ಸುಳ್ಯ: ಮತ ಚಲಾಯಿಸಿ 35 ದಿನಗಳ ಬಳಿಕ ಬರುವ ಲೋಕಸಭಾ ಚುನಾವಣೆ ಫಲಿತಾಂಶದ ಕಾತರ ಇಡೀ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎಲ್ಲೆಡೆ ಮನೆ ಮಾಡಿದೆ. ಏಳು ಹಂತದ ಚುನಾವಣೆ ಮೆ.19ಕ್ಕೆ ಮುಗಿಯುತ್ತಿದ್ದಂತೆ ಚುನಾವಣಾ ಫಲಿತಾಂಶ ಕುರಿತಾದ ಕಾತರ, ಚರ್ಚೆ ಮತದಾರರಲ್ಲಿ, ರಾಜಕೀಯ ಪಕ್ಷಗಳಲ್ಲಿ ಎಲ್ಲೆಡೆ ಪ್ರಾರಂಭಗೊಂಡಿತು. ಫಲಿತಾಂಶದ ಮುನ್ನಾ ದಿನವಾದ ಬುಧವಾರವಂತೂ ಫಲಿತಾಂಶ ಕುರಿತಾದ ಕಾತರವೇ ಮುಗಿಲು ಮುಟ್ಟಿತ್ತು. ಎಲ್ಲೆಡೆ ಫಲಿತಾಂಶದ, ಸೋಲು ಗೆಲುವಿನ, ಬಹುಮತದ ಕುರಿತ ಚರ್ಚೆಗಳೇ ಕೇಳಿ ಬರುತ್ತಿತ್ತು.
ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಬಿರುಸಿನ ಪ್ರಚಾರದ ಬಳಿಕ ಏಪ್ರಿಲ್ 18 ರಂದು ದ.ಕ.ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು. 17,24,460 ಮತದಾರರ ಪೈಕಿ 13,43,378 ಮಂದಿ ಮತ ಚಲಾಯಿಸಿ 77.90 ಶೇ. ಮತದಾನ ದಾಖಲಾಗಿತ್ತು. ಬಿಜೆಪಿ, ಕಾಂಗ್ರೆಸ್, ಎಸ್.ಡಿ.ಪಿ.ಐ, ಬಿಎಸ್ ಪಿ, ಉತ್ತಮ ಪ್ರಜಾಕೀಯ ಪಾರ್ಟಿ, ಹಿಂದೂಸ್ತಾನ್ ಜನತಾ ಪಾರ್ಟಿ ಅಭ್ಯರ್ಥಿ ಗಳು ಮತ್ತು ಏಳು ಮಂದಿ ಪಕ್ಷೇತರರು ಸೇರಿ ಒಟ್ಟು 13 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಧ್ಯೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತು. ಫಲಿತಾಂಶದ ಬಗ್ಗೆ ಸಾಕಷ್ಟು ಕುತೂಹಲ ಇದ್ದರೂ ಎರಡೂ ಪಕ್ಷಗಳು ಗೆಲುವಿನ ನಿರೀಕ್ಷೆಯಲ್ಲಿದೆ.
ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾನ ದಾಖಲಾದ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಕುರಿತಾದ ಕುತೂಹಲ ಗರಿಗೆದರಿದೆ. ಇಡೀ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಪಡೆಯುವ ಬಹುಮತ ಫಲಿತಾಂಶ ದಲ್ಲಿ ನಿರ್ಣಾಯಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತದೆ. ಆದುದರಿಂದಲೇ ಸುಳ್ಯ ಕ್ಷೇತ್ರದಲ್ಲಿ ಫಲಿತಾಂಶ ಕುರಿತಾದ ಕಾತರ ಸ್ವಲ್ಪ ಹೆಚ್ಚೇ ಇದೆ ಎಂದು ಹೇಳಬಹುದು.