ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಗೋಣಿಕೊಪ್ಪದಲ್ಲಿ ದುಂಡು ಮೇಜಿನ ಸಂವಾದ ನಡೆಯಿತು.
ಕಿತ್ತಳೆ ಬೆಳಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬೆಳೆಗಾರರ ಸಮಸ್ಯೆಗಳು, ಮಳೆಹಾನಿ ಕೊಡಗಿನ ಪುನರ್‍ನಿರ್ಮಾಣ, ಆನೆ ಮತ್ತು ಮಾನವ ಸಂಘರ್ಷ ತಪ್ಪಿಸಲು ಕ್ರಮ, ಕರಿಮೆಣಸು ಆಮದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಮಲೆನಾಡು ಭಾಗದ ಕಾಫಿ ಹಾಗೂ ಕಾಳು ಮೆಣಸು ಬೆಳೆಗಾರರ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ವಿವಿಧ ಸಭೆಗಳು ಹಾಗೂ ಹೋರಾಟದ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಯಚೂರಿನ ಹಿರಿಯ ಗೌರವ ಅಧ್ಯಕ್ಷ ಚಾಮರಸ ಪಾಟೀಲ್, ಕೃಷಿಸಾಲ ಸೇರಿದಂತೆ ರೈತರು ಪಡೆಯುವ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬೇಕು ಮತ್ತು ಸಾಲ ಮರುಪಾವತಿಸಲು ಹತ್ತು ವರ್ಷಗಳ ಕಾಲಾವಕಾಶ ನೀಡಬೇಕೆಂದರು.
ಸಂಯೋಜಕ ಕೆ.ಕೆ.ವಿಶ್ವನಾಥ್ , ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಕಾವೇರಪ್ಪ , ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್ , ಬೆಳೆಗಾರರ ಒಕ್ಕೂಟದ ಸಲಹೆಗಾರ ಚೆಪ್ಪುಡಿರ ಶರಿಸುಬ್ಬಯ್ಯ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹಾಸನದ ಜಿ.ಟಿ.ರಾಮಸ್ವಾಮಿ, ಕಾರ್ಯದರ್ಶಿ ಮಂಗಳೂರಿನ ರವಿಕುಮಾರ್, ಪಿ.ಗೋಪಾಲ್, ಮಂಜುನಾಥ್, ಲೋಕರಾಜೇ ಅರಸ್, ಹೊಸೂರು ಕುಮಾರ್, ಜಿಲ್ಲಾ ಘಟಕದ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೇಪಂಡ ಪ್ರವೀಣ್, ಪೊನ್ನಂಪೇಟೆಯ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್, ಹುದಿಕೇರಿ ಹೋಬಳಿ ಸಂಚಾಲಕ ಚಂಗುಲಂಡ ಸೂರಜ್, ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದು ಸಲಹೆ, ಸೂಚನೆಗಳನ್ನು ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 19 ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.
ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟ ನಡೆಸುವುದು, ಕಾಫಿ ಬೆಳೆಗಾರರು ಪಡೆದಿರುವ ಎಲ್ಲಾ ಸಾಲಮನ್ನಾ ಮಾಡಬೇಕು ಮತ್ತು ಹೊಸದಾಗಿ ಸಾಲ ನೀಡಬೇಕು, ಹತ್ತು ಲಕ್ಷದ ವರೆಗಿನ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಮತ್ತು ಹತ್ತು ಲಕ್ಷದ ಮೇಲಿನ ಸಾಲವನ್ನು ಶೇ.3 ರ ಬಡ್ಡಿ ದರದಲ್ಲಿ ಒದಗಿಸಬೇಕು, ದೇಶದಲ್ಲಿ ಕಾಫಿ ಬಳಕೆ ಹೆಚ್ಚಿಸಲು ಕಾಫಿ ಮಂಡಳಿ ಹೊಸ ಯೋಜನೆಗಳನ್ನು ರೂಪಿಸಬೇಕು, ಕಾಫಿ ಮಂಡಳಿಯಿಂದ ಈ ಹಿಂದೆ ನೀಡಲಾಗುತ್ತಿದ್ದ ಎಲ್ಲಾ ಸಬ್ಸಿಡಿಗಳನ್ನು ಮುಂದುವರಿಸಬೇಕು, ಕಾಫಿ ಮಂಡಳಿಯಿಂದ ಬೆಳೆಗಾರರ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಮುಂದುವರಿಸಬೇಕು, ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕಾಫಿ ಮಂಡಳಿ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಜ್ಞಾನಿಗಳ ಸಹಯೋಗದೊಂದಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದಿಸುವ ಸಂಶೋಧನೆಗೆ ಒತ್ತು ನೀಡಬೇಕು, ಸಂಶೋಧನೆಗೆ ಕೃಷಿ ವಿಶ್ವವಿದ್ಯಾನಿಲಯಗಳ ಸಹಕಾರ ಪಡೆಯಬೇಕು, ಕೃಷಿ ಪರಿಕರಗಳ ಮೇಲೆ ವಿದಿಸುವ ಜಿ.ಎಸ್.ಟಿಯನ್ನು ಸಂಪೂರ್ಣವಾಗಿ ಕೈಬಿಡಬೇಕು, ಸರ್ಕಾರ ವಿದೇಶಗಳಿಂದ ಕಾಫಿ ಮತ್ತು ಕಾಳುಮೆಣಸನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು, ನೇಪಾಳ ಮತ್ತು ಶ್ರೀಲಂಕಾದ ಮೂಲಕ ಕಳ್ಳ ಮಾರ್ಗದಲ್ಲಿ ಬರುತ್ತಿರುವ ಕಾಳು ಮೆಣಸಿಗೆ ಕಡಿವಾಣ ಹಾಕಬೇಕು, ರಾಜ್ಯದ ಕಾಳುಮೆಣಸಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೇರಳ ಮತ್ತು ತಮಿಳುನಾಡು ಮಾದರಿ ಎಪಿಎಂಸಿ ಸೆಸ್‍ನ್ನು ಸಂಪೂರ್ಣ ಕೈಬಿಡಬೇಕು, ಕಾಫಿ ಮತ್ತು ಮೆಣಸು ಬೆಳೆಗಾರರಿಗೆ ಹೆಚ್ಚು ಹೆಚ್ಚು ಉತ್ತೇಜನ ಅನಿವಾರ್ಯವಿದ್ದು, ಸರ್ಕಾರ ಗೊಬ್ಬರದ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಬೇಕು ಮತ್ತು ಇತರೆ ಉತ್ತೇಜನಗಳನ್ನು ಒದಗಿಸಬೇಕು, ಇತರೆ ಜಿಲ್ಲೆಗಳಲ್ಲಿ ಬೇರೆ ಬೆಳೆಗಳಿಗೂ ಉಚಿತವಾಗಿ ವಿದ್ಯುತ್ ನೀಡುತ್ತಿರುವಂತೆ ಕಾಫಿ ಬೆಳೆಗೂ 10 ಹೆಚ್.ಪಿ ವರೆಗೆ ಉಚಿತವಾಗಿ ವಿದ್ಯುತ್ ನೀಡಬೇಕು, ಕಾಫಿ ಔಟ್‍ರ್ರನ್ ವಿಚಾರವಾಗಿ ಖರೀಧಿದಾರರು ರೈತರನ್ನು ಶೋಷಣೆ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ವ್ಯಾಪಾರಿಗಳು ಕಡ್ಡಾಯವಾಗಿ ಲೈಸನ್ಸ್ ಪಡೆಯುವಂತೆ ಕಾನೂನು ಮಾಡಬೇಕು, ಕಾಫಿ ಬೆಳೆಗೆ ಯಾವುದೇ ವಿಮಾ ಸೌಲಭ್ಯವಿಲ್ಲದಿದ್ದು, ಕೂಡಲೇ ಕಾಫಿಬೆಳೆಗೆ ವಿಮೆಯನ್ನು ಪ್ರಾರಂಭ ಮಾಡಬೇಕು, ಕೇಂದ್ರ ಸರ್ಕಾರದ ಫಸಲ್ ವಿಮಾ ಯೋಜನೆ ಏಕಪಕ್ಷೀಯವಾಗಿದ್ದು, ಇದನ್ನು ಎಲ್ಲಾ ಬೆಳೆಗಾರರಿಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಬೇಕು, ಕೇಂದ್ರದ ಅರಣ್ಯ ಕಾಯಿದೆಗೆ ತಿದ್ದುಪಡಿ ತಂದು ನೇಚರ್ ಟೂರಿಸಮ್‍ಗೆ ಅವಕಾಶ ನೀಡಬಾರದು, ವಿಶ್ವ ವಾಣಿಜ್ಯ ಒಪ್ಪಂದ ಜಾರಿಗೆ ಬಂದ ನಂತರ ಮಾಡಿಕೊಂಡಿರುವ ಎಲ್ಲಾ ಬೈಲಾಟರಲ್ ಅಗ್ರಿಮೆಂಟ್‍ನ್ನು ಪ್ರತಿ 5 ವರ್ಷಕ್ಕೊಮ್ಮೆ ಪುನರ್ ಪರಿಶೀಲಿಸಬೆಕು, ಆನೆ ಹಾವಳಿಯನ್ನು ತಪ್ಪಿಸಲು 282 ಕಿ.ಮೀ ಸುತ್ತಳತೆಗೆ ರೈಲ್ವೆ ಕಂಬಿಯನ್ನು ಅಳವಡಿಸಬೇಕು.