ಸುಳ್ಯ: ಎಲ್ಲರಲ್ಲಿಯೂ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಜಾಗೃತವಾದಾಗ ಭಾರತ ವಿಶ್ವಗುರುವಾಗಲು ಸಾಧ್ಯ. ಭಾರತ ವಿಶ್ವಗುರುವಾಗಬೇಕೆಂಬ ಚಿಂತನೆ ನಮಗೆಲ್ಲ ಸ್ಪೂರ್ತಿಯಾಗಬೇಕು ಎಂದು ರಾಷ್ಟ್ರಸೇವಿಕಾ ಸಮಿತಿಯ ಪ್ರಾಂತ ಕಾರ್ಯವಾಹಿಕ ವಸಂತಾ ಸ್ವಾಮಿ ಹೇಳಿದ್ದಾರೆ.
ರಾಷ್ಟ್ರ ಸೇವಿಕಾ ಸಮಿತಿಯ ವತಿಯಿಂದ ಸುಳ್ಯದಲ್ಲಿ ನಡೆದ ಪಥ ಸಂಚಲನದ ಬಳಿಕ ಚೆನ್ನಕೇಶವ ದೇವಸ್ಥಾನದ ಅಂಗಣದಲ್ಲಿ ನಡೆದ ಬೌದ್ಧಿಕ ವರ್ಗದಲ್ಲಿ ಅವರು ಬೌದ್ಧಿಕ್ ನೀಡಿದರು. ಭಾರತವು ಆಧ್ಯಾತ್ಮಿಕ ಪುಣ್ಯ ಭೂಮಿ. ಇಡೀ ಪ್ರಪಂಚವೇ ದೇಶದ ಬಗ್ಗೆ ತಲೆದೂಗುತಿದೆ. ಈ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯಲು ಮಹಿಳೆಯರೂ ಪ್ರಯತ್ನ ನಡೆಸಬೇಕು. ರಾಷ್ಟ್ರ ಎನ್ನುವ ಪಕ್ಷಿ ಎತ್ತರಕ್ಕೇರಲು ಒಂದು ರೆಕ್ಕೆಯಷ್ಟೇ ಸಾಕಾಗುವುದಿಲ್ಲ. ಪುರುಷರು ಒಂದು ರೆಕ್ಕೆಯಾದರೆ ಮಹಿಳೆಯರು ರಾಷ್ಟ್ರದ ಮತ್ತೊಂದು ರೆಕ್ಕೆಯಾಗಿ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂದರು.
ನಮ್ಮ ದೇಶದ ಪರಂಪರೆಯನ್ನೂ, ಸಂಸ್ಕೃತಿಯನ್ನೂ ಉಳಿಸಿದ ಕೀರ್ತಿ ಮಹಿಳೆಯರಿಗೆ ಸಲ್ಲುತ್ತದೆ. ಮನೆಯನ್ನೂ, ಸಮಾಜವನ್ನೂ, ದೇಶವನ್ನೂ ಬದಲಾವಣೆ ಮಾಡುವ ಶಕ್ತಿ ಮಹಿಳೆಯರಲ್ಲಿದೆ. ಪ್ರತಿಯೊಬ್ಬ ಮಹಿಳೆಯೂ ಶಕ್ತಿವಂತರಾಗಬೇಕು. ಸಮಾಜದಲ್ಲಿ ಕುಟುಂಬ ವ್ಯವಸ್ಥೆ ಶಿಥಿಲವಾಗದಂತೆ ಎಚ್ಚರವಹಿಸಿ ದೇಶದ ಭವ್ಯ ಪರಂಪರೆಯನ್ನು ಉಳಿಸಬೇಕು ಎಂದು ಅವರು ಹೇಳಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದಾದ್ಯಂತ ಶಾಖೆಗಳಿರುವ ದೊಡ್ಡ ಸಂಘಟನೆ ರಾಷ್ಟ್ರಸೇವಿಕಾ ಸಮಿತಿ ಭಾರತದಲ್ಲಿ ಮಾತ್ರವಲ್ಲದೆ 22 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರಭಕ್ತಿ, ದೇಶಪ್ರೇಮವನ್ನು ಉದ್ದೀಪನಗೊಳಿಸಿ ಜೀವನದಲ್ಲಿ ಶಿಸ್ತನ್ನು ಬೆಳೆಸಿ ದೇಶದ ಪ್ರತಿಯೊಬ್ಬ ಮಹಿಳೆಯನ್ನೂ ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು, ಆ ಮೂಲಕ ಒಗ್ಗಟ್ಟು ಮತ್ತು ಜಾಗೃತಿ ಮೂಡಿಸುವುದು ರಾಷ್ಟ್ರ ಸೇವಿಕಾ ಸಮಿತಿಯ ಧ್ಯೇಯ ಎಂದು ಅವರು ಹೇಳಿದರು.
ನಿವೃತ್ತ ಶಿಕ್ಷಕಿ ಕೆ.ಎಂ.ಭವಾನಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರ ಸೇವಿಕಾ ಸಮಿತಿಯ ತಾಲೂಕು ಕಾರ್ಯವಾಹಿಕಾ ಶಕುಂತಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿ ಸ್ವಾಗತಿಸಿ, ಹಿತಾಶ್ರೀ ವೈಯುಕ್ತಿಕ ಗೀತೆ ಹಾಡಿದರು. ಯಶೋಧಾ ರಾಮಚಂದ್ರ ವಂದಿಸಿದರು. ಶ್ರೀದೇವಿ ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್, ಪ್ರಾಂತ ಸಂಪರ್ಕ ಪ್ರಮುಖ್ ಮೀನಾಕ್ಷಿ, ಪ್ರಾಂತ ಶಾರೀರಿಖ್ ಪ್ರಮುಖ್ ಶಿಲ್ಪಾ, ವಿಭಾಗ ಕಾರ್ಯವಾಹಿಕಾ ಗಿರಿಜಾ, ವಿಭಾಗ ಶಾರೀರಿಕ್ ಪ್ರಮುಖ್ ವೈಶಾಲಿ, ಪುತ್ತೂರು ಜಿಲ್ಲಾ ಕಾರ್ಯವಾಹಿಕಾ ಸವಿತಾ.ಪಿ.ಜಿ. ಭಟ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಆಕರ್ಷಕ ಪಥ ಸಂಚಲನ: ರಾಷ್ಟ್ರ ಸೇವಿಕಾ ಸಮಿತಿಯ ವತಿಯಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಮಿತಿಯ ಗಣ ವೇಷ ಧರಿಸಿದ ನೂರಾರು ಮಂದಿ ಪಥ ಸಂಚಲನದಲ್ಲಿ ಭಾಗವಹಿಸಿದರು. ಶಾಸ್ತ್ರಿ ವೃತ್ತದಿಂದ ಹೊರಟು ನಗರದ ಮುಖ್ಯ ರಸ್ತೆಯಲ್ಲಿ ಸಾಗಿದ ಪಥ ಸಂಚಲನ ಗಾಂಧೀನಗರದವರೆಗೆ ತೆರಳಿ ಅಲ್ಲಿಂದ ಹಿಂತಿರುಗಿ ಶ್ರೀ ಚೆನ್ನಕೇಶವ ದೇವಸ್ಥಾನದ ಅಂಗಳದಲ್ಲಿ ಸಮಾಪನಗೊಂಡಿತು. ಪಥ ಸಂಚಲನ ಸಾಗುವ ಸಂದರ್ಭದಲ್ಲಿ ಅಲ್ಲಲ್ಲಿ ಭಾಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ರಾಷ್ಟ್ರ ಸೇವಿಕಾ ಸಮಿತಿಯ ವತಿಯಿಂದ ನಡೆದ ಬೃಹತ್ ಪಥ ಸಂಚಲನದಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ಮೂಲಕ ಸುಳ್ಯದಲ್ಲಿ ಇತಿಹಾಸ ನಿರ್ಮಿಸಿತು.
Advertisement