, ನಮ್ಮ ಜಲ, ನಮ್ಮ ಉಸಿರಾದ ಗಾಳಿ ಇದ್ಯಾವುದರ ಬಗ್ಗೆಯೂ ನಮಗೆ ಅರಿವಿಲ್ಲ. ನಮ್ಮ ನೆಲೆಯ ಬಗ್ಗೆಯೇ  ಕಾಳಜಿಯಿಲ್ಲದ ಆಧುನಿಕತೆ ನಮ್ಮನ್ನು  ಆವರಿಸಿಬಿಟ್ಟಿದೆ. ಅನಗತ್ಯ ಪ್ಲಾಸ್ಟಿಕ್ ಪ್ರೇಮ ನಮ್ಮ ಪರಿಸರದ ನೀರಿನ ಜೊತೆ ಜೊತೆಗೆ ಹಸಿರನ್ನೂ ನಾಶಮಾಡುವ ಭಯಾನಕತೆ ನಮ್ಮ ಅರಿವಿಗೆ ಬೇಗನೆ ಬರದೆ ಹೋದರೆ ನಾಳೆಯ ದಿವಸ ಕಷ್ಟದ ದಿನವಾದೀತು. ನರಕದ ಬದುಕಾದೀತು.

Advertisement

ನೆಲದೊಡಲಿಗೆ ನೀರಿಳಿಸಬೇಕಿದೆ
ನೆಲದೊಡಲು ಬರಿದಾಗುತ್ತಿದೆ. ವಿಶ್ವಸಂಸ್ಥೆಯಂತು 2025ರ ವೇಳೆಗೆ ಕುಡಿಯಲೂ ನೀರಿಗೆ ತತ್ವಾರವಾಗಬಹುದು ಎಂದು ಎಚ್ಚರಿಸಿದೆ. ಮೊದಲನೆಯದಾಗಿ ನಮ್ಮಲ್ಲಿ ನೀರಿನ ಲಭ್ಯತೆಗೆ ಅನುಸಾರವಾಗಿ ನಮ್ಮ ಬಳಕೆ ಇರಬೇಕು. ಹಣವನ್ನು ಜೋಪಾನಮಾಡುವುದಕ್ಕಿಂತಲೂ ಹೆಚ್ಚು ಜಾಗ್ರತೆಯಿಂದ ನೀರನ್ನು ಜೋಪಾನಮಾಡುವುದನ್ನು ಕಲಿಯಬೇಕಿದೆ. ಈಗಂತು ಅಕ್ಷಯ ತೃತೀಯದ ದಿವಸ ದೇವರ ಕೋಣೆಯಲ್ಲಿ ಅಕ್ಷಯವಾಗಲೆಂದು ಚಿನ್ನವಿಡುವ ಬದಲು ಒಂದು ತಂಬಿಗೆ ನೀರು ತುಂಬಿಸಿಡುವಷ್ಟು ಮನಸ್ಸು ನೀರಿನ ಕೊರತೆಗೆ ಭಯಪಟ್ಟಿದೆ. ಈ ನೀರಿನ ಕೊರತೆಯ ಭಯ ನಮ್ಮ ಹೃದಯಕ್ಕೆ ತಟ್ಟಬೇಕು. ನೀರನ್ನು ಉಳಿಸಿ ನೆಲದೊದಲಿಗೆ ಇಳಿಸುವ ದಾರಿಗಳನ್ನು ಕರಗತ ಮಾಡಿಕೊಂಡು ಆ ನಿಟ್ಟಿನಲ್ಲಿ ಯೋಚಿಸುವ ಮತ್ತು ಯೋಚನೆಗಳನ್ನು ಯೋಜನೆಗಿಳಿಸಿ ಕಾರ್ಯಗತಗೊಳಿಸುವ ನೈಪುಣ್ಯತೆ ಮೈಗೂಡಿಸಿಕೊಳ್ಳಬೇಕು. ಇದು ಬರಿಯ ಕೃಷಿಕನ ಜವಾಬ್ದಾರಿಯಲ್ಲ. ಕೃಷಿಕನ ಕೃಷಿಗೆ ನೀರು ಕೊಡದೆ ಪಟ್ಟಣಗಳಿಗೆ ನೀರೊಯ್ಯುತ್ತಾರಲ್ಲ ಆ ಪಟ್ಟಣಿಗರೂ ನೀರಿನ ಬೆಲೆಯನ್ನರಿತು ನೀರಿಂಗಿಸುವ ಪ್ರಯತ್ನಗಳನ್ನು ಮಾಡದಿದ್ದರೆ ವಿಶ್ವಸಂಸ್ಥೆಯ ಹೇಳಿಕೆ ನೂರಕ್ಕೆ ನೂರು ಫಲಿಸೀತು.

ಇನ್ನು ಮಳೆಯ ಲಕ್ಷಣಗಳು ಕಾಣುತ್ತಿಲ್ಲ. ತೋಟಗಳು ನೀರಿನ ಬರದಿಂದ ಬೇಸಿಗೆಯ ತಾಪದಿಂದ ಕಂಗಾಲಾಗಿ ಫಸಲಿನ ಆಸೆಯನ್ನು ಕಮರಿಸಿ ಮರವುಳಿಸುವ ಅಗತ್ಯದತ್ತ ಬೆರಳು ತೋರುತ್ತಿವೆ. ಇಡೀ ವರ್ಷ ಸಾಕಿ ಸಲಹಿದ ತೋಟಗಳು ಕಣ್ಣೆದುರು ಬಾಡಿ ಬೆಂಡಾಗಿರುವುದು ಕೊಡುವ ನೋವಂತು ಅಪರಿಮಿತ.

Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮಳೆಗಾಗಿ ಹಪಹಪಿಸುತ್ತಿರುವ ಮನಸ್ಸುಗಳು….."

Leave a comment

Your email address will not be published.


*