ಸುಳ್ಯ: ಸಂಪಾಜೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಮುಂಡಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಸಭೆ ಸಮಾರಂಭಗಳ ಕಸ, ಪ್ಲಾಸ್ಟಿಕ್ ವಸ್ತುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯುವವರ ಮೇಲೆ ದಂಡನೆ ವಿಧಿಸಲು ನರ್ಧರಿಸಲಾಯಿತು. ಬಂಟೋಡಿ ಮುಳ್ಳುಕುಂಜ ಗುಂಪು ಮನೆಗಳಿಗೆ ಕುಡಿಯುವ ನೀರಿನ ಹೊಸ ಬೋರ್‌ವೆಲ್ ವ್ಯವಸ್ಥೆಗೆ, ಸಾರ್ವಜನಿಕ ಕುಡಿಯುವ ನೀರಿನ ಬಾವಿಗಳಾದ ದಂಡೆಕಜೆ, ಕೀಲಾರುಮೂಲೆ, ಕಲ್ಲುಗುಂಡಿ, ಪೇರಡ್ಕ, ದರ್ಖಾಸ್ತು ಬಾವಿಗಳ ಹೂಳೆತ್ತಲು ಜಿಲ್ಲಾ ಪಂಚಾಯತ್‌ಗೆ ಬರೆಯಲು ನಿರ್ಧರಿಸಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಅಲೆಮಾರಿ ದನಗಳು ಹೆಚ್ಚಾಗಿದ್ದು, ಸಾರ್ವಜನಿಕರು ಅವರವರ ದನಗಳನ್ನು ಸಾರ್ವಜನಿಕ ಸ್ಥಳಗಳಿಗೆ ರಸ್ತೆಗಳಿಗೆ ಬಿಡುವಂತಿಲ್ಲ. ದನಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಲು ಸೂಚನೆ ನೀಡಲು ನಿರ್ಧರಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಗೆ ದನಗಳು ಬಂದು ಅಪಾಯ ಸಂಭವಿಸುವುದರಿಂದ ಅಂತಹ ದನಗಳನ್ನು ಹಿಡಿದು ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. 2018-19 ನೇ ಸಾಲಿನಲ್ಲಿ 20 ಮನೆಗಳು ಮಂಜೂರಾಗಿದ್ದು, ಮಂಜೂರಾದ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿರುವುದಿಲ್ಲ. ಹಾಗೂ ಹೊಸ ಮನೆ ಇವರಿಗೆ ಬಂದಿಲ್ಲ, ಬಡವರಿಗೆ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ, ಈ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ತಿಳಿಸಲು ನಿರ್ಧರಿಸಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಬಾರದ ರೀತಿಯಲ್ಲಿ ವ್ಯಾಪಾರ ಮಾಡುವಂತೆ ತಿಳುವಳಿಕೆ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಗ್ರಾಮ ಪಂಚಾಯತ್‌ನ ಮನೆತೆರಿಗೆ, ವ್ಯಾಪಾರ ಪರವಾನಿಗೆ, ಸ್ವಚ್ಚತಾ ಕರ, ನೀರಿನ ಕರ, ಕಟ್ಟುನಿಟ್ಟಾಗಿ ವಸೂಲಿ ಮಾಡುವುದು, ಈ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಬೀದಿಗಳಲ್ಲಿ ಕಸ ಎಸೆಯುವ ಬಗ್ಗೆ ದ್ವನಿವರ್ಧಕದ ಮೂಲಕ ಪ್ರಚಾರಪಡಿಸುವುದು ಎಂದು ತೀರ್ಮಾನಿಸಲಾಯಿತು. ಸಂಪಾಜೆ ಗ್ರಾಮ ಪಂಚಾಯತ್ ಜಲಾಮೃತ ಯೋಜನೆಯಡಿ ಆಯ್ಕೆಯಾಗಿದ್ದು ಈ ಯೋಜನೆಯಡಿ ಕೃಷಿಕರಿಗೆ ತಡೆಗೋಡೆ, ಕಿಂಡಿ ಅಣೆಕಟ್ಟು ಇನ್ನಿತರ ಯೋಜನೆ ಜಾರಿಯಲ್ಲಿದ್ದು, ಕೃಷಿ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಲು ಸಭೆಯಲ್ಲಿ ಸೂಚಿಸಲಾಯಿತು.
ಈ ಸಭೆಯಲ್ಲಿ ಸದಸ್ಯರಾದ ಯಶೋದ ಕೆ.ಕೆ, ಆಶಾ ಎಂ.ಕೆ, ಲೆತಿಶ್ಯಾ ಡಿಸೋಜ, ಹಮೀದ್ ಜಿ.ಕೆ, ಸೋಮಶೇಖರ್ ಕೊಯಿಂಗಾಜೆ, ಅಬುಶಾಲಿ ಪಿ.ಕೆ, ನಾಗೇಶ್ ಪಿ.ಆರ್, ಷಣ್ಮುಗಂ ಎಸ್. ಭಾಗವಹಿಸಿದ್ದರು.