ಸುಳ್ಯ:1971ರಲ್ಲಿ ಪ್ರಾರಂಭಗೊಂಡ ಸುಳ್ಯ ರೋಟರಿ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ 2020-21ನೇ ಸಾಲಿನಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ಸುವರ್ಣ ಮಹೋತ್ಸವದ ಅಂಗವಾಗಿ ರೋಟರಿ ಕ್ಲಬ್ ವತಿಯಿಂದ 50 ಲಕ್ಷ ರೂ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ನ.11ರಂದು ಈ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ರೋಟರಿ ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಿತ್ತಡ್ಕ ರೋಟರಿ ಶಾಲಾ ವಠಾರದಲ್ಲಿ ಯೋಜನೆಗಳಿಗೆ ಚಾಲನೆ ಮತ್ತು ಭೂಮಿ ಪೂಜೆ ನಡೆಯಲಿದೆ. ರೋಟರಿ ಸದಸ್ಯರ ಸಹಕಾರದಲ್ಲಿ ಮಿತ್ತಡ್ಕ ರೋಟರಿ ಶಾಲೆಯಲ್ಲಿ ರಂಗಮಂದಿರ, ಸ್ವಾಗತ ಕಮಾನು, ಸುಳ್ಯ ರಥಬೀದಿಯ ರೋಟರಿ ಶಾಲೆಯಲ್ಲಿ ಹವಾನಿಯಂತ್ರಿತ ರೋಟರಿ ಸಭಾಭವನ, ಶಾಲೆಗೆ ಮೇಲ್ಮುಚ್ಚಿಗೆ, ಬಾಳುಗೋಡಿನ ಬೆಟ್ಟುಮಕ್ಕಿ ಎಂಬಲ್ಲಿ ರಂಗ ಮಂದಿರ, ಶೌಚಾಲಯ ನಿರ್ಮಾಣ ಮತ್ತಿತರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಯೋಜನೆಗೆ ಚಾಲನೆ ನೀಡುವರು. ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಎಂ.ರಂಗನಾಥ ಭಟ್, ಝೋನ್ 5ರ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ.ಕೆ, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಮೀನಾಕ್ಷಿ ಗೌಡ, ಪ್ರಭಾಕರನ್ ನಾಯರ್, ಗುರುರಾಜ ವೈಲಾಯ, ಲತಾ ಮಧುಸೂದನ್, ದಯಾನಂದ ಆಳ್ವ, ಗಣೇಶ್ ಶರ್ಮ ಉಪಸ್ಥಿತರಿದ್ದರು.