ಒಂದು ಯೋಜನೆ ಯಾಕಿಷ್ಟು ವಿಳಂಬವಾಗುತ್ತಿದೆ ? ಕಳೆದ 14 ವರ್ಷಗಳಿಂದ ವಿದ್ಯುತ್ ಯೋಜನೆ ಕುಂಟುತ್ತಾ ಸಾಗುತ್ತಿದೆ. ಹೀಗಿರುವಾಗ ಯಾರು ಇದನ್ನು ಮಾತನಾಡಬೇಕು ? ಇಷ್ಟು ವರ್ಷಗಳಿಂದಲೂ ಇಲಾಖೆಯೊಂದು ಜನರನ್ನು , ಜನಪ್ರತಿನಿಧಿಗಳನ್ನು ದಿಕ್ಕುತಪ್ಪಿಸುತ್ತಿದೆ. ಜನಪ್ರತಿನಿಧಿಗಳೂ ಮೌನವಹಿಸಿದ್ದರು. ಒಂದು ಕಡೆ ಇಡೀ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ.ಮತ್ತೊಂದು ಕಡೆ ಸಂಪರ್ಕ ಹೆಚ್ಚುತ್ತಲೇ ಇದೆ. ವಿದ್ಯುತ್ ಬಗ್ಗೆ ಎಲ್ಲಾ ಪಕ್ಷಗಳು ಹೋರಾಟ ಮಾಡುತ್ತವೆ. ವಾಸ್ತವಾಂಶದ ಬಗ್ಗೆ ತಿಳಿದು ಏನು ಮಾಡಬೇಕು, ಏನು ಮಾಡಬಹುದು ಎಂಬುದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಮಾತನಾಡಿದ ತಕ್ಷಣವೇ ರಾಜಕೀಯ ಬಣ್ಣ ಕಟ್ಟುವ, ಸಂಘಟನೆಯಿಂದಲೇ ದೂರ ಮಾಡುವ ಯೋಚನೆ ಹೊಳೆಯುತ್ತದೆ, ಪ್ರತಿಯೊಂದಕ್ಕೂ ರಾಜಕೀಯ, ಧರ್ಮ, ಜಾತಿ, ಸಂಘಟನೆ ಎಂದು ಗುದ್ದಾಡುವ ಮಂದಿ ಇಂತಹ ಸಾಮಾಜಿಕ ಬದ್ದತೆಯ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂಬೆಲ್ಲಾ ಪ್ರಶ್ನೆಗಳು ಹಿಂದೆಲ್ಲಾ ಕೇಳುತ್ತಲೇ ಅನೇಕರು ಇದ್ದರು, ಈಗಲೂ ಇದ್ದಾರೆ.
Advertisementಈ ಎಲ್ಲಾ ಪ್ರಶ್ನೆ, ಸಂದೇಹ, ಜಿಜ್ಞಾಸೆಗಳ ನಡುವೆ ರಾಜಕೀಯ, ಸ್ವಹಿತದ ಲಾಭ ಇಲ್ಲದೆ ಪುತ್ತೂರು ತಾಲೂಕು ಮಾಡಾವು ಪ್ರಸ್ಥಾವಿತ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ (ವಿವಿಧ ಸಂಘಟನೆ ಸಂಯೋಜಿತ ) ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಕೆಲಸ ಮಾಡುತ್ತಿದೆ.ರಚನಾತ್ಮಕ ದೃಷ್ಟಿಯಿಂದ ಸಮಾಜದ ಮುಂದೆ ಇರುವ ಸುಳ್ಯನ್ಯೂಸ್.ಕಾಂ ಕೂಡಾ , ಮಾಧ್ಯಮ ಜವಾಬ್ದಾರಿಯಿಂದ, ಸಾಮಾಜಿಕ ಬದ್ಧತೆಯಿಂದ ಸಂಘಟನೆಯ ಕೆಲಸ ಕಾರ್ಯಗಳ ಜೊತೆ ನಿಂತು ಸಹಕಾರ ಮಾಡುತ್ತದೆ.
Advertisement
ಸುಳ್ಯ: ಕೊನೆಗೂ ಶಾಸಕರ ಮುಂದೆ ಕೆ ಪಿ ಟಿ ಸಿ ಎಲ್ ಬಣ್ಣ ಬಯಲಾಯ್ತು. ಕಳೆದ 14 ವರ್ಷಗಳಿಂದ ಕೆಲವೇ ದಿನಗಳಲ್ಲಿ ಕೆಲವೇ ದಿನಗಳಲ್ಲಿ ಮಾಡಾವು ಸಬ್ ಸ್ಟೇಶನ್ ಕಾಮಗಾರಿ ಮುಗಿಯುತ್ತದೆ ಎನ್ನುತ್ತಿದ್ದ ಅಧಿಕಾರಿಗಳು ಮತ್ತೆ ಅದೇ ಮಾತನ್ನು ಹೇಳಿದಾಗ ದಾಖಲೆ ಸಹಿತ ಶಾಸಕರ ಮುಂದೆ ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಪ್ರಶ್ನಿಸಿದಾಗ ಸತ್ಯ ಹೊರಬಂತು. ಇನ್ನೀಗ ಶಾಸಕರ ಕೆಲಸ ಸುಲಭವಾಗಿದೆ, ಒತ್ತಡ ಹೆಚ್ಚಬೇಕಿದೆ.
ಸುಳ್ಯ ಶಾಸಕ ಎಸ್ ಅಂಗಾರ ಹಾಗೂ ಮಾಡಾವು 110 ಕೆ.ವಿ. ಸಂಬಂಧಿತ ಅಧಿಕಾರಿಗಳ ಮತ್ತು ಕ್ರಿಯಾ ಸಮಿತಿ ಸದಸ್ಯರು ಮುಖಾಮುಖಿಯಾಗಿ ಮಾತುಕತೆ ನಡೆಸಿದರು. ಸುಳ್ಯ, ಕಡಬ ಮತ್ತು ಭಾಗಶ: ಪುತ್ತೂರು ತಾಲೂಕುಗಳ ವಿದ್ಯುತ್ ಸರಬರಾಜು ಸಮಸ್ಯೆ ಪರಿಹಾರಕ್ಕೆ ಏಕೈಕ ಪರಿಹಾರವೆಂದು ಹೇಳಲಾದ ಮಾಡಾವಿನಲ್ಲಿ 110 ಕೆ.ವಿ. ವಿದ್ಯುತ್ ಕೇಂದ್ರ 2005 ರಲ್ಲಿ ಅಂದರೆ 14 ವರ್ಷದ ಹಿಂದೆ ಇಲಾಖೆ ಕೈಗೆತ್ತಿಕೊಂಡಿದ್ದರೂ ಕಾರ್ಯಾರಂಭ ಇನ್ನೂ ನೆನೆಗುದಿಯಲ್ಲಿದ್ದು ಹಲವಾರು ವಿಚಾರಗಳಲ್ಲಿ ಬಳಕೆದಾರರು ಕೈಜೋಡಿಸಿ ಪೂರೈಸಿ ಕೊಟ್ಟರೂ ಕಾಮಗಾರಿ ತ್ವರಿತ ವೇಗ ಪಡೆಯದೆ ಇರುವುದರಿಂದಲೂ, ಇಲಾಖಾ ಅಧಿಕಾರಿಗಳು ಪ್ರಗತಿಯ ಬಗ್ಗೆ ಸದಾ ತಪ್ಪು ಮಾಹಿತಿಯನ್ನು ಜನ ಪ್ರತಿನಿಧಿಗಳಿಗೆ ಮತ್ತು
ಜನರಿಗೆ ಹೇಳಿ ದಿಕ್ಕು ತಪ್ಪಿಸುತ್ತಿರುವುದರಿಂದ ಜನ ರೋಸಿ ಹೋಗಿದ್ದು ವಾಸ್ತವಂಶ ಬಯಲಾಗಲು ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿಯಿಂದ ಶಾಸಕರನ್ನು ಕೋರಿದಂತೆ ಶಾಸಕರು ಮುಖಾ ಮುಖಿಯನ್ನು ಏರ್ಪಡಿಸಿದ್ದರು.
ಕೋಡಿಬೈಲ್ ಸತ್ಯನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದ ನಂತರ ಶಾಸಕರಿಗೆ ಮನವಿ ಅರ್ಪಿಸಲಾಯಿತು. ಬಳಿಕ ಶಾಸಕ ಅಂಗಾರ ಅವರು ಆ ತನಕ ಕುರಿತಾಗಿ ಕೈಗೊಂಡ ಕ್ರಮಗಳನ್ನು ವಿವರಿಸಿ ಅಧಿಕಾರಿಗಳಿಗೂ ಪ್ರಗತಿಯನ್ನು ವಿವರಿಸಲು ಸೂಚಿಸಿದರು.
ಈ ಸಂದರ್ಭ ಮಾಹಿತಿ ನೀಡಿದ ಕೆ ಪಿ ಟಿ ಸಿ ಎಲ್ ಅಧಿಕಾರಿಗಳು ಈಗಾಗಲೇ ಎಲ್ಲಾ ಕೆಲಸ ಪೂರ್ತಿಯಾಗಿದೆ. ಶೇ.80 ರಿಂದ 90 ರಷ್ಟು ಕೆಲಸ ಆಗಿದೆ, ಸಣ್ಣಪುಟ್ಟ ಕೆಲಸವಾಗಿದೆ ಎಂದರು.
ಈ ಸಂದರ್ಭ ದಾಖಲೆ ಸಹಿತ ಅಧಿಕಾರಿಗಳನ್ನು ಪ್ರಶ್ನಿಸಿದ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ, ಮಾಡಾವಿನಲ್ಲಿ ಸ್ಟೇಷನ್ ಕೆಲವಂಶ ಕೆಲಸ ಮಾತ್ರ ಆಗಿರುತ್ತಿದ್ದು ಮತ್ತು ಲೈನ್ ವಿಚಾರ ಪೂರ್ಣ ನೆನೆಗುದಿಯಲ್ಲಿದೆ. ಮಾಡಾವು 110/33 ಕೇಂದ್ರ ತಾಂತ್ರಿಕ ಅಂತಿಮವಾಗಿ ನಾವೇ ಅಲ್ಲಿನ ಸ್ಥಳೀಯರ ಸಹಾಯದಿಂದ ಜಮೀನು ಮಂಜೂರುಗೊಳಿಸಿ ಅಂತಿಮವಾಗಿರುತ್ತದೆ. ನಂತರ ದೊಡ್ಡ ಸಾಧನೆಯೇನೂ ಆಗಿರುವುದಿಲ್ಲ. ಈಗ ಮೇಲ್ನೋಟಕ್ಕೆ ಕೆಲಸ ಆಗಿರುವ ಹಾಗೆ ಕಂಡರೂ ಅಲ್ಲಿ ಆದದ್ದು ದೊಡ್ಡ ಸಮ ತಟ್ಟು. ಕಂಪೌಂಡ್,
ಅರೆ ಬರೆ ಕಟ್ಟಡಗಳು, ಟವರ್ ಮಾತ್ರ. ಒಟ್ಟು ಯೋಜನೆಯ ಮೊತ್ತದ ಭಾಗಶ: ಮಾತ್ರ ಬೆಲೆ ಬಾಳುವ ಕೆಲಸಗಳು. ಅಲ್ಲಿಗೆ ಬೆಲೆ ಬಾಳುವ ಉಪಕರಣ ಯಾವುದೂ ಬಂದಿರುವುದಿಲ್ಲ. ಇನ್ನೊಂದು ಕಾರ್ಯನಿರ್ವಹಿಸುತ್ತಿರುವ 110 ಕೆ.ವಿ. ಸ್ಟೇಷನ್ ಇದರ ಜೊತೆ ತುಲನೆ ಮಾಡಿದರೆ ಮಾತ್ರ ಸತ್ಯ ಗೊತ್ತಾಗುತ್ತದೆ. ಅರೆ ಬರೆಯನ್ನೇ ತೋರಿಸಿ ನೀವು ಆಗಿದೆ ಎಂದು ಹೇಳುತ್ತಿರುವುದಾಗಿದೆ ಎಂದು ದಾಖಲೆ ಸಹಿತ ವಿವರಿಸಿದರು. ಹಾಗಿದ್ದರೂ ಇನ್ನು 2 ತಿಂಗಳಲ್ಲಿ ಉದ್ಘಾಟನೆ ಮಾಡಬಹುದು ಎಂದೂ ಹೇಳುತ್ತಿದ್ದೀರಿ, ಅದು ಹೇಗೆ ಎಂದು ಪ್ರಶ್ನಿಸಿದರು.ಇದೂ ಅಲ್ಲದೆ ಲೈನ್ ವಿಚಾರದಲ್ಲಿ ಅಗಾಧ ಸಮಸ್ಯೆ ಇದೆ. ಮಾನ್ಯ ಉಚ್ಚ ನ್ಯಾಯಾಲಯದಲ್ಲಿರುವ ಕೇಸುಗಳ ಕುರಿತು 2015 ರಿಂದ ವಾಯಿದೆ ಆಗುತ್ತಾ ಇದೆ ಎಂದು ಅಂಕಿ ಅಂಶ ದಾಖಲೆಗಳೊಂದಿಗೆ ವಿವರಿಸಿದಾಗ ಶಾಸಕರ ಮುಂದೆ ಅಧಿಕಾರಿಗಳು ಒಪ್ಪಿಕೊಂಡರು.
ಬಳಿಕ ಮಾತನಾಡಿದ ಜಯಪ್ರಸಾದ್ ಜೋಶಿ, ಈ ಬಗ್ಗೆ ಶಾಸಕರು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ದಾಖಲೆ ಅಂಕಿ ಅಂಶ ಸಹಿತ ಸಲಹೆ ನೀಡಿದರು.
“ಇಲಾಖಾ ಆಡಿಟ್ ವರದಿ 2012 ರ ಪ್ರಕಾರವೇ ಈ ಕಾಮಗಾರಿ ಜನವರಿ 2011 ರಲ್ಲಿ ಮುಗಿಯಬೇಕಾದ್ದು ಇಲಾಖೆಯ ಬೇಜವಾಬ್ದಾರಿ ಮತ್ತು ಮುಂದಾಲೋಚನೆ ಇಲ್ಲದೆ ಈಗಿನ ನಷ್ಟ ಬಹು ಕೋಟಿಯಾಗಿದ್ದು ಅಪ್ರಯೋಜಕ ಖರ್ಚು ಮಾಡಿದ್ದನ್ನು ಸರಕಾರಿ ಆಡಿಟರೇ ಬೆಟ್ಟು ತೋರಿಸಿದ್ದಾರೆ. ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಈ ಕುರಿತು ಇರುವ ರಿಟ್ ಪಿಟಿಷನ್‍ಗಳಲ್ಲಿ ಇಲಾಖಾ ವತಿಯಿಂದ ಮುತುವರ್ಜಿತನದ ಕೆಲಸಗಳಾಗುತ್ತಿಲ್ಲ. ಈ ಕಾಮಗಾರಿಯ ಗುತ್ತಿಗೆದಾರರು ಮುತುವರ್ಜಿಯಿಂದ ಕೆಲಸ ನಿರ್ವಹಿಸದೆ ಕಾಮಗಾರಿಗಳು ಇಷ್ಟು ವಿಳಂಬವಾದರೂ ಈ ತನಕ ಕ್ರಮ ಕೈಗೊಳ್ಳುವ ಬಗ್ಗೆ ಗುತ್ತಿಗೆದಾರರಿಗೆ ನೋಟಿಸು ಜ್ಯಾರಿಯಾಗಿಲ್ಲ. ಅರಣ್ಯ ಇಲಾಖೆಯವರು ಡಿಮಾಂಡ್ ನೋಟ್ ಜ್ಯಾರಿ ಮಾಡಿದ್ದರೂ ಕೆ.ಪಿ.ಟಿ.ಸಿ.ಎಲ್ ವತಿಯಿಂದ ಹಣ ಪಾವತಿಗೆ ವ್ಯವಸ್ಥೆಗಳಾಗದೆ ವಿಳಂಬವಾಗುತ್ತಿದೆ. ಇದರಿಂದ ಕಾಮಗಾರಿಗೆ ಮತ್ತಷ್ಟು ಅಡ್ಡಿಯಾಗುತ್ತಿದೆ. ಇಲಾಖಾಧಿಕಾರಿಗಳು ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ಈಗಲೂ ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದು 21.06.2019ಕ್ಕೆ ನೀಡಿದ ಮಾಹಿತಿ ಪ್ರಕಾರ 30.06.2019ಕ್ಕೇ ಕಾಮಗಾರಿ ಮುಗಿಯಬೇಕಿತ್ತು ಇತ್ಯಾದಿ ಎಳೆ ಎಳೆಯಾಗಿ ವಿವರಿಸಿ ಈ ಎಲ್ಲದರ ಬಗ್ಗೆ ತನಿಖೆ ನಡೆಸಲು ಕ್ರಮ ವಹಿಸಬೇಕಾಗಿದೆ ಎಂದರು.
ಶಾಸಕರು ಈ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವ ಮತ್ತು ಅಧಿವೇಶನದಲ್ಲಿ ಆಡಿಟ್ ವರದಿ ಬಗ್ಗೆ ಪ್ರಸ್ಥಾಪಿಸುವ ಮತ್ತು ಈ ಬಹು ಕೋಟಿ ನಷ್ಟಕ್ಕೆ ಹೊಣೆಗಾರಿಕೆ ನಿಗದಿಪಡಿಸುವ
ಭರವಸೆ ನೀಡಿದರು.
ಈ ಸಂದರ್ಭ ಕೆ.ಪಿ.ಟಿ.ಸಿ.ಎಲ್ ಅಧೀಕ್ಷಕ ಅಭಿಯಂತರರು ರವಿಕಾಂತ ಕಾಮತ್, ಕಾರ್ಯನಿರ್ವಾಹಕ ಅಭಿಯಂತರ ಗಂಗಾಧರ್ ಮತ್ತಿತರ ಅಧಿಕಾರಿಗಳು ವಿದ್ಯುತ್ ಕ್ರಿಯಾ ಸಮಿತಿ ನಿರ್ದೇಶಕರುಗಳಾದ ಕೋಡಿಬೈಲು ಸತ್ಯನಾರಾಯಣ ಭಟ್, ರಮೇಶ್ ಕೋಟೆ, ಗೋಪಾಲಕೃಷ್ಣ ಭಟ್, ಸುರೇಶ್ಚಂದ್ರ ಕಲ್ಮಡ್ಕ, ಪಿ.ಜಿ.ಎಸ್.ಎನ್ ಪ್ರಸಾದ್, ಉಡುವೆಕೋಡಿ
ರಾಧಾಕೃಷ್ಣ ಭಟ್, ವಿಶ್ವನಾಥ ಅಲೆಕ್ಕಾಡಿ, ರವಿ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.