ಮಾಡಾವು ವಿದ್ಯುತ್ ಸಬ್ ಸ್ಟೇಶನ್ ಸಿದ್ಧವಾಗಲು ವಿದ್ಯುತ್ ತಂತಿ ಬರಬೇಕು. ಇದಕ್ಕೆ ಕೆಲವು ಮರಗಳ ತೆರವು ಕಾರ್ಯವಾಗಬೇಕು. ಹೀಗಾಗಿ ದಯವಿಟ್ಟು ಮರಗಳನ್ನು ತೆರವು ಮಾಡಿಕೊಡಲಿ, ತೆರವು ಮಾಡಲು ಅವಕಾಶ ನೀಡಿ ಎಂದು ವಿದ್ಯುತ್ ಬಳಕೆದಾರರು , ಹೋರಾಟಗಾರರು, ಕೃಷಿಕರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಸುಳ್ಯ,ಕಡಬ ಮತ್ತು ಭಾಗಶ: ಪುತ್ತೂರು ತಾಲೂಕುಗಳ ವಿದ್ಯುತ್ ಬಳಕೆದಾರರು ದಯನೀಯ ಸ್ಥಿತಿಯಲ್ಲಿದ್ದಾರೆ. ಇಲ್ಲಿನ ಜನ ಕೃಷಿ, ಕೈಗಾರಿಕೆ, ವಾಣಿಜ್ಯ ಇತ್ಯಾದಿ ವಿದ್ಯುತ್ ಬಳಕೆದಾರರು ಇಲ್ಲಿದ್ದು ಕೃಷಿ ಪಂಪ್ ಸೆಟ್, ಕೈಗಾರಿಕೆ, ವಾಣಿಜ್ಯ ಮನೆ ಬಳಕೆಗೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಮೆಸ್ಕಾಂ ಮೂಲಕ ಸರಬರಾಜು ಮಾಡುವ ವಿದ್ಯುತ್ತನ್ನು ನಂಬಿ ಕೊಂಡಿದ್ದಾರೆ. ಆದರೆ ಹಲವಾರು ವರ್ಷಗಳಿಂದ ಅಸಮರ್ಪಕ ವಿದ್ಯುತ್ ಸರಬರಾಜು ಇರುತ್ತಿದ್ದು
ಕುಡಿಯುವ ನೀರು ಕೂಡಾ ತತ್ವಾರವಾಗುತ್ತಿದೆ. ಲೋವೋಲ್ಟೇಜ್ ಸಮಸ್ಯೆ ಕಾಡುತ್ತಿದೆ. ವರ್ಷದಿಂದ ವರ್ಷಕ್ಕೆ ವಿದ್ಯುತ್ ಸರಬರಾಜು ಹೀನಾಯ ಸ್ಥಿತಿಗೆ ತಲುಪುತ್ತಿದೆ. ಈಗಂತೂ ಅಧೋಗತಿಗೆ ತಲುಪಿದ್ದು ಕೆಲವೆಡೆ ದಿನಕ್ಕೆ ಕೇವಲ 2 ಗಂಟೆ ಕಳಪೆ ಗುಣ ಮಟ್ಟದಲ್ಲಿ ಪೂರೈಕೆಯಾಗುವ ವಿದ್ಯುತ್ ನಲ್ಲಿಯೇ ಕೃಷಿಕರು ಸೇರಿದಂತೆ ಉದ್ಯಮಿಗಳೆಲ್ಲರೂ ಸರ್ಕಸ್ ಮಾಡುತ್ತಿದ್ದಾರೆ. ಕೈಗಾರಿಕೆಗಳು ಸೊರಗಿ ಸಾಲದ ಕಂತು ಕಟ್ಟಲೂ ಅಸಾಧ್ಯ ಸ್ಥಿತಿ ಇದೆ. ವಾಣಿಜ್ಯ ಬಳಕೆದಾರರು ವ್ಯವಹಾರ ಮಾಡಲೇ ಅಸಾಧ್ಯ ಪರಿಸ್ಥಿತಿ ಇದೆ. ಆಸ್ಪತ್ರೆಗಳು, ಆಫೀಸುಗಳು, ಬ್ಯಾಂಕುಗಳು, ಹಾಲಿನ ಸಂಸ್ಕರಣಾ ಕೇಂದ್ರಗಳು, ಮನೆ ಬಳಕೆದಾರರು ಇತ್ಯಾದಿ
ಇತ್ಯಾದಿ ಅಸಹನೀಯ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಇನ್‍ವರ್ಟರ್ ಚಾರ್ಜು ಆಗುವುದಿಲ್ಲ. ಜನರೇಟರ್ ಅಳವಡಿಸಲು ಕೆಲವರಿಗೆ ತಾಕತ್ತಿಲ್ಲ, ಇದ್ದವರಿಗೂ ಇಂಧನ ವೆಚ್ಚ ಭರಿಸಲು ಅಸಾಧ್ಯ. ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಓದಲು ದೀಪ ಬಳಸಲೂ ಸೀಮೆ ಎಣ್ಣೆ ಲಭ್ಯವಿಲ್ಲ. ಒಟ್ಟಿನಲ್ಲಿ ಈ ವ್ಯಾಪ್ತಿಯ ಜನಗಳ ಬದುಕೇ ದುಸ್ಥರವಾಗಿದೆ. ಸರಕಾರಿ ವ್ಯವಸ್ಥೆಯ ಸಾರ್ವಜನಿಕ ಕುಡಿಯುವ ನೀರು ಸರಬರಾಜು ಕೂಡಾ ವಿದ್ಯುತ್ ಸಮಸ್ಯೆಯಿಂದ ಏರುಪೇರಾಗಿದ್ದು ಅದನ್ನೇ ನಂಬಿದ ಹಲವು ಸಾರ್ವಜನಿಕರು ಗುಳೆ ಹೋಗುವ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿ ನಿವಾರಣೆಗೆ ಸದ್ಯಕ್ಕೆ ಮಾಡಾವು ವಿದ್ಯುತ್ ಸಬ್ ಸ್ಟೇಶನ್ ಮಾತ್ರವೇ ಪರಿಹಾರವಾಗಿದೆ. ಆದರೆ ಅದಕ್ಕೂ ಅರಣ್ಯ ಇಲಾಖೆಯಿಂದ ಕೆಲವು ಕಡೆ ಅಡ್ಡಿ ಇದೆ.
ಕೆ.ಪಿ.ಟಿ.ಸಿ.ಎಲ್ 2005 ರಲ್ಲಿ ಕೈಗೆತ್ತಿಕೊಂಡು ಈಗಾಗಲೇ 14 ವರ್ಷಗಳಾಗಿದ್ದು ಇನ್ನೂ ಅರಣ್ಯ ಇಲಾಖೆಯಿಂದ ವಿದ್ಯುತ್ ಲೈನ್ ಹಾದು ಹೋಗುವ ಮಾರ್ಗಗಳ ಮರಗಳನ್ನು ತೆರವು ಮಾಡಲು ಬಾಕಿ ಇದೆ. ಇನ್ನೂ ಹಲವಾರು ಇಂತಹ ಪ್ರಾಥಮಿಕ ವಿಚಾರಗಳೇ ನೆನೆಗುದಿಗೆ ಬಿದ್ದಿದೆ. ಹೀಗೇ ಸಾಗಿದರೆ ಇನ್ನೂ ಕೆಲವು ವರ್ಷಗಳ ಕಾಲ ಸಾಗಿದರೆ ವಿದ್ಯುತ್ ಬಳಕೆದಾರರು ಸಂಪೂರ್ಣವಾಗಿ ಬಳಲಿದ್ದಾರೆ, ಕೃಷಿ, ಕೈಗಾರಿಕೆ ಬಂದ್ ಆಗಲಿದೆ. ಹೀಗಾಗಿ ಸುಳ್ಯ, ಕಡಬ ಮತ್ತು ಪುತ್ತೂರು ತಾಲೂಕುಗಳ ಹಲವು ಗ್ರಾಹಕ ಹಾಗೂ ಇತರ ಸಂಘಟನೆಗಳು ಇದಕ್ಕಾಗಿ ಒಗ್ಗೂಡಿ “ಪುತ್ತೂರು ತಾಲೂಕು ಮಾಡಾವು ಪ್ರಸ್ಥಾವಿತ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ (ವಿವಿಧ ಸಂಘಟನೆ ಸಂಯೋಜಿತ ) ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ” ಯನ್ನು ರಚಿಸಿ ಹೋರಾಟಕ್ಕೆ ಇಳಿದಿದ್ದಾರೆ.
110 ಕೆ.ವಿ. ವಿದ್ಯುತ್ ಲೈನ್ ಹಾದು ಹೋಗುವ ಸರಕಾರಿ ಸ್ಥಳದಲ್ಲಿರುವ ಮರಗಳ ತೆರವು ಮಾಡಲು ಅನುಮತಿ ನೀಡುವ ಬಗ್ಗೆ ಅರಣ್ಯ ಇಲಾಖೆ ಆಕ್ಷೇಪಣೆಗಳನ್ನು ಆಹ್ವಾನಿಸಿ ನಡೆಸಿದ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಕುರಿತು ತಿಳಿದು ಸಂಘಟನೆಗಳ ಮುಖ್ಯ ಪದಾಧಿಕಾರಿಗಳು ಸಭೆಗೆ ಹಾಜರಾಗಿ ಅರಣ್ಯ ಇಲಾಖಾ ಅನುಮತಿ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಸಂಚಾಲಕ ಜಯಪ್ರಸಾದ್ ಜೋಶಿಯವರು ಮನವಿ ಓದಿದರು. ಕೋಡಿಬೈಲ್ ಸತ್ಯನಾರಾಯಣ ಭಟ್ ಇವರು ಕಡಿದ ಮರಕ್ಕಿಂತ ಹತ್ತು ಪಟ್ಟು ಗಿಡ ನೆಡುವ ಭರವಸೆ ನೀಡಿದರು. ಅರಣ್ಯ ಇಲಾಖೆ ವತಿಯಿಂದ ವಿಭಾಗೀಯ ಅರಣ್ಯ ಅಧಿಕಾರಿಗಳು, ಮಂಗಳೂರು, ಸಹಾಯಕ ಅರಣ್ಯ ಅಧಿಕಾರಿಗಳು ಪುತ್ತೂರು ಮತ್ತಿತರ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಕೆ.ಪಿ.ಟಿ.ಸಿ.ಎಲ್ ವತಿಯಿಂದ ಅಧೀಕ್ಷಕ ಅಭಿಯಂತರ ರವಿಕಾಂತ್ ಕಾಮತ್, ಕಾರ್ಯನಿರ್ವಾಹಕ ಅಭಿಯಂತರ ಗಂಗಾಧರ್, ಕಾರ್ಯನಿರ್ವಾಹಕ ಅಭಿಯಂತರ ನರಸಿಂಹ ಮೊದಲಾದವರು ಇದ್ದರು. ಎಲ್ಲಾ ಇಲಾಖೆಗಳು ಪೂರಕವಾಗಿ ಸ್ಪಂದಿಸುವ ಭರವಸೆಯನ್ನು ಹೋರಾಟ ಸಮಿತಿ ವ್ಯಕ್ತಪಡಿಸಿದೆ.
ಅರಣ್ಯ ಪರಿಸರ ಸಂರಕ್ಷಣೆ -ಸಂವರ್ಧನೆ ಬಗ್ಗೆ ಕೃಷಿಕರು ಹಾಗೂ ಗ್ರಾಮೀಣ ಭಾಗದ ಮಂದಿ ಕಾಳಜಿ ಹೊಂದಿದವರಾಗಿರುತ್ತೇವೆ. ಆದರೆ ಇನ್ನೊಂದೆಡೆ ವಿದ್ಯುತ್ ಜೀವನ್ಮರಣದ ಪ್ರಶ್ನೆಯಾಗಿದೆ. ಒಂದೊಮ್ಮೆ ನೀವು ಅನುಮತಿ ಕೊಟ್ಟು ಕೇಂದ್ರ ಆರಂಭವಾಗಿ ಆ ಕಾರಣ ನಷ್ಟವಾಗುವ ಮರಗಳ ಬದಲಾಗಿ ನಾವೂ ನಿಮ್ಮೊಂದಿಗೆ ಕೈ ಜೋಡಿಸಿ ಈಗ ಕಡಿಯುವುದಕ್ಕಿಂತ ದುಪ್ಪಟ್ಟು ಸಂಖ್ಯೆಯ ಮರಗಳನ್ನು ನಮ್ಮ ಪರಿಸರದಲ್ಲಿ ಬೆಳೆಸುತ್ತೇವೆ ಎಂಬ ಭರವಸೆಯನ್ನೂ ಇದೇ ವೇಳೆ ನೀಡಲಾಯಿತು.
ವಿತರಣಾ ಕೇಂದ್ರದ ಕಾರ್ಯಾರಂಭದವರೆಗೆ ಮುಂದಿನ ಹಂತ ಹಂತದ ಹೋರಾಟಗಳಲ್ಲಿ ಕೂಡಾ ಬಳಕೆದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅತೀ ಅಗತ್ಯವಾಗಿದ್ದು ‘ನಾವು ನಮಗಾಗಿ’ ಪಾಲ್ಗೊಳ್ಳಬೇಕೆಂದು ವ್ಯಾಪ್ತಿಯ ಎಲ್ಲಾ ಬಳಕೆದಾರರನ್ನು ಸಮಿತಿ ಸಂಚಾಲಕ ಜಯಪ್ರಸಾದ್ ಜೋಶಿ ಮತ್ತು ಸಮಿತಿ ಪದಾಧಿಕಾರಿಗಳು
ಕೋರಿದ್ದಾರೆ.
ಸಮಿತಿಯಲ್ಲಿ ಜಯಪ್ರಸಾದ್ ಜೋಶಿ ಬೆಳ್ಳಾರೆ, ಎನ್.ಜಿ. ಪ್ರಭಾಕರ ರೈ, ಸತ್ಯನಾರಾಯಣ ಭಟ್ ಕೋಡಿಬೈಲ್, ಗೋಪಾಲಕೃಷ್ಣ ಭಟ್ ಕರ್ವಂಕಲ್, ಪ್ರಮೋದ್ ಕುಮಾರ್ ರೈ, ರಮೇಶ ಕೋಟೆ, ಡಾ.ರಾಮಚಂದ್ರ ಭಟ್ ದೇವಸ್ಯ , ಗೋಪಾಲಕೃಷ್ಣ ಭಟ್ ನೆಟ್ಟಾರು , ದಯಾಕರ ಆಳ್ವ , ಜಾಕೆ ಮಾಧವ ಗೌಡ ಪಂಜ , ಅಬ್ದುಲ್ ಗಫೂರ್ ಕಲ್ಮಡ್ಕ, ಮಹೇಶ್ ಕುಮಾರ್ ಕರಿಕ್ಕಳ, ರಾಜೇಶ್ ಶ್ಯಾನುಭೋಗ್ ಮಣಿಕ್ಕಾರ ಮೊದಲಾದವರು ಇದ್ದಾರೆ.
ಇದೊಂದು ಅಭಿವೃದ್ಧಿಪರವಾದ ಕೆಲಸ. ವಿದ್ಯುತ್ ಸರಬರಾಜು ಆಗದೇ ಯಾವುದೇ ಗ್ರಾಮ, ಯಾವುದೇ ಕೃಷಿ , ಯಾವುದೇ ಉದ್ಯಮ ಅಭಿವೃದ್ಧಿ ಕಾಣದು. ಎತ್ತಿನಹೊಳೆಯಂತಹ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಮರಗಳ ಮಾರಣ ಹೋಮ ಮಾಡಲು ಅವಕಾಶ ನೀಡುವ ಸರಕಾರ, ಇಲಾಖೆಗಳು ಅಭಿವೃದ್ಧಿ ಪರವಾಗಿರುವ ಇಂತಹ ಮರಗಳ ತೆರವಿಗೆ ಮಾತ್ರಾ ಮನಸ್ಸು ಮಾಡುತ್ತಿಲ್ಲ. ಸರಕಾರ ಮಟ್ಟದಲ್ಲಿ ಇಂತಹ ಅಭಿವೃಧ್ಧಿ ಪರವಾಗಿರುವ ಯೋಜನೆಗಳಿಗೆ ನಿರ್ಣಯಗಳನ್ನು ಮಾಡಬೇಕು, ಜೊತೆಗೆ ಒಂದು ಮರ ತೆರವು ಮಾಡುವುದಕ್ಕೆ ಪ್ರತಿಯಾಗಿ ಕನಿಷ್ಟ 10 ಗಿಡ ನೆಡುವ ಬಗ್ಗೆಯೂ ನಿರ್ಣಯ ಮಾಡಬೇಕಾದ ಅವಶ್ಯಕತೆ ಇದೆ. ಸರಕಾರಗಳು , ಜನಪ್ರತಿನಿಧಿಗಳು ಇಂತಹ ನಿರ್ಣಯದ ಬಗ್ಗೆ ಯೋಚನೆ ಮಾಡಬೇಕಿದೆ.