ಸುಳ್ಯ: ಸಮಾಜಕ್ಕೆ ಶಾಂತಿ, ಸೌಹಾರ್ದತೆ, ಸಮಾನತೆಯನ್ನು ಸಾರಿದ, ಯುವ ಸಮುದಾಯಕ್ಕೆ ದಾರಿದೀಪವಾದ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಅಭಿಪ್ರಾಯಪಟ್ಟರು.
ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವರೆಡ್ ಕ್ರಾಸ್ ಘಟಕ ಹಾಗೂ ವಿಕ್ರಮ ಯುವಕ ಮಂಡಲ ಜಯನಗರ ಇವುಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಪ್ರಯುಕ್ತ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಹಮ್ಮಿಕೊಂಡ ವಿಷಯಾಧಾರಿತ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮ `ಅರಿವಿನಿಂದ ಪ್ರಗತಿಯೆಡೆಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ವಧರ್ಮ ಸಮನ್ವಯತೆಯನ್ನು ಸಾರಿದ ವಿವೇಕಾನಂದರು ಯುವಕರಿಗೆ ಮಾರ್ಗದರ್ಶಕರಾದವರು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ ಗಿರಿಧರಗೌಡ ಮಾತನಾಡಿ ದೇಶಕಟ್ಟುವ ಶಕ್ತಿ ಯುವಕರಲ್ಲಿದೆ, ಯುವಕರು ಮನಸ್ಸು ಮಾಡಿದರೆ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದರು. ಕೆ.ವಿ.ಜಿ ಕ್ಯಾಂಪಸ್‍ನ ವಿದ್ಯಾರ್ಥಿ ಕ್ಷೇಮಾಧಿಕಾರಿ ಜವರೇಗೌಡ.ಡಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್‍ಪೇಟ್, ವಿಕ್ರಮಯುವ ಮಂಡಲದ ಪೂರ್ವಾಧ್ಯಕ್ಷ ಸುರೇಂದ್ರ ಕಾಮತ್, ನೆಹರು ಯುವಕೇಂದ್ರ ದಕ್ಷಿಣಕನ್ನಡ ಜಿಲ್ಲೆಯ ನಾಮ ನಿರ್ದೇಶಿತ ಸದಸ್ಯ ಕಿಶನ್ ಜಬಳೆ, ವಿಕ್ರಮ ಯುವಕ ಮಂಡಲದ ಅಧ್ಯಕ್ಷ ಪ್ರಸನ್ನ ಮಾತನಾಡಿದರು. ಯುವರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೇಸಿ ವಲಯ ತರಬೇತುದಾರ ಚಂದ್ರಶೇಖರ ಬಿಳಿನೆಲೆ, ಶಿಕ್ಷಣ ಸಂಯೋಜಕ ಡಾ.ಸುಂದರಕೇನಾಜೆ, ಭವಾನಿಶಂಕರ ಅಡ್ತಲೆ, ಸಾಯಿರಾಂ ಸುಳ್ಯ ತರಬೇತುದಾರರಾಗಿದ್ದರು. ಮೌನ,ತೇಜಸ್ವಿನಿ, ರಚನಾ ಪ್ರಾರ್ಥಿಸಿದರು. ಕುಲದೀಪ್ ಸ್ವಾಗತಿಸಿ, ಅಶ್ವಿತಾ ವಂದಿಸಿದರು. ಜಯಮಾಲ ಕೆ.ವಿ ಕಾರ್ಯಕ್ರಮ ನಿರೂಪಿಸಿದರು. ಯುವ ರೆಡ್‍ಕ್ರಾಸ್ ಘಟಕ ನಾಯಕರಾದ ಭುವನ್ ಪಿ,ಕುಮುದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.