ಯಾಕೆ ಮಳೆಗಾಲದ ಕೊಕ್ಕೊ ಬೀಜಕ್ಕೆ ಧಾರಣೆ ಕಡಿಮೆ?

July 4, 2019
11:00 AM

ಸಾಮಾಜಿಕ ಜಾಲ ತಾಣಗಳಲ್ಲಿ ಕಳೆದ ಕೆಲವು ದಿವಸಗಳಿಂದ ಈ ಪ್ರಶ್ನೆ ಜೋರಾಗಿ ಕೇಳಿಬರುತ್ತಿದೆ. ಇದು ಈ ವರ್ಷ ಹೊಸತಲ್ಲ. ಪ್ರತಿ ವರ್ಷ ಇದ್ದದ್ದೆ. ಯಾಕೆಂದರೆ ಈಗ ಕೃಷಿ ಜೀವನವೇ ಕಷ್ಟದ್ದು. ದುಬಾರಿ ಸಂಬಳದ ಕಾರ್ಮಿಕರನ್ನು ಆಶ್ರಯಿಸಿದರೆ ಕೃಷಿಕನ ಆದಾಯದ ಮೇಲೆಯೇ ಪೆಟ್ಟು. ಅವರು ಇಲ್ಲದೆ ಕೃಷಿಕನ ರಥ ಕೂಡ ನಡೆಯದು. ಈಗ ಹೇಳಿ ಕೇಳಿ ಹಳ್ಳಿಯ ಮನೆಗಳೆಂದರೆ ಅದು ವೃದ್ಧಾಶ್ರಮಗಳು. ತೋಟಕ್ಕಿಳಿದರೆ ಮತ್ತೆ ಮನೆಗೆ ಹತ್ತಿ ಬರುವಂಥಹ ಜಾಗವಾದರೆ ಮುಗಿಯಿತು. ಬಗ್ಗಿದರೆ ನಿಲ್ಲಲಾರದ ನಿಂತರೆ ಬಗ್ಗಲಾಗದ ಪ್ರಾಯದ ಕೃಷಿಕರ ಸಂಖ್ಯೆ ಅಧಿಕ. ಮಕ್ಕಳೆಲ್ಲ ಐಟಿ ಬಿಟಿಯಲ್ಲಿ. ಇದುವರೆಗೆ ಕೃಷಿ ಮಾಡಿದವರಿಗೆ ಕೊನೆಯ ಕ್ಷಣದಲ್ಲಿ ಅದನ್ನು ಬಿಡಲಾಗುವುದಿಲ್ಲ. ಹಾಗಾಗಿ ಕೆಲಸದಲ್ಲಿ ನೈಪುಣ್ಯತೆ ಇಲ್ಲದ ಕೃಷಿ ಕಾರ್ಮಿಕನಿಗೂ ಅವರ ಬೇಡಿಕೆಯಷ್ಟು ಸಂಬಳ ಕೊಡದಿದ್ದರೆ ಮರುದಿವಸ ಕಾಣೆ.

Advertisement
Advertisement
Advertisement

ಈಗ ಕೊಕ್ಕೊದ ವಿಚಾರಕ್ಕೆ ಬರೋಣ. ಈ ನಾನ್ನೂರು ಕೆಲವೆಡೆ ಐನ್ನೂರು ಸಂಬಳ ಕೊಟ್ಟು ಕೊಕ್ಕೊ ಕೊಯ್ಸಿ ಅದರ ಬೀಜ ಬಿಡಿಸಿ ಮಾರಾಟ ಮಾಡಿದರೆ ಕಿಲೊ ಒಂದಕ್ಕೆ 50 ರೂಪಾಯಿಗಳು. ಕೊಕ್ಕೊದ ಕೆಲಸ ಮತ್ತು ಅದರಿಂದ ಬರುವ ಆದಾಯ ಗಮನಿಸಿದರೆ ಅದರಲ್ಲಿ ಕೃಷಿಕನಿಗೆ ನಷ್ಟ ಅಂತ ಕೃಷಿಕರ ವಾದ. ವಿಶೇಷವಾಗಿ ಮಾರುಕಟ್ಟೆಯಲ್ಲಿ ಬೇರೆ ಬೇರೆ ಬಹುರಾಷ್ಟ್ರೀಯ ಕಂಪೆನಿಗಳು, ಕ್ಯಾಂಪ್ಕೋ ಮುಂತಾದವುಗಳು ಕೊಕ್ಕೊ ಬೀಜವನ್ನು ಖರೀದಿ ಮಾಡುತ್ತವೆ. ಬಹುರಾಷ್ಟ್ರೀಯ ಕಂಪೆನಿಗಳು ಸಹಜವಾಗಿ ಬೇರೆ ಬೇರೆ ರಾಷ್ಟ್ರಗಳ ಸಂಪರ್ಕ ಹೊಂದಿದವು. ಅಲ್ಲೆಲ್ಲ ಅವುಗಳಿಗೆ ಚಾಕೊಲೇಟ್ ಫ್ಯಾಕ್ಟರಿಗಳಿವೆ ಕೂಡ. ನಮ್ಮ ದೇಶದಂತೆ ವಿದೇಶಗಳಲ್ಲಿಯೂ ಕೊಕ್ಕೊ ಬೆಳೆಯುತ್ತಾರೆ. ಅದರಲ್ಲೂ ಘಾನಾ ದೇಶದ ಕೊಕ್ಕೊ ಬೀಜಕ್ಕೆ ವಿಶೇಷ ಬೇಡಿಕೆ. ಯಾಕೆಂದರೆ ಅದರ ಗುಣಮಟ್ಟ. ನಮ್ಮ ಕೇರಳ ಮತ್ತು ಕರಾವಳಿಯ ಕೊಕ್ಕೊ ಬೀಜಗಳು ಕೂಡ ಗುಣಮಟ್ಟದಲ್ಲಿ ಕಡಿಮೆಯಿಲ್ಲ. ಅದು ಯಾವಾಗ ಎಂದರೆ ಬೇಸಿಗೆ ಕಾಲದಲ್ಲಿ. ಅಂದರೆ ಕಡು ಬೇಸಿಗೆಯಲ್ಲಿ ಅಲ್ಲ.

Advertisement

ಸರಿಯಾದ ಸೀಸನಿನ ಕೊಕ್ಕೊ ಬೀಜಗಳು 34% ದಿಂದ 37% ವರೆಗೆ ಗುಣಮಟ್ಟವನ್ನು ಕಾಯ್ದುಕೊಂಡಿರುತ್ತವೆ. ಇಲ್ಲಿ % ಅಂದರೆ 100 ಕಿಲೊ ಹಸಿ ಬೀಜ ಒಣಗಿಸಿದಾಗ ಅದು 34 ರಿಂದ 37 ಕಿಲೊ ತೂಕ ಬರುತ್ತದೆ. ಹೀಗೆ ಬಂದಾಗ ಗುಣಮಟ್ಟ ಒಳ್ಳೆಯದಿದೆ ಎಂದು ತಿಳಿಯಬೇಕು. ಆದರೆ ಕಡು ಬೇಸಿಗೆಯಲ್ಲಿ ಕೊಕ್ಕೊ ಮರಗಳು ನೀರು ಕಡಿಮೆಯಾದರೆ ಅಡಿಕೆ ಮರಕ್ಕಿಂತಲೂ ಬೇಗನೆ ಸೋಲುತ್ತವೆ. ಬಾಡುತ್ತವೆ. ಎಳೆಯ ಕೊಕ್ಕೊಗಳು ಕೂಡ ಬಿಸಿಲಿನ ತಾಪಕ್ಕೆ ಬೆಳೆಯದೆ ಹಣ್ಣಾಗುತ್ತವೆ. ಆದರೆ ಇದು ಎಲ್ಲ ತೋಟಗಳಲ್ಲಿ ಇಲ್ಲ. ಇದೇ ಪರಿಸ್ಥಿತಿ ಮಳೆಗಾಲದಲ್ಲೂ. ಮಳೆ ಬಂದಾಗ ಸಹಜವಾಗಿ ಕೊಕ್ಕೊ ಕಾಯಿಗಳು ಕೊಳೆರೋಗಕ್ಕೆ ತುತ್ತಾಗುತ್ತವೆ. ಈ ವರ್ಷ ಮಳೆ ಅತ್ಯಲ್ಪ ಎಂಬುದು ಕೆಲವರ ವಾದ. ಮಳೆ ಕಡಿಮೆ ಇದ್ದಾಗಲೂ ಅದೆಷ್ಟೊ ಬಿಸಿಲು ಬೀಳದಷ್ಟು ಸೊಪ್ಪು ಗೆಲ್ಲುಗಳಿಂದ ತುಂಬಿದ ಮರಗಳಿರುವ ತೋಟಗಳಲ್ಲಿ ಕೊಕ್ಕೊ ಕೋಡುಗಳು ಕಪ್ಪಾಗಿವೆ. ಅರೆ ಕಪ್ಪಾದ ಕೊಕ್ಕೊಗಳನ್ನು ಒಡೆದು ಅದರ ಬೀಜಗಳನ್ನು ಕೂಡ ನಾವು ಒಳ್ಳೆಯ ಬೀಜಗಳೊಟ್ಟಿಗೆ ಹಾಕಿ ಮಾರಾಟ ಮಾಡುತ್ತೇವೆ. ಹಿಂದಿನ ವಾರ ಕೊಯ್ದು ಹಣ್ಣಾಗಿಲ್ಲ ಎಂದು ಉಳಿಸಿದ ಕೋಡುಗಳು ಈ ವಾರ ಹಣ್ಣಾದಂತೆ ಕಂಡರೆ ಅದನ್ನೂ ಗುದ್ದಿ ಒಡೆದು ಬೀಜಗಳು ಒಂದರಿಂದ ಒಂದು ಬೇರ್ಪಡದಿದ್ದರೂ ಒಳ್ಳೆಯ ಬೀಜಗಳ ಜೊತೆ ಅದನ್ನು ಸೇರಿಸಿ ಮಾರುಕಟ್ಟೆಗೆ ಸಾಗಿಸುತ್ತೇವೆ. ಕಡು ಬೇಸಿಗೆಯ ಬಿಸಿಲಿನ ತಾಪಕ್ಕೆ ಹಣ್ಣಾದ ಕೊಕ್ಕೊದ ಬೀಜ ಮತ್ತು ಕೊಳೆರೋಗಕ್ಕೆ ತುತ್ತಾಗಿ ತಿರುಳು ಹಣ್ಣಾಗದ ಬೀಜಗಳು ರಾಶಿಯಲ್ಲಿ ಬಿದ್ದಾಗ ಅಗಾಧ ಪ್ರಮಾಣದಲ್ಲಿರುತ್ತವೆ. ಈ ಬೀಜಗಳು ಒಣಗಿದಾಗ 25% ದಿಂದ 27% ಗುಣಮಟ್ಟ ಮಾತ್ರ ಹೊಂದಿರುತ್ತವೆ. ಕೊಕ್ಕೊ ಮರಗಳಲ್ಲಿ ಕೋಡುಗಳು ಮುಗಿಯುತ್ತ ಬಂದಂತೆ ಸಣ್ಣ ಸಣ್ಣ ಕೋಡುಗಳಿರುತ್ತವೆ ತಾನೆ? ಈ ಕೋಡುಗಳ ಒಳಗೆ ಚಪ್ಪಟೆ ಬೀಜಗಳಿರುತ್ತವೆ. ಇಂಥಹ ಬೀಜಗಳು ಒಣಗಿದಾಗ ಗುಣಮಟ್ಟ 22%ಕ್ಕೆ ಇಳಿಯಲೂ ಸಾಧ್ಯವಿದೆ.

ಗುಣಮಟ್ಟ ಕಡಿಮೆಯಾದ ಕೊಕ್ಕೊ ಬೀಜಗಳು ಚಾಕೊಲೇಟ್ ಫ್ಯಾಕ್ಟರಿಯ ಒಳಗೆ ಹೋಗದೆ ಮೊದಲ ಹಂತದಲ್ಲಿಯೇ  ತಿರಸ್ಕೃತಗೊಂಡು ಹೊರಗುಳಿಯುತ್ತವೆ. ಇವುಗಳಲ್ಲಿ ಒಡೆಯುವಾಗ ಅರೆಕಾಯಿ ಎಂದು ಬಿಡದೆ ಒಳ್ಳೆಯ ಬೀಜಗಳ ಜೊತೆ ಸೇರಿಸಿದ ಎಳೆಯ ಬೀಜಗಳೂ ಇರುತ್ತವೆ. ಗುಣಮಟ್ಟರಹಿತ ಬೀಜಗಳು ಫ್ಯಾಕ್ಟರಿಯ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ಏರಿಸುತ್ತವೆ. ಇದು ಫ್ಯಾಕ್ಟರಿಯ ಮಟ್ಟಿಗೆ ದೊಡ್ಡ ಆರ್ಥಿಕ ಹೊರೆ. ಅದಕ್ಕಾಗಿ ಗುಣಮಟ್ಟ ಕಡಿಮೆಯಾದಂತೆ ಅದಕ್ಕೆ ಕೊಡುವ ಧಾರಣೆಯೂ ಕಡಿಮೆಯಾಗುತ್ತವೆ. ಇವಿಷ್ಟು ಮಳೆಗಾಲದಲ್ಲಿ ಮತ್ತು ಬರದ ಪರಿಸ್ಥಿತಿಯ ಬೇಸಿಗೆ ಕಾಲದಲ್ಲಿ ಕೊಕ್ಕೊದ ಹಸಿ ಬೀಜಗಳು ಮಾರುಕಟ್ಟೆಯಲ್ಲಿ ಧಾರಣೆ ಕಳೆದುಕೊಳ್ಳಲು ಪ್ರಮುಖ ಕಾರಣ.

Advertisement

ಇನ್ನೂ ಸರಿಯಾಗಿ ಗೆಲ್ಲು ಸವರುವಿಕೆಯ ಕ್ರಮವನ್ನು ಅಳವಡಿಸಿಕೊಳ್ಳದ ಅದೆಷ್ಟೊ ಕೊಕ್ಕೊ ಕೃಷಿಕರು ನಮ್ಮ ನಡುವೆ ಇದ್ದಾರೆ. ಯಾಕೆಂದರೆ ಅದರ ಅರಿವು ಅಡಿಕೆ ಕೃಷಿಕರ ಪಾಲಿಗೆ ಬಂದದ್ದು ಕಡಿಮೆ. ಕೃಷಿಯಲ್ಲಿ ಉತ್ಸಾಹ ಇರುವವರು ಅದನ್ನು ಮಾಡಿದ್ದಾರೆ. ಅವರಿಗೆ ಕೊಕ್ಕೊ ಕೊಯ್ವುವುದೆಂದರೆ ಅದು ನೆಲದಿಂದಲೆ ಆಗುವಂತಾದ್ದು. ಅವರೇ ಮುತುವರ್ಜಿವಹಿಸಿ ಕೊಯ್ದು ತರುವುದು ಕೂಡ ಹಲವೆಡೆ ಇಲ್ಲದಿಲ್ಲ. ಈ ಆಕಾಶದೆತ್ತರ ಬೆಳೆದ ನಮ್ಮ ಅಡಿಕೆ ತೋಟದೊಳಗಿನ ಕೊಕ್ಕೊ ಮರಗಳಿಂದ ಅಲ್ಲೊಂದು ಇಲ್ಲೊಂದು ಗೆಲ್ಲಿನಲ್ಲಿರುವ ಒಂದೆರಡು ಹಣ್ಣು ಕೊಕ್ಕೊ ಕೊಯ್ಯಲು ಮತ್ತು ಅದು ಎಲ್ಲೆಲ್ಲಿಗೊ ಬೀಳುವಾಗ ಹೆಕ್ಕಲು ಜನ ಬೇಕು. ಹೀಗಿದ್ದುಕೊಂಡರೂ ನಾವು ಗೆಲ್ಲುಸವರುವಿಕೆ ಕೆಲಸವನ್ನು ಪ್ರೀತಿಸುವ ಪರಿಸ್ಥಿತಿ ಬರುತ್ತಿಲ್ಲ. ಎಂದರೆ ನಾವು ಕೊಕ್ಕೊ ಕೃಷಿಯಲ್ಲಿ ಆಧುನಿಕ ಕೃಷಿ ಕ್ರಮಗಳನ್ನು ಅಳವಡಿಸಿಕೊಳ್ಳಲು ನಮ್ಮ ಮನಸ್ಸನ್ನು ಒಪ್ಪಿಸುತ್ತಿಲ್ಲ. ಇದನ್ನು ಮಾಡಿದರೆ ಎಲ್ಲದಕ್ಕೂ ಅನುಕೂಲ. ಕೊಕ್ಕೊ ಮರಗಳನ್ನು ತೋಟಕ್ಕಿಳಿದಾಗಲೆಲ್ಲ ಗಮನಿಸಿದರೆ ಹಣ್ಣಾಗಲು ಆರಂಭವಾದ ಕೋಡುಗಳು ಸಿಗುತ್ತವೆ. ಕೈಗೆ ಸಿಕ್ಕಿದ ಹಣ್ಣುಗಳನ್ನು ಕೊಯ್ದು ನೆಲದಲ್ಲಿಟ್ಟರೆ ಅದನ್ನು ಅಳಿಲುಗಳು ತಿನ್ನುವುದು ಕಡಿಮೆ ಎಂಬುದನ್ನು ಪೆರ್ಲ ಸಮೀಪದ ಕೃಷಿಕ ಓಟೆಕ್ಕಾಡು ಸುಬ್ರಾಯ ಭಟ್ಟರು ಉದಾಹರಣೆ ಸಮೇತ ಒಮ್ಮೆ ತಿಳಿಸಿದ್ದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror