ಸುಳ್ಯ : ಸುಳ್ಯದಲ್ಲಿ ನಾಲ್ಕು ದಿನಗಳ ಕಾಲ ಪ್ರಸ್ತುತಪಡಿಸಿದ ತಾಳಮದ್ದಲೆ ಎಲ್ಲೂ ಔಚಿತ್ಯ ಮೀರದೆ, ಪಾತ್ರಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಯಕ್ಷಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾರಸಿಕರು ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ವಿಶ್ರಾಂತ ಪ್ರಾಂಶುಪಾಲ ಪ್ರೊ| ಟಿ. ಶ್ರೀಕೃಷ್ಣ ಭಟ್ ಆಶಯ ವ್ಯಕ್ತಪಡಿಸಿದರು.
ಅವರು ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ನಡೆದ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಇಲ್ಲಿನ ಶ್ರೀಕಲ್ಕುಡ ದೈವಸ್ಥಾನದ ಸಹಯೋಗದಲ್ಲಿ ಯುವಕ ಯಕ್ಷ ಕಲಾರಂಗದ ಶೇಖರ ಮಣಿಯಾಣಿ ಇವರ ಸಂಯೋಜನೆಯಲ್ಲಿ ಸೂರಾಲು ಶ್ರೀಮಹಾಲಿಂಗೇಶ್ವರ ಯಕ್ಷ ಬಳಗದವರಿಂದ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.
ಸೂರಾಲು ಯಕ್ಷ ಬಳಗದ ಸಂಚಾಲಕ ಡಾ| ರವಿಕುಮಾರ್ ಸೂರಾಲು ಅವರನ್ನು ಸನ್ಮಾನಿಸಲಾಯಿತು.ಯಕ್ಷ ವಾಗ್ಮಿ ಎಂ.ಆರ್.ವಾಸುದೇವ ಸಾಮಗ ಅವರು ಅಭಿನಂದನಾ ಭಾಷಣ ಮಾಡಿ ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಡಾ| ರವಿಕುಮಾರ್ ಅವರಿಗೆ ಕಲೆ ಸಿದ್ಧಿಸಿದೆ. ರಂಗಸ್ಥಳದ ಶಿಸ್ತನ್ನು ಕಾಪಾಡುವಲ್ಲಿ ಅವರ ಕಾಳಜಿ ಶ್ಲಾಘನೀಯ ಎಂದರು.
ಕಲಾ ಪ್ರಾಯೋಜಕ ಸಿಎ |ಗಣೇಶ್ ಭಟ್ ಮಾತನಾಡಿ ಪರಿಪೂರ್ಣ ಕಲೆ ಯಕ್ಷಗಾನ. ಇದೀಗ ಈ ಕಲೆಯತ್ತ ಯುವ ಪೀಳಿಗೆ ಆಸಕ್ತರಾಗುತ್ತಿರುವುದು ಆಶಾದಾಯಕ ಎಂದರು.
ಪ್ರಾಯೋಜಕ ನಿವೃತ್ತ ಟೆಲಿಕಾಂ ಅಧಿಕಾರಿ ಎ.ಕೆ.ನಾಯ್ಕ, ದೈವಸ್ಥಾನದ ಧರ್ಮದರ್ಶಿ ಪಿ.ಕೆ.ಉಮೇಶ್ ಮಾತನಾಡಿದರು.
ವ್ಯವಸ್ಥಾಪಕ ಶೇಖರ ಮಣಿಯಾಣಿ ವಂದಿಸಿದರು.ಅಚ್ಯುತ ಅಟ್ಲೂರು ನಿರೂಪಿಸಿದರು. ಕಾರ್ಯಕ್ರಮಕ್ಕೆ ಸಹಕರಿಸಿದ ಎಂಜಿನಿಯರ್ ಹರೀಶ್ ನಾಯ್ಕ ಉಪಸ್ಥಿರಿದ್ದರು.
ಬಳಿಕ ಶ್ರೀರಾಮ ನಿರ್ಯಾಣ ಪ್ರಸಂಗ ತಾಳಮದ್ದಲೆ ಪ್ರಸ್ತುತಗೊಂಡಿತು. ಭಾಗವತರಾಗಿ ಡಾ|ರವಿಕುಮಾರ್ ಸೂರಾಲು, ಮೃದಂಗದಲ್ಲಿ ಈಶ್ವರ ಭಂಡಾರಿ, ಚಂಡೆಯಲ್ಲಿ
ಶಂಕರ ಆಚಾರ್ಯ ಗುಡ್ರಿ, ಮುಮ್ಮೇಳದಲ್ಲಿ ಯಕ್ಷ ವಾಗ್ಮಿಗಳಾಗಿ ಎಂ.ಆರ್.ವಾಸುದೇವ ಸಾಮಗ, ಪೂಕಳ ಲಕ್ಷ್ಮೀನಾರಾಯಣ ಭಟ್, ನಿಟ್ಟೂರು ಅನಂತ ಹೆಗ್ಡೆ, ಅಪ್ಪಕುಂಞ ಮಣಿಯಾಣಿ ಮೊದಲಾದವರು ಸಹಕರಿಸಿದರು.