ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು 2,37,893 ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದು, ಇದರಲ್ಲಿ ಕರಾವಳಿ ಹಾಗೂ ಅಡಿಕೆ ಬೆಳೆಗಾರರ ಕಡೆಗೂ ಗಮನಹರಿಸಿದ್ದಾರೆ. ರೈತರ ಪ್ರಮುಖ ಬೇಡಿಕೆಯಾಗಿದ್ದ ಸಾಲಮನ್ನಾ ಬಗ್ಗೆಯೂ ಬಜೆಟ್ನಲ್ಲಿ ಘೋಷಿಸಲಾಗಿದ್ದು, ಅಡಿಕೆ ಬೆಳೆಗಾರರ ಪ್ರಾಥಮಿಕ/ ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೀಡುವ
ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.5 ರಷ್ಟು ಬಡ್ಡಿ ವಿನಾಯಿತಿ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ.
2,37,893 ಕೋಟಿ ರೂ ಗಾತ್ರದ ಬಜೆಟ್ ನಲ್ಲಿ ಒಟ್ಟು ₹ 2,33,134 ಕೋಟಿ ಜಮೆಗಳನ್ನು ನಿರೀಕ್ಷಿಸಲಾಗಿದೆ. ಅಂತೆಯೇ 2,37,893 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದ್ದು, ಆದಾಯಕ್ಕೂ ವೆಚ್ಚಕ್ಕೂ 4759 ಅಂತರವಿದೆ.
ಈ ಬಾರಿಯ ಬಜೆಟ್ನಲ್ಲಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಪಡೆಯಲಾದ ಸಾಲದ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ, ರೇಷ್ಮೆ ಹುಳು ಸಂರಕ್ಷಣಾ ಘಟಕ, ಹೈನುಗಾರಿಕಾ ವಲಯ, ಹಂದಿ ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸಿಎಂ ಬಜೆಟ್ನಲ್ಲಿ ತಿಳಿಸಿದ್ದಾರೆ. ತೋಟಗಾರಿಕೆ ಬೆಳೆ ವಿಸ್ತರಣೆಗೆ 75 ಕೋಟಿ ರೂ. ವೆಚ್ಚದಲ್ಲಿ ಶೀಥಲೀಕರಣ ಘಟಕ ಸ್ಥಾಪಿಸಲಾಗುವುದು. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ರೈಲಿನ ನೆರವು ನೀಡಲಾಗುವುದು. ಸಾವಯವ ಕೃಷಿಗೆ 200 ಕೋಟಿ ರೂ. ನೀಡಲಾಗುವುದು. ಶೀಘ್ರದಲ್ಲೇ ಹೊಸ ಕೃಷಿ ನೀತಿ ಜಾರಿಗೆ ತರಲಾಗುವುದು. ಸಣ್ಣ ಮತ್ತು ಅತಿಸಣ್ಣ ರೈತರಿಗೆ 10 ಸಾವಿರ ಕೋಟಿ ರೂ. ನೀಡಲಾಗುವುದು ಎಂದು ಘೋಷಿಸುವ ಮೂಲಕ ಸಿಎಂ ಯಡಿಯೂರಪ್ಪ ರಾಜ್ಯದ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ.
ಉಳಿದಂತೆ
- ಮಹಿಳಾ ಮೀನುಗಾರರ ಸಬಲೀಕರಣ” ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ.
- ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ.
- ಮಂಗಳೂರು ತಾಲ್ಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ.
- ಉಡುಪಿ ಜಿಲ್ಲೆಯ ಹೆಜಮಾಡಿಕೋಡಿಯಲ್ಲಿ ಪರಿಷ್ಕೃತ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ.
- ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ.
- ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ನಾಲ್ಕು ಕೋಟಿ ರೂ.
- ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ ಐದು ಕೋಟಿ ರೂ.
- ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 85 ಕೋಟಿ ರೂ. ಅನುದಾನ.
- ಕೊಡೇರಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಎರಡು ಕೋಟಿ ರೂ. ಅನುದಾನ.
- ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿ ಎಸಿಎಸ್) ಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ. 466 ಕೋಟಿ ರೂ. ನೆರವು. 92 ಸಾವಿರ ರೈತರಿಗೆ ಪ್ರಯೋಜನ.
- ಅಡಿಕೆ ಬೆಳೆಗಾರರ ಪ್ರಾಥಮಿಕ/ ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.5 ರಷ್ಟು ಬಡ್ಡಿ ವಿನಾಯಿತಿ
- ಕೃಷಿ ಮೌಲ್ಯ ಸರಪಳಿಯ ಅಭಿವೃದ್ಧಿಗಾಗಿ 100 ಎಫ್ ಪಿ ಒ ರಚನೆ, ಎಫ್ ಪಿ ಒ ಗಳ ಮೂಲಕ ಮೌಲ್ಯ ಸರಪಳಿ ಅಭಿವೃದ್ಧಿಗೆ ಎಂಟು ಕೋಟಿ ರೂ. ನೆರವು.
- ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿಗಾಗಿ ಸ್ಥಾಪಿಸಲಾಗಿರುವ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿಯ ಮೊತ್ತ ಅಗತ್ಯಕ್ಕೆ ಅನುಗುಣವಾಗಿ 2000 ಕೋಟಿ ರೂ. ವರೆಗೆ ಹೆಚ್ಚಳ.
- ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನ.
.