ಸುಳ್ಯ: ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 13ನೇ ನೂತನ ಶಾಖೆಯು ಕಡಬ ತಾಲೂಕಿನ ನೆಲ್ಯಾಡಿಯ ಶ್ರೀ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ನ.24ರಂದು ಶುಭಾರಂಭಗೊಂಡಿತು.
ದೀಪಪ್ರಜ್ವಲನೆ ಮಾಡಿ ಸಮಾರಂಭವನ್ನು ಉದ್ಘಾಟಿಸಿ, ಬೆಳ್ತಂಗಡಿಯ ನೆರೆ ಸಂತ್ರಸ್ತರಿಗೆ ಪರಿಹಾರ ಧನ ವಿತರಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಂಗಳೂರು
ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿಯವರು ‘ಸಹಕಾರ ಸಂಘಗಳು ಸಮಾಜದ ಅಭಿವೃದ್ಧಿಗೆ ಪೂರಕ. ಸೊಸೈಟಿಯ ಸೇವೆ ಎಲ್ಲೆಡೆ ಪಸರಿಸಬೇಕು. ಸಂಘ ತನ್ನ ಅಭಿವೃದ್ಧಿಯೊಂದಿಗೆ ನೊಂದವರ ಕಣ್ಣೀರನ್ನು ಒರೆಸಿದೆ. ಸಂತ್ರಸ್ತರಿಗೆ ಪರಿಹಾರ ನೀಡಿ ಸಮಾಜಕ್ಕೆ ಮಾದರಿಯಾಗಿದೆ. ಸದೃಢ ಆಡಳಿತ ಮಂಡಳಿಯ ಅನುಭವವೇ ವೆಂಕಟರಮಣ ಸೊಸೈಟಿಯ ಅಭಿವೃದ್ಧಿಗೆ ಕಾರಣವಾಗಿದೆ’ ಎಂದರು.
ನೂತನ ಶಾಖಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ‘ವೆಂಕಟರಮಣ ಸೊಸೈಟಿ ಸಾಧನೆಯ ಛಲ ಹೊಂದಿದೆ. ವ್ಯಕ್ತಿಯ ಆರ್ಥಿಕತೆಯ ಬಲವರ್ಧನೆಗೆ ಸಹಕಾರಿ ಸಂಘಗಳು ಅವಶ್ಯ. ಆ ನಿಟ್ಟಿನಲ್ಲಿ ಸೊಸೈಟಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ ವಿಸ್ತಾರವಾಗಿ ಬೆಳೆದಿರುವುದು ಶ್ಲಾಘನೀಯ’ ಎಂದರು.
ಸೊಸೈಟಿಯ ಅಧ್ಯಕ್ಷ ಕೆ.ಸಿ.ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಗಣಕೀರಣವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಉದ್ಘಾಟಿಸಿದರು. ಪ್ರಥಮ ಠೇವಣಿ ಪತ್ರ ವಿತರಣೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ, ಪ್ರಥಮ ಪಾಲು ಪತ್ರವನ್ನು ಜಿಲ್ಲಾ ಉಪನಿಬಂಧಕ ಪ್ರವೀಣ್ ನಾಯಕ್, ಪ್ರಥಮ ಸಾಲಪತ್ರವನ್ನು ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿ, ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು ಉದ್ಯಮಿ ಕುಶಾಲಪ್ಪ ಗೌಡ ಪೂವಾಜೆ ವಿತರಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯೆ ಉಷಾ ಅಂಚನ್, ಪುತ್ತೂರು ಎ.ಪಿ.ಎಂ.ಸಿ. ಸದಸ್ಯ ಬಾಲಕೃಷ್ಣ ಬಾಣಜಾಲು, ಉದ್ಯಮಿ ಕೆ.ಪಿ. ತೋಮಸ್, ಗಣೇಶ್ ಕಾಂಪ್ಲೆಕ್ಸ್ ಮಾಲಕ ನೆಲ್ಯಾಡಿ ರಾಮಣ್ಣ ಗೌಡ ಭಾಗವಹಿಸಿದ್ದರು.
ಸೊಸೈಟಿಯ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ಚಂದ್ರಾ ಕೋಲ್ಚಾರ್, ಪಿ.ಸಿ.ಜಯರಾಮ, ಸದಾನಂದ ಜಾಕೆ, ಲಕ್ಷ್ಮೀನಾರಾಯಣ ನಡ್ಕ, ದಾಮೋದರ ನಾರ್ಕೋಡು, ಕೆ.ಸಿ.ಸದಾನಂದ, ಲತಾ ಎಸ್.ಮಾವಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೊಸೈಟಿಯ ಉಪಾಧ್ಯಕ್ಷ ಪಿ.ಎಸ್ ಗಂಗಾಧರ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ ವಂದಿಸಿದರು. ನಿರ್ದೇಶಕ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.