ಸುಬ್ರಹ್ಮಣ್ಯ: ಶ್ರೀ ವೇದವ್ಯಾಸ ಸಂಶೋಧನ ಕೇಂದ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯ ಮತ್ತು ಭಾರತ ಸರಕಾರದ ರಾಷ್ಟ್ರೀಯ ಪಾಂಡುಲಿಪಿ ಮಿಶನ್, ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀ ಪಾದಂಗಳವರ ಪರಮಾನುಗ್ರಹದಲ್ಲಿ ಮಾ.9 ರಿಂದ ಮಾ.29 ರವರೆಗೆ ಹಸ್ತ ಪ್ರತಿ ಸಂರಕ್ಷಣಾ ಕಾರ್ಯಾಗಾರ ನಡೆಯಲಿದೆ.
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸಾವಿರಾರು ಪ್ರಾಚೀನ ಹಸ್ತ ಪ್ರತಿ ಗ್ರಂಥಗಳಿವೆ. ಹವಾಮಾನದ ವೈಪರೀತ್ಯದಿಂದ ಬಹಳಷ್ಟು ಗ್ರಂಥಗಳು ಸಂರಕ್ಷಣೆಯ ಕೊರತೆಯಿಂದ ನಾಶದ ಅಂಚಿನಲ್ಲಿವೆ. ಜೊತೆಗೆ ಸರಿಯಾದ ಮಾಹಿತಿಯಿಲ್ಲದಿರುವುದರಿಂದಲೂ ಮೂಲೆ ಗುಂಪಾಗಿವೆ. “ಹಸ್ತ ಪ್ರತಿ ಗ್ರಂಥಗಳು ಭಾರತದ ನಿಜವಾದ ಸಂಪತ್ತು” ಎಂದು ಭಾವಿಸಿದ್ದ ಮಾಜಿ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪಾಯಿ ಇವರು 2003ರಲ್ಲಿ ರಾಷ್ಟ್ರೀಯ ಪಾಂಡುಲಿಪಿ ಮಿಶನ್ ಎಂಬ ಸಂಸ್ಥೆಯನ್ನು ಸಂಸ್ಕೃತಿ ಮಂತ್ರಾಲಯದ ಅಧೀನದಲ್ಲಿ ಪ್ರಾರಂಭಿಸಿದರು. ಈ ಸಂಸ್ಥೆಯು ಈಗಾಗಲೇ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚಿನ ಪ್ರಾಚೀನ ಗ್ರಂಥಗಳ ಸಂರಕ್ಷಣಾ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀ ಪಾದಂಗಳವರ ಆದೇಶ ಹಾಗೂ ಸಂಕಲ್ಪದಂತೆ ನವದೆಹಲಿಯ ಪಾಂಡುಲಿಪಿ ಮಿಶನ್ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಗ್ರಂಥಗಳ ಸಂರಕ್ಷಣೆಗಾಗಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ “ಹಸ್ತಪ್ರತಿ ಸಂರಕ್ಷಣಾ ಕೇಂದ್ರವನ್ನು” ಸ್ಥಾಪಿಸಿದ್ದಾರೆ. ಈ ಕೇಂದ್ರದಲ್ಲಿ ಉಚಿತವಾಗಿ ಗ್ರಂಥಗಳನ್ನು ಸ್ವಚ್ಛಗೊಳಿಸಿ ಕೊಡಲಾಗುವುದು. ಈ ಯೋಜನೆಯ ಅಂಗವಾಗಿ 21 ದಿನಗಳ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಗಾರದಲ್ಲಿ ಹಸ್ತ ಪ್ರತಿಗಳ ಸಂರಕ್ಷಣಾ ವಿಧಾನ, ಲಿಪಿಗಳ ಕಲಿಕೆ ಹಾಗೂ ಹಸ್ತಪ್ರತಿ ಶಾಸ್ತ್ರದ ಪರಿಚಯವನ್ನು ಮಾಡಿಕೊಡಲಾಗುವುದು. ಈ ಶಾಸ್ತ್ರದಲ್ಲಿ ಈಗಾಗಲೇ ಅತ್ಯುತ್ತಮ ಪರಿಶ್ರಮವನ್ನು ಮಾಡಿದ ಶ್ರೇಷ್ಠ ವಿದ್ವಾಂಸರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಿದ್ದಾರೆ. ದೇಶದ ವಿವಿಧ ಪ್ರದೇಶಗಳಿಂದ ಆಸಕ್ತರು ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ದಕ್ಷಿಣ ಕನ್ನಡ ಭಾಗದ ಆಸಕ್ತರೂ ಭಾಗವಹಿಸಬಹುದು.
ಎಲ್ಲರ ವಿಶೇಷ ಸಹಕಾರದಲ್ಲಿ ಈ ಕಾರ್ಯಗಾರವು ಯಶಸ್ವಿಯಾಗುವುದೆಂದು ಭಾವಿಸಿದ್ದೇವೆ. ಹೆಚ್ಚಿನ ವಿವರಗಳಿಗಾಗಿ ಈ ಸಂಖ್ಯೆಯಲ್ಲಿ 9900001505, 9743701545 ಸಂಪರ್ಕಿಸಬಹುದು.