ಬೆಳ್ಳಾರೆ: ಒಂದು ಕಾಲದಲ್ಲಿ ಕೆರೆಯಿಂದ ನೀರು ತೆಗೆದಷ್ಟು ಮುಗಿಯದ ಇತಿಹಾಸ ಇರುವ ಕೆರೆ ಮೊಗಪ್ಪೆ. ಈ ವರ್ಷ ಪರಿಸ್ಥಿತಿ ಹಾಗಿಲ್ಲ. ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ.
ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಟ್ಟಾರಿನಲ್ಲಿರುವ ಮೊಗಪ್ಪೆ ಕೆರೆಗೆ ಶತಮಾನದ ಇತಿಹಾಸ ಇದೆ. ದಾಖಲೆಗಳ ಪ್ರಕಾರ 10 ಎಕ್ರೆಗೂ ಹೆಚ್ಚು ಪ್ರದೇಶದಲ್ಲಿ ಕೆರೆ ಇದೆ. ಇದರ ಕಾರಣದಿಂದ ನೆಟ್ಟಾರು, ಬೆಳ್ಳಾರೆ, ಪೆರುವಾಜೆ ಗ್ರಾಮದ ಜಲದಲ್ಲಿ ನೀರಿನ ಮಟ್ಟ ಏರಿಕೆಗೂ ಕಾರಣವಾಗಿದೆ. ಈಗ ಮಾತ್ರಾ ಉಪಯೋಗಕ್ಕಿಲ್ಲವಾಗುವ ಆತಂಕ ಇದೆ. ಕಾರಣ ಇಷ್ಟೇ, ಅನುದಾನದ ಕೊರತೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಹೂಳೆತ್ತುವ ಕಾರ್ಯ ನಡೆದಿಲ್ಲ.
ಎರಡು ವರ್ಷಗಳ ಹಿಂದೆ ಸಂಘ-ಸಂಸ್ಥೆಗಳು, ದಾನಿಗಳು ಈ ಕೆರೆಯ ಹೂಳೆತ್ತುವ ಕಾರ್ಯದ ನಿರ್ಧಾರವನ್ನು ಸ್ವತಃ ತಾವೇ ತೆಗೆದುಕೊಂಡರು. ಮೊಗಪ್ಪೆ ಕೆರೆ ಅಭಿವೃದ್ದಿ ಸಮಿತಿಯನ್ನು ರಚಿಸಿಕೊಂಡು ಸ್ವಯಂಪ್ರೇರಿತವಾಗಿ ಕೆರೆ ಅಭಿವೃದ್ಧಿಗಾಗಿ ಶ್ರಮಿಸಿದರು. ಇದರ ಫಲವಾಗಿ ಹತ್ತಾರು ಅಡಿಗಳಷ್ಟು ಮಣ್ಣನ್ನು ಅಗೆಯಲಾಗಿತ್ತು. ಹೂಳೆತ್ತಿಸಿದ ನಂತರ ಕೆರೆಯಲ್ಲಿ ನೀರು ಮತ್ತೆ ತುಂಬಿತು.
ಮೊಗಪ್ಪೆ ಕೆರೆಯಲ್ಲಿ ಜಲ ಇಂಗಿಸುವ, ಸುಂದರ ಪ್ರವಾಸಿ ತಾಣವನ್ನಾಗಿಸುವ ಹತ್ತೂರಿಗೆ ನೀರು ಹರಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಊರವರೇ ಮುಂದಾಗಿದ್ದರು. ಹೂಳೆತ್ತಲು ಜನರು ಕೂಡ ಆರ್ಥಿಕ ಸಹಕಾರ ನೀಡಿದ್ದರು. 6 ಎಕ್ರೆಯಷ್ಟು ಪ್ರದೇಶದಲ್ಲಿ ಇದೇ ಮಟ್ಟದ ಆಳದಲ್ಲಿ ಕೆರೆಯ ಹೂಳೆತ್ತಿದರೆ ಸುಡು ಬೇಸಿಗೆಯಲ್ಲಿಯೂ ನೀರು ಬತ್ತದು. ಕೆರೆಯ ಉಳಿದ ಪ್ರದೇಶದಲ್ಲಿ ಇನ್ನಾದರೂ ಹೂಳೆತ್ತಿದರೆ ಹತ್ತೂರಿಗೆ ಸಾಕೆನಿಸುವಷ್ಟು ನೀರು ಹರಿಸಬಹುದು.
ಇಂದು ಜಲಕ್ಷಾಮದ ಭೀಕರತೆ ನಗರದಿಂದ ಸ್ವಚ್ಛಂದವಾದ ಹಳ್ಳಿ ಪ್ರದೇಶಕ್ಕೂ ಮುಟ್ಟಿರುವ ಈ ದಿನಗಳಲ್ಲಿ ಸಮೃದ್ಧ ಜಲಸಂಪತ್ತನೇ ಒಡಲಲ್ಲಿ ತುಂಬಿಕೊಂಡಿರುವ ಮೊಗಪ್ಪೆ ಕರೆಯ ಹೂಳೆತ್ತಲು ಇದು ಸಕಾಲವಾಗಿದೆ. ಜನರ ಉತ್ಸಾಹಕ್ಕೆ ಆಡಳಿತದವರ ಸಹಕಾರ ದೊರೆತರೆ ಮೊಗಪ್ಪೆ ಕೆರೆಯಲ್ಲಿ ಮೊಗೆದಷ್ಟೂ ನೀರು ದೊರೆಯುವುದು ನಿಶ್ಚಿತ ಎನ್ನುತ್ತಾರೆ ಮೊಗಪ್ಪೆಯ ಜನರು.
ಈ ಬಗ್ಗೆ ಬೆಳ್ಳಾರೆ ಗ್ರಾಪಂ ಅಧ್ಯಕ್ಷೆ ಶಕುಂತಳಾ ನಾಗರಾಜ್ ಹೇಳುತ್ತಾರೆ, ” ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತುವ ಯೋಜನೆ ರೂಪಿಸಿದ್ದೇವೆ. ಕೆರೆ ಅಭಿವೃದ್ದಿಗೊಳಿಸಲು ಸರಕಾರಕ್ಕೆ ಪಂಚಾಯತ್ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಮೊಗಪ್ಪೆ ಕೆರೆ ಹೂಳೆತ್ತಿಸಿ ನೆಟ್ಟಾರು ಭಾಗದ ಜನತೆಗೆ ಕುಡಿಯುವ ನೀರಿನ ಲಭ್ಯತೆಗೆ ಯೋಚಿಸಲಾಗಿದೆ ” ಎಂದು ಹೇಳುತ್ತಾರೆ.
ಕೆರೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಬಿ.ಸುಬ್ರಹ್ಮಣ್ಯ ಜೋಶಿ ಮಾತನಾಡುತ್ತಾ, ” ಕೆರೆ ಅಭಿವೃದ್ಧಿ ಸಮಿತಿಯ ರೂಪುರೇಷೆಯಂತೆ ಮೊಗಪ್ಪೆ ಕೆರೆಯ ಅಭಿವೃದ್ಧಿ ಕಾಮಗಾರಿಗಳು ನಡೆದರೆ ಉತ್ತಮ. ಮಕ್ಕಳಿಗೂ ನೀರಿನ ಸದ್ಬಳಕೆಯ ಹಾಗು ನೀರಿಂಗಿಸುವ ಮಾಹಿತಿ ಕಾರ್ಯವನ್ನು ಮಾಡಲಾಗುವುದು “ಎನ್ನುತ್ತಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೊಗಪ್ಪೆ ಕೆರೆಯಲ್ಲಿ ನೀರಿಲ್ಲವೆಂಬ “ಕರೆ” ಬಂದಿದೆ….!"