ಸಂಪಾಜೆ ಘಾಟಿಯಲ್ಲಿ ಗಕ್ಕನೆ ಕಾರು ನಿಲ್ಲಿಸಿದೆ!!

May 6, 2019
5:00 PM

ಸುಳ್ಯ ಸಂಪಾಜೆ ರಸ್ತೆಯಲ್ಲಿನ ಘಾಟಿ ಪ್ರದೇಶದ ಇಂದಿನ ಚಿತ್ರಣವನ್ನು ಡಾ.ಮೋಹನ  ತಲಕಾಲುಕೊಪ್ಪ ಕಟ್ಟಿಕೊಟ್ಟಿದ್ದಾರೆ. ಅದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಿದ್ದೇವೆ.  ಆಡಳಿತ ವ್ಯವಸ್ಥೆ ಮಾಡಬೇಕಾದ ಮುಂಜಾಗ್ರತಾ ಕಾರ್ಯದ ಬಗ್ಗೆ ಸಲಹೆಯನ್ನು ನಾವು ಇಲ್ಲಿ ಕಂಡಿದ್ದೇವೆ. ಆಡಳಿತ ವ್ಯವಸ್ಥೆಗಳು, ಜನಪ್ರತಿನಿಧಿಗಳು ಇದನ್ನು ಗಮನಿಸಬೇಕು, ಹಾಗೂ ಈಗಲೇ ಸೂಕ್ತವಾದ ಮುಂಜಾಗ್ರತಾ ಕ್ರಮ ಆಗಬೇಕು ಎಂಬುದು “ಸುಳ್ಯನ್ಯೂಸ್.ಕಾಂ” ಆಶಯ

Advertisement
Advertisement

ತಿರುವಿನ ಎದುರಿಗಿತ್ತು ಛಿದ್ರವಾದ ಮನೆಯ ಗೇಟು!! ಉದ್ದಕ್ಕೆ ಬಿದ್ದಿರುವ ಬೃಹದಾಕಾರದ ಮರದ ದಿಮ್ಮಿಗಳು, ಗುಡ್ಡ ಕುಸಿದು ಶೇಖರಣೆಯಾದ ಅಗಾಧ ಪ್ರಮಾಣದ ಮಣ್ಣು! ಕಣ್ಣು ಹಾಯಿಸಿದರೆ ದೂರದ ಗಿರಿಶಿಖರಗಳಿಂದ ಕಣಿವೆಗುಂಟ ಭೂಕುಸಿತದ ಗುರುತು!

Advertisement

ಗೇಟೊಂದು ಬಿಟ್ಟರೆ ಮನೆ ಇರುವ ಯಾವ ಕುರುಹೂ ಇಲ್ಲದಂತೆ ಬೆಳೆ, ನೆಲೆ ಹಾಗೂ ಬದುಕೇ ಕೊಚ್ಚಿಹೋಗಿದೆ. ಆ ಮನೆಯವರೆಲ್ಲಿದ್ದಾರೋ? ಬದುಕುಳಿದಿದ್ದರೆ ಅವರ ಅಂತರಂಗದಲ್ಲಿ ಅದೆಷ್ಟು ದು:ಖ ಮಡುಗಟ್ಟಿರಬಹುದು? ಆ ಭೂಮಿಯಲ್ಲಿ ಮೊಳೆತ ಅವರ ನೆನಪುಗಳಿಗೆ ಸಾವಿಲ್ಲವಲ್ಲ! ಅದು ಹೇಗೆ ಸರ್ವಸ್ವವನ್ನು ಕಳೆದುಕೊಂಡು ಬೀದಿಗೆ ಬಂದು ಮತ್ತೆ ಮೊದಲಿನಿಂದ ಬದುಕು ಕಟ್ಟಿಕೊಳ್ಳುತ್ತಿರಬಹುದು? ಒಂದು ಕ್ಷಣ ನೆನೆಸಿಕೊಂಡರೆ ‘ಓ ದೇವರೇ’ ಎನಿಸುತ್ತದೆ. ಎಂಥಾ ದುರ್ಭರ ಸ್ಥಿತಿ! ಛೆ! ಕೇಳೋಣವೆಂದರೆ ಯಾರಿದ್ದಾರೆ ಅಲ್ಲಿ??

ಪುತ್ತೂರಿನಿಂದ ಮಡಿಕೇರಿಗೆ ಹೋಗಿದ್ದೆ. ಕೊಡಗಿನ ಜಲಪ್ರಳಯದ ದುರಂತವಾದ ಮೇಲೆ ಇದೇ ಮೊದಲು ಹೋಗಿದ್ದು. ಸಂಪಾಜೆಯಿಂದ ಮೇಲೆ ದೇವರಕೊಲ್ಲಿ, ಮದೆನಾಡು ಪ್ರದೇಶಗಳಲ್ಲಿ ಆಗಿರುವ ಅಗಾಧ ಅನಾಹುತದ ಕುರುಹುಗಳು ದಾರಿಗುಂಟ ಢಾಳಾಗಿಯೇ ಕಾಣುತ್ತವೆ. ಯಾರೋ ರಕ್ಕಸ ಗಾತ್ರದ ಗುದ್ದಲಿ ತೆಗೆದುಕೊಂಡು ಗುಡ್ಡಗಳನ್ನು ನಿರ್ದಯವಾಗಿ ಕೊಚ್ಚಿದ ಹಾಗೆ ಕಾಣುತ್ತದೆ!!

Advertisement

 


ಆ ಕ್ಷಣಕ್ಕೆ ಭೂಕಂಪನ, ಹಸಿರಿನ ನಾಶ, ನಿರಂತರ ವರ್ಷಧಾರೆ ಎಲ್ಲವೂ ಸೇರಿ ಹೀಗೆ ಆಗಿರಬಹುದು ಎನ್ನುವ ಅಲೋಚನೆ ಸುಳಿದು ಹೋಯಿತು.

Advertisement

ಇಲ್ಲಿ ರಸ್ತೆಯನ್ನು ಹೊಸದಾಗಿ ನಿರ್ಮಿಸಲು ಕೋಟಿಗಟ್ಟಲೆ ಖರ್ಚಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಇನ್ನೂ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ. ಹಲವು ತಿರುವುಗಳಲ್ಲಿ ಮರಳ ಚೀಲಗಳನ್ನು ಧರೆ ಹಾಗೂ ರಸ್ತೆ ಕುಸಿಯದಂತೆ, ಪೇರಿಸಿಟ್ಟಿದ್ದಾರೆ. ಇಲ್ಲಿಯೇ ಇಷ್ಟು ಭಾನಗಡಿಯಾಗಿದೆ ಅಂದರೆ ಮಿತ್ರ ಶಿವಕುಮಾರ್ ಮಡಿಕೇರಿ ಹೇಳುವಂತೆ ಗರಿಷ್ಠ ಪ್ರಮಾಣದ ಹಾನಿಯಾದ ಸೋಮವಾರ ಪೇಟೆಯ ದಾರಿಯಲ್ಲಿ ಹೇಗಿದ್ದೀತು? ಕೊಡಗಿನ ಮೂಲೆ-ಮೂಲೆಯ ಹಾನಿಗೊಳಗಾದ ಪ್ರದೇಶಗಳಲ್ಲಿ ಇದಕ್ಕಿಂತ ಭಿನ್ನವಾದ ಸ್ಥಿತಿ ಇರಲಿಕ್ಕಿಲ್ಲ.

ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಶಿವಕುಮಾರ್ ಹೇಳುತ್ತಾರೆ “ಮಂಗಳೂರು- ಮಡಿಕೇರಿ ರಸ್ತೆ ಉತ್ತಮವಾಗಿ ಪುನರ್ ನಿರ್ಮಾಣವಾಗಿದೆ. ಆದರೆ ಉಳಿದೆಡೆಗಳಲ್ಲಿ ರಸ್ತೆಗಳನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಿದ್ದಾರೆ. ಪುನರ್ವಸತಿ ಕೆಲವು ಜನರಿಗೆ ಆಮೆಗತಿಯಲ್ಲಿ ಸಾಗುತ್ತಿದೆ. ನೇರವಾಗಿ ತೊಂದರೆಯಾದವರು ಒಂದು ಕಡೆಯಾದರೆ, ಹೆಚ್ಚು ತೊಂದರೆಗೊಳಗಾದ ಪ್ರದೇಶದ ಅವಲಂಬಿತರು ( ವ್ಯಾಪಾರಸ್ಥರು, ಸಾಮಾನು ಸಾಗಣೆ ಮಾಡುವವರು, ಕೂಲಿ ಕಾರ್ಮಿಕರು ಇತ್ಯಾದಿ) ಬಹಳ ಕಷ್ಟ ಪಡುತ್ತಿದ್ದಾರೆ. ಕೊಡಗಿನ ಆರ್ಥಿಕತೆ ಕುಸಿದಿದೆ. ಸುಮಾರು 30 ಹಳ್ಳಿಗಳು (7 ಪಂಚಾಯತ್ ಗಳಿಗೆ ಸೇರಿದ) ಭೂಕುಸಿತದಿಂದ ಬಹಳ ತೊಂದರೆಗೊಳಗಾಗಿವೆ. ಆದರೆ ಕೊಡಗಿನಾದ್ಯಂತ ತೊಂದರೆಯಾದ್ದರಿಂದ ಇವು ಮಾಧ್ಯಮಗಳ ಕಣ್ಣಿಗೆ ಬಿದ್ದಿಲ್ಲ. ಕೊಡಗಿನ ಪ್ರವಾಸೋದ್ಯಮ ಮತ್ತು ರಿಯಲ್ ಎಸ್ಟೇಟ್ ನೆಲಕಚ್ಚಿದೆ. ಹಲವರಿಗೆ ಬೆಳೆ, ಆಸ್ತಿ ನಷ್ಟವಾದಷ್ಟು ಪರಿಹಾರ ಸಿಕ್ಕದಿದ್ದರೂ, ಸ್ವಲ್ಪಮಟ್ಟಿಗೆ ಸಿಕ್ಕಿದೆ

Advertisement

ಈ ಪ್ರದೇಶದಲ್ಲಿ ಈಗ ಗಿಡ, ಮರ, ಹುಲ್ಲಿನ ಹೊದಿಕೆಯಿಲ್ಲದೆ ಮಳೆ, ಗಾಳಿ, ಸೂರ್ಯನಿಗೆ ತೆರೆದುಕೊಂಡ ಕೆಂಪನೆ ಮಣ್ಣಿನ ವಿಸ್ತಾರ ಪ್ರದೇಶವನ್ನು ನೋಡಿದರೆ ಭಯವಾಗುತ್ತದೆ. ಬರುವ ಮಳೆಗಾಲದಲ್ಲಿ ಒಂದಿಷ್ಟು ಮಳೆ ಹೆಚ್ಚಾದರೂ ಅಪಾಯ ಕಟ್ಟಿಟ್ಟ ಬುತ್ತಿ. ತಕ್ಷಣಕ್ಕೆ ಅಷ್ಟು ಅಗಾಧ ಪ್ರದೇಶದಲ್ಲಿ ಹಸಿರೆಬ್ಬಿಸುವ ಬಗೆ ಹೇಗೆ?? ಪ್ರಕೃತಿಯೇ ಕಾಯಬೇಕು!. ನಾವೂ ಕಾಯಬೇಕು!!

Advertisement

ಆದರೆ ಇನ್ನಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿಯದಂತೆ, ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಇಲ್ಲಿ ಸಾಕಷ್ಟು ಕೆಲಸವಿದೆ. ಆದರೆ, ಚುನಾವಣೆಯ ಭರಾಟೆಯಲ್ಲಿ ಎಲ್ಲವೂ ಇಲ್ಲಿನ ಹಾಗೆ ಅಡಿಮೇಲಾದಂತೆ ಅನಿಸುತ್ತದೆ (ಇದು
ನನಗನ್ನಿಸಿದ ಹೊರಗಿನ ನೋಟ ಅಷ್ಟೆ) ಕೇಳಲು,ಹೇಳಲು ಯಾರಿಗಾದರೂ ಪುರುಸೊತ್ತಿದೆಯಾ ಅಂತ ಅಲ್ಲಿನ ಪತ್ರಕರ್ತ ಮಿತ್ರರೇ ಹೇಳಬೇಕು. ಮಳೆ ಶುರುವಾಗಲು ಈಗಿರುವ ಇನ್ನೊಂದು ತಿಂಗಳು ಬಹಳ ಅಮೂಲ್ಯ. ಈಗ ಸಮರೋಪಾದಿಯಲ್ಲಿ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂತಹ ಕೆಲಸ, ಅರ್ಧಂಬರ್ಧ ಆಗಿರುವ ಮನೆಗಳ ಮುಕ್ತಾಯ ಇವನ್ನೆಲ್ಲ ಮಾಡಬೇಕು. ಇದಕ್ಕೆ ಜನರ, ಜನಪ್ರತಿನಿಧಿಗಳ, ಮಾಧ್ಯಮ ಮಿತ್ರರ ಸಹಾಯ ಅತ್ಯಗತ್ಯ. ರಾಜ್ಯಮಟ್ಟದ ಇಂಗ್ಲೀಷ್ ಮತ್ತು ಕನ್ನಡ ದಿನಪತ್ರಿಕೆಗಳಲ್ಲಿ ಇದರ ಬಗ್ಗೆ, ಈಗಿನ ಸ್ಥಿತಿಯ ಬಗ್ಗೆ ವಿಸ್ತೃತ ವರದಿ ಬರಬೇಕು ಅಂತ ನನ್ನನಿಸಿಕೆ.  (ಯಾಕೆಂದರೆ ಸ್ಥಳೀಯ ಪತ್ರಿಕೆಗಳನ್ನು ಹೊರತುಪಡಿಸಿದರೆ ರಾಜ್ಯ ಮಟ್ಟದ ಪತ್ರಿಕೆಗಳು ಅಷ್ಟಾಗಿ ಈಗಿನ ಸ್ಥಿತಿಯ ಬಗ್ಗೆ ಕಣ್ಣು ಹಾಯಿಸಿಲ್ಲ).

ಆದರೂ ಈ ಮಳೆಗಾಲದಲ್ಲಿ ಏನೂ ವೈಪರೀತ್ಯಗಳಾಗದಿರಲಿ. ರುಧಿರ ಸದೃಶ‍‍ ನೆಲದಲ್ಲಿ ಹಸಿರು ಚಿಮ್ಮಿ ಬರಲು ಬೇಕಾದಷ್ಟೇ ಮಳೆ ಬರಲಿ.ಇದು ಹೃದಯಾಂತರಾಳದ ಹಾರೈಕೆ.

Advertisement

 

  • ಡಾ. ಮೋಹನ್ ತಲಕಾಲುಕೊಪ್ಪ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತ ಬದ್ಧವಾಗಿದೆ
September 14, 2024
2:25 PM
by: ದ ರೂರಲ್ ಮಿರರ್.ಕಾಂ
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ | ಕೇಂದ್ರ ಸಚಿವ ಸಂಪುಟ ಅನುಮೋದನೆ
September 14, 2024
12:16 PM
by: ದ ರೂರಲ್ ಮಿರರ್.ಕಾಂ
ಹಬ್ಬದ ಸಮಯದಲ್ಲಿ ಆಹಾರ ಕಲಬೆರಕೆಯಾಗದಂತೆ ತಪಾಸಣೆಗೆ ಸೂಚನೆ
September 14, 2024
11:50 AM
by: ದ ರೂರಲ್ ಮಿರರ್.ಕಾಂ
ಹಸಿರು ಜಲಜನಕ – 2024 ಅಂತಾರಾಷ್ಟ್ರೀಯ ಸಮಾವೇಶ | ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು ಗುರಿ
September 13, 2024
9:57 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror