ಮಾತು , ಮತ್ತಿನ್ನೇನೋ……….

November 10, 2019
2:15 PM

ಮಾತು ಯಾರಿಗಿಷ್ಟವಿಲ್ಲ ಹೇಳಿ.  ನಮ್ಮ  ಬೇಕು ಬೇಡಗಳನ್ನು ಬಣ್ಣಿಸಲು ಮಾತು ಬೇಕು. ಇಷ್ಟ ಕಷ್ಟಗಳನ್ನು ಹಂಚಿಕೊಳ್ಳಲು ಮಾತು ಬೇಕು, ನೋವು ನಲಿವುಗಳನ್ನು ಹೇಳಿಕೊಳ್ಳಲು ಮಾತು ಬೇಕು.  ಹೊಗಳಲು, ಬಾಯ್ತುಂಬ ತೆಗಳಲೂ ಕೂಡ ಮಾತು‌ಬೇಕು.

Advertisement
ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಉಕ್ತಿಗಳಲ್ಲಿ ಮಾತಿನ ಪಾಲೇ ದೊಡ್ಡದೇನೋ!!!!!!!! ‘ ಮಾತು ಆಡಿದರೆ ಮುಗಿಯಿತು,  ಮುತ್ತು ಒಡೆದರೆ ಹೋಯಿತು.’ ಅದರಲ್ಲೊಂದು. ಹಿರಿಯರು ಹೇಳುತ್ತಾರೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು, ಬಾಯಿಗೆ ಬಂದ ಹಾಗೆ ಮಾತನಾಡಿದರೆ ಸಂಬಂಧ ಹಾಳಾಗುತ್ತದೆ.  ಹಲವು ಬಾರಿ ಸಣ್ಣ ಸಣ್ಣ ಮಾತುಗಳು ದೊಡ್ಡ ದೊಡ್ಡ ಪ್ರಕರಣಗಳಿಗೆ ನಾಂದಿಯಾಗುತ್ತವೆ. ಅಲ್ಲಿ‌ ಯಾವ ಉದ್ದೇಶಗಳಿಲ್ಲದೆ  ಆಡಿದ ಮಾತುಗಳು ಪೂರ್ವಾಗ್ರಹ ಪೀಡಿತವೇನೋ, ಎಂಬ ಶಂಕೆಯನ್ನು ಹುಟ್ಟು ಹಾಕುತ್ತವೆ. ಒಮ್ಮೆ ಬಾಯಿಯಿಂದ ಬಿದ್ದ ಮಾತು ದಾಖಲೆಯಾಗಿ ಬಿಡುತ್ತವೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿ  ಇರುವ ಮೊಬೈಲುಗಳಲ್ಲಿ ಫೋಟೋ ತೆಗೆಯುವುದೇ ಉದ್ಯೋಗ.  ಮಾತಾಡಿದ್ದು, ಕುಣಿದದ್ದು , ಕುಡಿದದ್ದು , ನಕ್ಕದ್ದು ಬೈದದ್ದು ಎಲ್ಲವೂ ಮೊಬೈಲ್ ನೊಳಗೆ ಬಂಧಿ .  ಯಾವಾಗ ಎಲ್ಲಿಂದ  ಉಧ್ಬವ ವಾಗುತ್ತದೋ ಗೊತ್ತೇ ಆಗದು. ಎಂದೋ ಎಲ್ಲೋ ಆಡಿದ ಮಾತುಗಳು ದಿಢೀರ್ ಯಾರದ್ದೋ ಮೊಬೈಲ್ ನಲ್ಲಿ ಪ್ರತ್ಯಕ್ಷ ವಾಗಿ ಆಭಾಸವಾಗುವ ಸಂಧರ್ಭ ಹಲವು. ನಾವು ಯಾವುದನ್ನು ಕ್ಷುಲ್ಲಕವೆಂದು ಕೊಳ್ಳುತ್ತೇವೋ ಅದೇ ದೊಡ್ಡ ಸಮಸ್ಯೆಯಾಗಿ ಬಿಡುತ್ತವೆ. ಕೆಲವೊಮ್ಮೆ ಹೇಳಿದವರಿಗೇ ಯಾವಾಗ ನಾನು ಹೇಳಿದೆ ಎಂದು ತಲೆ ತುರಿಸಿ ಕೊಳ್ಳುವ ಪರಿಸ್ಥಿತಿ.! ಅದಕ್ಕೇ ಹೇಳುವುದು      ” ಮಾತನಾಡುವಾಗ ಇದ್ದರೆ ವ್ಯವದಾನ ಮುದಗೊಂಡೀತು ಮನ, ಇಲ್ಲವಾದರೆ ಕಳೆದು ಹೋದೀತು ಮಾನ”.
ಹೊಗಳಿಕೆಗೆ  ಮಾರು ಹೊಗದವರೇ ಇಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯ  ನಾಗರೀಕರವರೆಗೂ   ಮನಸೋಲುವವರೇ. ಮಗು ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಯಲಾರಂಭಿಸಿದಾಗ, ಉಣ್ಣಲು ಕಲಿತಾಗ, ಒಂದೊಂದೇ ಅಕ್ಷರ ಜೋಡಿಸಿ ಓದಲಾರಂಭಿಸಿದಾಗ , ಹೊಸ ಭಾಷೆಯಲ್ಲಿ ಸಂವಹನ ಮಾಡಿದಾಗ ಒಂದು ಶಹಾಬಾಸ್ ಹೇಳಿದರೆ  ಬಹುಮಾನವೇ ಸಿಕ್ಕಂತಹ ನಗು. ಮಕ್ಕಳ ಕಥೆ ಹೀಗಾದರೆ ದೊಡ್ಡವರದ್ದು ಇನ್ನೂ ಗಮ್ಮತಿನದ್ದು. ತಮ್ಮ ಪ್ರತಿಯೊಂದು ನಡೆನುಡಿಯನ್ನೂ ಗಮನಿಸಬೇಕೆಂಬ ತವಕ . ತಮ್ಮ ಉಡುಗೆ  , ತೊಡುಗೆ, ಕೂದಲಿನ ಸ್ಟೈಲ್,    ಹಾಕಿ ಕೊಂಡ ಹೊಸ ಡಿಸೈನ್ ನ ಪ್ಯಾಂಟ್ಸ್, ಶರ್ಟ್, ಟೀ ಶರ್ಟ್,  ಹೊಸ ಮಾದರಿಯ ಚಪ್ಪಲ್ಸ್ ಶೂ ಹೀಗೆ……… ಓಹ್  ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತವೆ. ಬಿಡಿ ಯಾಕೆ ಚರ್ಚೆ. ಅವರವರ ಅನುಕೂಲಕ್ಕೆ ತಕ್ಕಂತೆ ಉಡುಗೆ ತೊಡುಗೆ. ಇಷ್ಟವಾದರೆ ಎರಡು ಒಳ್ಳೆಯ ಮಾತು ಇಲ್ಲವಾದರೆ ಅಲ್ಲಿಗೆ ಬಿಟ್ಟರಾಯಿತು. ಅದು ಬಿಟ್ಟು ಎನೇ  ನಾಟಕದಲ್ಲಿ ವೇಷ ಹಾಕ್ಲಿಕ್ಕುಂಟಾ ಹಾಗೆ ಬಣ್ಣ ಬಡಿಚಿದ್ದೀಯಲ್ಲಾ ? ಹೀಗೆ ಯಾರಲ್ಲಾದರು ಹೇಳಿಬಿಟ್ಟೀರಾ ಮುಂದೆ ಜನ್ಮದಲ್ಲಿ ನಿಮ್ಮ ಮೇಲೆ ಒಂದು ಅಸಹನೆ ಅವರಲ್ಲಿ ಕಾಡುತ್ತಿರುತ್ತದೆ. ನಿಮ್ಮನ್ನು  ಸೂಕ್ಷ್ಮ ವಾಗಿ ಗಮನಿಸಿ ಒಂದು ದಿನ ಎಲ್ಲವನ್ನೂ  ಹೇಳಿ ಸೇಡು ತೀರಿಸಿಕೊಂಡು ಬಿಡುತ್ತಾರೆ.  ಒಳ್ಳೆಯ ‌ಮಾತುಗಳಿಗೆ ಯಾವಾಗಲೂ  ಬೆಲೆಯಿದೆ.‌
ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಮಾತಿನಲ್ಲಾದರೂ ಅಷ್ಟೇ ಕೃತಿಯಲ್ಲಾದರೂ ಅಷ್ಟೇ. ಒಂದು ಮಾತು ಕೇಳಿದರೆ ಸಾಕು ಮರೆಯದೆ ನೆನಪಿನಲ್ಲಿ ಇಟ್ಟು ಕೊಳ್ಳುತ್ತಾರೆ. ಆ ದಿನ ನನಗೆ ಹೀಗೆ ಹೇಳಿದ್ದರು . ಹೊಗಳಿದರೂ ಸರಿ ಬೈದರೂ ಸರಿ . ತಮ್ಮ ಒಳ್ಳೆಯದಕ್ಕೇ ಹೇಳಿದ್ದು ಎಂದು ಧನಾತ್ಮಕವಾಗಿ ತೆಗೆದು ಕೊಳ್ಳುತ್ತಾರೆ.  ಮಾತ್ರವಲ್ಲದೆ ತಪ್ಪಿದ್ದರೆ ಸರಿ ಮಾಡಿಕೊಳ್ಳುತ್ತಾರೆ.
ನಮ್ಮ ನಾಲಗೆ ,ಅಂದರೆ ಮಾತು, ನಮ್ಮ ಹಿಡಿತದಲ್ಲಿರಬೇಕು.  ರಭಸದ ಮಾತುಗಳಿಗಿಂತ ಮೌನದ ಗೆಳೆತನವೇ ಲೇಸು.  ಒಂದೆಡೆ ಅನ್ಯಾಯ ನಡೆಯುತ್ತಿದೆ ಎಂದರೆ ನಾವು ಖಂಡಿಸ ಬೇಕು.  ಆದರೆ ಎಲ್ಲಿ ಯಾವ ರೀತಿಯಲ್ಲಿ ಮಾತನಾಡಬೇಕೆಂಬ ಸಂಪೂರ್ಣ ಅರಿವು ಇದ್ದಾಗ ಮಾತ್ರ  ಉತ್ತಮ ಸಂವಹನ ಸಾಧ್ಯ.
ಇಂದಿನ ದಿನಗಳಲ್ಲಿ ಮಾತುಗಾರಿಕೆಯನ್ನೇ  ಬಂಡವಾಳವಾಗಿಸಿ ಕೊಂಡ ಉದ್ಯಮಗಳಿವೆ. ವ್ಯಕ್ತಿತ್ವ ವಿಕಸನ ಸಂಸ್ಥೆಗಳಿವೆ. ಇಲ್ಲಿ ಎಲ್ಲಿ, ಹ್ಯಾಗೆ  ,ಏನು ,ಎಷ್ಟು  ಮಾತನಾಡಬೇಕು   ಎಂದೆಲ್ಲಾ  ತರಬೇತಿ ಕೊಡುತ್ತಾರೆ.  ಮಾತನಾಡುತ್ತಾ ಕೈ ಯ ಚಲನೆ,  ಕಣ್ಣು, ಹುಬ್ಬಿನಲ್ಲಿ ಬಾವನೆಗಳನ್ನು ವ್ಯಕ್ತ ಪಡಿಸುವುದು ಹೇಗೆ?  ಯಾವ ಸಂಧರ್ಭದಲ್ಲಿ ನಿಂತಲ್ಲೇ ಮಾತನಾಡ ಬೇಕು? ಯಾವಾಗ ನಡೆಯುತ್ತಾ ಮಾತನಾಡ ಬೇಕು? ಇದೆಲ್ಲಾವನ್ನು ವ್ಯವಸ್ಥಿತವಾಗಿ ಹೇಳಿಕೊಡುವ ಸಂಸ್ಥೆಗಳಿವೆ. ಇಲ್ಲಿ ತರಬೇತಿ ಪಡೆದವರಿಗೆ ೧೦೦ ಶೇಕಡಾ ಕೆಲಸ ಸಿಗುವುದು ಪಕ್ಕಾ ಎಂಬುದು ಆ ಸಂಸ್ಥೆಗಳ ಜಾಹೀರಾತುಗಳಲ್ಲಿ ಸಿಗುವ ಮಾಹಿತಿ. ಅಲ್ಲಾ ನನಗೆ ಅರ್ಥವಾಗದೇ ಇರುವ ಸಂಗತಿಯೆಂದರೆ ಸಣ್ಣ ತರಗತಿಗಳಲ್ಲಿ ಅಧ್ಯಾಪಕರು ಹೇಳಿಕೊಡುವ ಸಂವಹನದ ಸಂಗತಿಗಳನ್ನು ಕಲಿಯಲಾರದವರು ಇಲ್ಲಿ ಏನು ಕಲಿತಾರು? ದಾರಿಯಲ್ಲಿ ಎದುರು ಸಿಗುವ ಪ್ರಾಥಮಿಕ ಶಾಲಾ ಅಧ್ಯಾಪಕರನ್ನು ಗೌರವಿಸಲಾರದವರು  ಎಲ್ಲಿ ಹೋದರು ಅಷ್ಟೇ.
ಕೆಲವೊಮ್ಮೆ ಬಾಲ್ಯದಲ್ಲಿ  ಒರಟಾಗಿ ವರ್ತಿಸಿ ಕೊಂಡಿದ್ದವರು ದೊಡ್ಡವರಾಗುತ್ತಾ ತಮ್ಮ ನಡೆ ನುಡಿಗಳನ್ನು ತಿದ್ದಿ ಕೊಳ್ಳುತ್ತಾರೆ. ಜೀವನ ಎಲ್ಲವನ್ನೂ ಕಲಿಸುತ್ತದೆ. ಬೇಕಾದಲ್ಲಿ ಬಗ್ಗಿಸುತ್ತದೆ. ಮಾತು ಮೆದುವಾಗುತ್ತದೆ. ಮನಸು ಮೃದುವಾಗುತ್ತದೆ.
ಮಕ್ಕಳು  ತಪ್ಪು ಮಾಡುವುದು ಸಹಜ . ಒಂದೆರಡು ಬಾರಿ ಸಮಾಧಾನದಿಂದ ಹೇಳಿ ತಿದ್ದುಪಡಿಯಾದರೆ ಸರಿ ಇಲ್ಲವಾದರೆ ಜೋರಾಗಿ ಹೇಳಬೇಕು.  ನಮ್ಮಮಕ್ಕಳಲ್ಲವೇ. ನಾವು ತಿದ್ದದೇ ಬೇರೆಯವರು ತಿದ್ದಿಯಾರೆ?  ಕಷ್ಟವಾದರೂ ಇಷ್ಟಪಟ್ಟು ಮಾಡ ಬೇಕಲ್ಲವೇ?????.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು
July 14, 2025
10:56 PM
by: ನಾ.ಕಾರಂತ ಪೆರಾಜೆ
ಮೊಬೈಲ್‌ ಕಣ್ಣು ಮಾತ್ರವಲ್ಲ – ಮನಸ್ಸನ್ನೂ ಹಾಳು ಮಾಡುತ್ತದೆ..!
July 13, 2025
11:36 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ | ಹಲಸಿನ ಬೀಜದ ಪರೋಟ
July 12, 2025
7:11 AM
by: ದಿವ್ಯ ಮಹೇಶ್
ಸೆಕ್ಸ್ ಎಂದರೆ ಜತೆಯಲ್ಲಿ ಕಾಫಿ ಕುಡಿದಂತಲ್ಲ!?
July 10, 2025
7:53 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group